ವಿಗ್ ತೆಗೆದು, ಮೀಸೆ ಬೋಳಿಸಿಕೊಂಡು ತಲೆ ಮರೆಸಿಕೊಂಡಿದ್ದ ಸ್ಯಾಂಟ್ರೊ ರವಿ: ಪೊಲೀಸರ ಕಾರ್ಯಾಚರಣೆ ಹೇಗಿತ್ತು?

Update: 2023-01-13 14:36 GMT

ಮೈಸೂರು: ದಲಿತ ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ  ರಾಜ್ಯಾದ್ಯಂತ ಸುದ್ದಿಯಲ್ಲಿದ್ದ ಸ್ಯಾಂಟ್ರೊ ರವಿ ಅಲಿಯಾಸ್ ಕೆ.ಎಸ್.ಮಂಜುನಾಥ್ ನನ್ನು  ಕೊನೆಗೂ ಮೈಸೂರು ಪೊಲೀಸರು  ಶುಕ್ರವಾರ ಗುಜರಾತ್ ನ ಅಹಮದಾಬಾದ್ ನಲ್ಲಿ ಶುಕ್ರವಾರ ಬಂಧಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ  ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಸ್ಯಾಂಟ್ರೊ ರವಿ ಅಲಿಯಾಸ್ ಮಂಜುನಾಥ್ ಕೆ.ಎಸ್. ಎಂಬಾತನನ್ನು ಶುಕ್ರವಾರ ಮಧ್ಯಾಹ್ನ ಗುಜರಾತ್  ನ ಅಹಮದಾಬಾದ್ ನಗರದಲ್ಲಿ ನಮ್ಮ ವಿಶೇಷ ಪೊಲೀಸರ ತಂಡ ಬಂಧಿಸಿದೆ. ಇವನ ಜೊತೆಯಲ್ಲಿದ್ದ ಮೈಸೂರಿನ ಶೃತೇಶ್, ಗುಜರಾತ್ ಮೂಲದ ಕೊಚ್ಚಿಯ ನಿವಾಸಿ ರಾಮ್ ಜಿ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಈ ಮೊದಲು ಸ್ಯಾಂಟ್ರೊ ರವಿಯೊಂದಿಗೆ ಸಂಪರ್ಕದಲ್ಲಿದ್ದ ಮಧುಸೂದನ್ ಎಂಬಾತನನ್ನು ಬಂದಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಸ್ಯಾಂಟ್ರೊ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಜ.2 ರಂದು ಪ್ರಕರಣ ದಾಖಲಾಗಿತ್ತು. ಇದರ ನಂತರ ಪೊಲೀಸ್ ಇಲಾಖೆಯ ಅಧಿಕಾರಗಳೊಂದಿಗೆ ಈತ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಕೂಡ ಕೇಳಿ ಬಂದು ಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಪ್ರಾರಂಭವಾಗುತ್ತಿದ್ದಂತೆ, ನಾಲ್ಕು ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಿ ಈತನ ಪತ್ತೆಗೆ ಬಲೆ ಬೀಸಲಾಯಿತು. ಆದರೆ ಈತ ಮೊದಲೆ ಕ್ರಿಮಿನಲ್ ಆಗಿರುವುದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಚಾಲಕಿತನವನ್ನು ಹೊಂದಿ ತಲೆ ಮರೆಸಿಕೊಂಡಿದ್ದ ಎಂದರು.

ಈತನ ಬೆಂಗಳೂರಿನ ಮನೆ, ಮೈಸೂರಿನ ದಟ್ಟಗಳ್ಳಿಯಲ್ಲಿರುವ ಮನೆಯನ್ನು ಶೋಧ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಯಿತು. ಈತ ಆಂಧ್ರ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಚರಿಸಿ, ದಿನಕ್ಕೊಂದು ಕಾರು, ಮೊಬೈಲ್, ಊರುಗಳನ್ನು ಬದಲಾಯಿಸುತ್ತಿದ್ದ. ಆದರೂ ನಮ್ಮ ಪೊಲೀಸರು ಈತನ ಬೆನ್ನು ಹತ್ತಿ ಬಂಧಿಸಿದ್ದಾರೆ ಎಂದು ತಿಳಿಸಿದರು.

ಸ್ಯಾಂಟ್ರೊ ರವಿ ತಲೆಗೆ ಹಾಕಿದ್ದ ವಿಗ್ ಅನ್ನು ತೆಗೆದು ಮೀಸೆ ಬೋಳಿಸಿಕೊಂಡು ಯಾರಿಗೂ ಅನುಮಾನ ಬರದಂತೆ  ಕಳೆದ ಹತ್ತುದಿನಗಳಿಂದ ತಲೆ ಮರೆಸಿಕೊಂಡಿದ್ದ. ರಾಯಚೂರು ಎಸ್ಪಿ, ಮಂಡ್ಯ ಎಸ್ಪಿ, ರಾಮನಗರ ಎಸ್ಪಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸರ ಮರ್ಯಾದೆ ಉಳಿಸುವ ಕೆಲಸ ಸಿಬ್ಬಂದಿ ಮಾಡಿದ್ದಾರೆ. 1500 ಕಿ.ಮೀ ದೂರದಲ್ಲಿ ಹೋಗಿ ಹಿಡಿದಿದ್ದಾರೆ ಎಂದು ಹೇಳಿದರು.

ಸ್ಯಾಂಟ್ರೊ ರವಿ 2002 ರಲ್ಲೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ 11 ತಿಂಗಳು ಜೈಲು ವಾಸ ಅನುಭವಿಸಿದ್ದ ಜೊತೆಗೆ ಈತನ ಮೇಲೆ ಗೂಂಡಾ ಕಾಯ್ದೆ ಕೂಡ ದಾಖಲಾಗಿತ್ತು. ಹಾಗಾಗಿ ಈತ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಚಾಣಕ್ಷತನ ಹೊಂದಿದ್ದ. ಆದ್ದರಿಂದ ಈತನ ಬಂಧನ ಸ್ವಲ್ಪ ವಿಳಂಬವಾಯಿತು ಎಂದರು.

ಸ್ಯಾಂಟ್ರೊ ರವಿಯನ್ನು ಇಂದು  ಗುಜರಾತ್ ನ್ಯಾಯಾಲಯಕ್ಕೆ ಒಪ್ಪಿಸಿ, ನಾಳೆ ಮೈಸೂರು ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗುವುದು. ನಂತರ ಈತನನ್ನು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ನೇತೃತ್ವದಲ್ಲಿ ರಾಯಚೂರು ಎಸ್ಪಿ ನಿಖಿಲ್, ಬಿ, ಮಂಡ್ಯ ಎಸ್ಪಿ ಯತೀಶ್ ಎನ್, ರಾಮನಗರ ಎಸ್ಪಿ ಸಂತೋಷ್ ಬಾಬು, ಡಿಸಿಪಿ ಮುತ್ತುರಾಜ್, ಎಸಿಪಿ ಶಿವಶಂಖರ್, ಇನ್ಸ್ ಪೆಕ್ಟರ್ ಅಝರುದ್ದೀನ್ ಸೇರಿದಂತೆ ಹಲವರ ತಂಡ ರಚಿಸಿ ಈ ಕಾರ್ಯಾಚರಣೆ ಮಾಡಲಾಯಿತು ಎಂದು ತಿಳಿಸಿದರು.

Similar News