ಮಡಿಕೇರಿ: ಕಾರ್ಯಾಚರಣೆ ವೇಳೆ ಕಾಡಾನೆ ಸಾವು

Update: 2023-01-13 13:02 GMT

ಮಡಿಕೇರಿ ಜ.13 : ಕಾಡಾನೆ ಸೆರೆ ಕಾರ್ಯಾಚರಣೆಯ ಸಂದರ್ಭ ಕಾಡಾನೆಯೊಂದು ಬಿದ್ದು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಅತ್ತೂರು ನಲ್ಲೂರು ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ಕಾಫಿ ತೋಟವೊಂದರಲ್ಲಿ ಸೆರೆ ಸಿಕ್ಕ 20 ವರ್ಷದ ಗಂಡಾನೆಯನ್ನು ಸಾಕಾನೆಗಳ ಸಹಾಯದಿಂದ ಸ್ಥಳಾಂತರಿಸುವ ಸಂದರ್ಭ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  

ಅತ್ತೂರು ನಲ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದರಿಂದ ಕಳೆದ 3 ದಿನಗಳಿಂದ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್, ಹರ್ಷ, ಸುಗ್ರೀವ, ಶ್ರೀರಾಮ ಹಾಗೂ ಲಕ್ಷ್ಮಣ ಎಂಬ 5 ಸಾಕಾನೆಗಳ ಸಹಕಾರ ಪಡೆಯಲಾಗಿತ್ತು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಂಜನ್, ಇಲಾಖೆಯ ವೈದ್ಯರಾದ ಡಾ.ಚಿಟ್ಟಿಯಪ್ಪ ಮತ್ತು ಡಾ. ರಮೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದಿದ್ದರು.

ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ಮೋದೂರು ತೋಟವೊಂದರಲ್ಲಿ ಪುಂಡಾನೆ ಬೀಡು ಬಿಟ್ಟಿರುವುದನ್ನು ಕಾರ್ಯಾಚರಣೆ ತಂಡ ಗುರುತಿಸಿತು. ಬಳಿಕ ಡಾ.ರಮೇಶ್ ಅವರು ಕಾಡಾನೆಯ ಮೇಲೆ ಅರಿವಳಿಕೆಯನ್ನು ಪ್ರಯೋಗಿಸಿದರು. ಈ ಸಂದರ್ಭ ಸುಮಾರು 500 ಮೀಟರ್ ದೂರವರೆಗೆ ಓಡಿದ ಪುಂಡಾನೆ, ಇಳಿಜಾರು ಪ್ರದೇಶದಲ್ಲಿದ್ದ ತೋಟದ ಸಿಮೆಂಟ್ ಕಾಫಿ ಕಣಕ್ಕೆ ಪ್ರಜ್ಞೆತಪ್ಪಿ ಬಿದ್ದಿದೆ.

ನಂತರ ಚೇತರಿಸಿಕೊಂಡ ಕಾಡಾನೆಯನ್ನು ಕಾಫಿ ತೋಟ ಮಾರ್ಗವಾಗಿ ಸುಮಾರು 100 ಮೀಟರ್ ದೂರಕ್ಕೆ ಕರೆತಂದ ಸಂದರ್ಭ ಏಕಾಏಕಿ ಕುಸಿದು ಬಿದ್ದಿದೆ. ತಕ್ಷಣವೇ ಇಲಾಖೆಯ ನುರಿತ ವೈದ್ಯರಾದ ಡಾ.ಚಿಟ್ಟಿಯಪ್ಪ ಹಾಗೂ ಡಾ.ರಮೇಶ್ ಅವರು ಕಾಡಾನೆಗೆ ಚಿಕಿತ್ಸೆ ನೀಡಲು ಮುಂದಾದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾಡಾನೆ ಮೃತಪಟ್ಟಿತು. ನಂತರ ಮೃತ ಕಾಡಾನೆಯ ಕಳೇಬರವನ್ನು ಕ್ರೇನ್ ಸಹಾಯದಿಂದ ಲಾರಿಯಲ್ಲಿ ತುಂಬಿ ಮೀನುಕೊಲ್ಲಿ ಅರಣ್ಯಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸಿಎಫ್ ಗೋಪಾಲ್, ಅರವಳಿಕೆ ನೀಡಿದ ಬಳಿಕ ಓಡಿದ ಕಾಡಾನೆ ಕಾಫಿ ಕಣದಲ್ಲಿ ಬಿದ್ದಿದೆ. ಈ ವೇಳೆ ಉಂಟಾದ ಆಂತರಿಕ ಗಾಯ ಮತ್ತು ರಕ್ತಸ್ರಾವದಿಂದಾಗಿ ಕಾಡಾನೆ ಸಾವನ್ನಪ್ಪಿರುವ ಶಂಕೆ ಇದೆ. ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಮರಣೋತ್ತರ ಪರೀಕ್ಷಾ ವರದಿಯನ್ನು ಸರಕಾರಕ್ಕೂ ಸಲ್ಲಿಸಲಾಗುತ್ತದೆ ಎಂದು ಹೇಳಿದರು. 

Similar News