ಸಿ.ಟಿ.ರವಿ ಬೆದರಿಕೆಗೆ ಜಗ್ಗಲ್ಲ: ರಮೇಶ್ ಬಾಬು

Update: 2023-01-13 14:52 GMT

ಬೆಂಗಳೂರು, ಜ.13: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮಾನನಷ್ಟ ಮೊಕದ್ದಮೆ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಬಿಜೆಪಿ ಪಕ್ಷದ ಅಕ್ರಮದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.

ಶುಕವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ರವಿ ಅವರು ಮಾಡಿರುವ ತಪ್ಪುಗಳನ್ನು ಬಹಿರಂಗ ಪಡಿಸಿದ ಕಾಂಗ್ರೆಸ್ ನಾಯಕ ಲಕ್ಷ್ಮಣ್ ಅವರ ವಿರುದ್ಧ ನೊಟೀಸ್ ನೀಡಿದ್ದಾರೆ. 

ಅದಕ್ಕೆ ಉತ್ತರವನ್ನು ಕೊಟ್ಟಿದ್ದೇವೆ. ಆದರೆ, ಚಿಕ್ಕಮಗಳೂರಿನಲ್ಲಿ ನ್ಯಾಯಾಲಯಕ್ಕೆ ಹೋಗಿ ಅಲ್ಲಿನ ಮಾಧ್ಯಮಗಳ ಮುಂದೆ ನಾನು ಲಕ್ಷ್ಮಣ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇವೆ ಎಂದಿರುವುದು ಹಾಸ್ಯಸ್ಪದ ಎಂದರು

ಅಲ್ಲದೆ, ಸಿ.ಟಿ.ರವಿ ಅವರ ವಿರುದ್ಧವೂ ಮೈಸೂರಿನಲ್ಲಿ ಲಕ್ಷ್ಮಣ್ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಾರೆ. ರವಿ ಅವರು ಕಾನೂನು ಇಟ್ಟುಕೊಂಡು ಪಲಾಯನ ಮಾಡಬಾರದು. ದೇಶದಲ್ಲಿ ಮಾನನಷ್ಟ ಮೊಕದ್ದಮೆ ಅವಕಾಶವನ್ನು ಐಪಿಸಿ ಸೆಕ್ಷನ್ 499 ಹಾಗೂ 500ರಲ್ಲಿ ನೀಡಿದ್ದು ಕಾಂಗ್ರೆಸ್ ಪಕ್ಷ. ನೀವು ಕಾಂಗ್ರೆಸ್‍ಗೆ ಇದರ ಬಗ್ಗೆ ಪಾಠ ಮಾಡಬೇಡಿ. ನಿಮ್ಮ ಕಾನೂನಾತ್ಮಕ ಕ್ರಿಯೆಗೆ ಅದರದೇ ರೀತಿ ಉತ್ತರ ನೀಡುತ್ತೇವೆ ಎಂದರು.

ಇನ್ನೂ, ರಾಜ್ಯದಲ್ಲಿ ಸಜ್ಜನ ರಾಜಕಾರಣ ಮಾಡುವವರನ್ನು ಹುಡುಕಿದರೆ ನಮಗೆ ಸಿಗುವ ಕೆಲವೇ ಕೆಲವು ನಾಯಕರಲ್ಲಿ ಕಿಮ್ಮನೆ ರತ್ನಾಕರ್ ಕೂಡ ಒಬ್ಬರು. ಕಾಂಗ್ರೆಸ್ ಪಕ್ಷದ ಬಗ್ಗೆ ಉದ್ದೇಶಗಳು ಹಾಗೂ ಕಿಮ್ಮನೆ ರತ್ನಾಕರ ಅವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ಇರುವುದರಿಂದ ಆರಗ ಜ್ಞಾನೇಂದ್ರ ಅವರು ರಾಜಕೀಯ ಸಿದ್ಧಾಂತ ರೂಪಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಆರಗ ಜ್ಞಾನೇಂದ್ರ ಹಗರಣಗಳ ಸಚಿವ..!:

‘ರಾಜ್ಯದಲ್ಲಿ ಅತಿ ಹೆಚ್ಚು ಹಗರಣಗಳ ಸಚಿವರು ಯಾರಾದರೂ ಇದ್ದರೆ ಅದು ಗೃಹ ಸಚಿವ ಆರಗ ಜ್ಞಾನೇಂದ್ರ. ಅವರು ಗೃಹ ಸಚಿವರಾದ ಮೊದಲ ದಿನದಿಂದ ಇಲ್ಲಿಯವರೆಗೆ ಒಂದಲ್ಲ ಒಂದು ಹಗರಣ ಮಾಡಿಕೊಂಡು ಬಂದಿದ್ದು, ಪಿಎಸ್ಸೈ ಹಗರಣದಲ್ಲಿ ವಿದ್ಯಾ ಹಾಗರಗಿಗೆ ಗೃಹ ಸಚಿವರು ಪರೋಕ್ಷ ಬೆಂಬಲ ನೀಡಿದ್ದಾರೆ’ ಎಂದು ರಮೇಶ್ ಬಾಬು ಆರೋಪಿಸಿದರು.

Similar News