2 ‘ಎ’ ಮೀಸಲಾತಿ ನೀಡುವಲ್ಲಿ ಸರಕಾರ ವಿಫಲ, ಹೋರಾಟ ನಿಲ್ಲಲ್ಲ: ಜಯಮೃತ್ಯುಂಜಯ ಶ್ರೀ

Update: 2023-01-13 15:31 GMT

ಹಾವೇರಿ, ಜ.13: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿ ನೀಡುವಲ್ಲಿ ಸರಕಾರ ವಿಫಲವಾಗಿದ್ದು ಇದರ ವಿರುದ್ಧದ ಪಂಚಮಸಾಲಿ ಸಮಾಜದ ಹೋರಾಟ ಮುಂದುವರಿಯುತ್ತದೆ ಎಂದು ಕೂಡಲ ಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಶುಕ್ರವಾರ ಶಿಗ್ಗಾವಿಯಲ್ಲಿ ಪ್ರತಿಭಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಸೂಕ್ತ ಮೀಸಲಾತಿ ಕೊಡುವ ಕುರಿತಂತೆ ಆರು ಬಾರಿ ಮುಖ್ಯಮಂತ್ರಿ ಮಾತು ಕೊಟ್ಟು ತಪ್ಪಿದ್ದಾರೆ ಎಂದು ಖಂಡಿಸಿದರು. 

ನಾವು ಇಂತಹ ಮೂಗಿಗೆ ತುಪ್ಪ ಸವರುವುದನ್ನು ಸಹಿಸುವುದಿಲ್ಲ. ಸಿಎಂ ನಡೆ ಖಂಡಿಸಿ ಅವರ ಮನೆ ಮುಂದೆ ಇಂದು(ಜ.13) ಒಂದು ದಿನದ ಸತ್ಯಾಗ್ರಹ ನಡೆಸುತ್ತೇವೆ. ಹೋರಾಟ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು. 

ಹೊಸದಾಗಿ `ಡಿ’ ಗ್ರೂಪ್ ಕೊಟ್ಟಿದ್ದನ್ನು ನಾವು ತಿರಸ್ಕರಿಸಿದ್ದೇವೆ. ಹೈಕೋರ್ಟ್ ಸಹ ಯಥಾಸ್ಥಿತಿ ಕಾಪಾಡಲು ಆದೇಶಿಸಿದೆ ಎಂದ ಅವರು, ಸರಕಾರ ಮಾತ್ರ ನಮ್ಮ ಹೋರಾಟ ಹತ್ತಿಕ್ಕುವ, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಖಂಡಿಸಿದರು. ಚುನಾವಣೆಗೂ ಮುನ್ನ ಸೂಕ್ತ ಮೀಸಲಾತಿ ನೀಡದಿದ್ದರೆ ಪಂಚಮಸಾಲಿ ಸಮಾಜ ಯಾವ ಯಾವ ಹೋರಾಟದ ಮಾರ್ಗ ಹಿಡಿಯಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು. 

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿಂದು ಶಿಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿನಯ್ ಕುಲಕರ್ಣಿ, ವಿಜಯಾನಂದ ಕಾಶೆಪ್ಪನವರ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು. 

Similar News