KSRTCಯ ಮೊದಲ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಯಶಸ್ವಿ; ಜ.16ರಿಂದ ಬೆಂಗಳೂರು-ಮೈಸೂರು ಸಂಚಾರ

ವಿವಿಧ ನಗರಗಳಿಗೆ ಶೀಘ್ರವೇ ಎಲೆಕ್ಟ್ರಿಕ್ ಬಸ್ ಸಂಚಾರ

Update: 2023-01-13 16:02 GMT

ಬೆಂಗಳೂರು, ಜ. 13: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್ಸಾರ್ಟಿಸಿ)ನಿಗಮದ ಮೊದಲ ಅಂತರ್ ಜಿಲ್ಲಾ ಎಲೆಕ್ಟ್ರಿಕ್ ಬಸ್ ಬೆಂಗಳೂರಿನಿಂದ ಮೈಸೂರಿಗೆ ಜ.16ರಿಂದ ಸಂಚಾರ ಆರಂಭಿಸಲಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಕೆಎಸ್ಸಾರ್ಟಿಸಿ ಇ-ಬಸ್ (KSRTC Electric Bus)  ಪ್ರಾಯೋಗಿಕ ಸಂಚಾರ ಆರಂಭದ ನಂತರ ಮಾತನಾಡಿದ ಅವರು, ಸೋಮವಾರ ಬೆಳಗಿನಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವ ಪೂರ್ಣ ಎಲೆಕ್ಟ್ರಿಕ್ ಬಸ್ ಪರಿಚಯಿಸುವ ಯೋಜನೆಯಡಿ ಒಟ್ಟು 50 ಬಸ್‍ಗಳನ್ನು ಸಂಚಾರಕ್ಕೆ ಬಿಡಲು ಸಿದ್ಧಗೊಂಡಿದೆ. ಅದರ ಭಾಗವಾಗಿ ಬೆಂಗಳೂರು-ಮೈಸೂರು ಎರಡು ನಗರಗಳ ನಡುವೆ ಎಕ್ಸ್ ಪ್ರೆಸ್  ವೇನಲ್ಲಿ ಎಲೆಕ್ಟ್ರಿಕ್ ಬಸ್ ಸಂಚರಿಸಲಿದೆ ಎಂದು ಹೇಳಿದರು.

ಎಲೆಕ್ಟ್ರಿಕ್ ಬಸ್ ವಿಶೇಷತೆ: ಎರಡೂವರೆ ಗಂಟೆ ಚಾರ್ಜ್ ಮಾಡಿದರೆ 300 ಕಿ.ಮೀ ಕ್ರಮಿಸುವಷ್ಟು ಸಾಮಥ್ರ್ಯವನ್ನು ಎಲೆಕ್ಟ್ರಿಕ್ ಬಸ್ ಹೊಂದಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿಂದ ಕೂಡಿದ್ದು, ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಸಲಾಗಿದೆ. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರೀಚಾರ್ಜ್ ಆಗುವ ರಿ ಜನರೇಟಿವ್ ಸಿಸ್ಟಮ್ ಇದಾಗಿದೆ. ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಇದೆ. ಮನರಂಜನೆಗಾಗಿ ಬಸ್‍ನಲ್ಲಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ. ಬಸ್‍ನಲ್ಲಿ 43+2 ಆಸನ ಸಾಮಥ್ರ್ಯ ಹೊಂದಿದ್ದು, ಬಸ್ ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿರುತ್ತದೆ. ಪ್ರಮುಖವಾಗಿ ರಾಜ್ಯದಲ್ಲಿ ಪರಿಸರ ಸ್ನೇಹಿ ಬಸ್‍ಗಳ ಕಾರ್ಯಾಚರಣೆ ಚಿಂತನೆಗೆ, ಯೋಜನೆ ರೂಪಿಸಲು ಇದು ನಾಂದಿ ಹಾಡಲಿದೆ ಎಂದು ಹೇಳಿದರು.

ಇ-ಬಸ್‍ನ ಪ್ರಯಾಣದ ಬೆಲೆ, ಸಾಮಾನ್ಯ ಸಾರಿಗೆಗಿಂತ ಹೆಚ್ಚು, ಹಾಗೂ ಮಲ್ಟಿ ಆ್ಯಕ್ಸಲ್ ಬಸ್ ದರಕ್ಕಿಂತ ಕಡಿಮೆ ದರ ನಿಗದಿ ಮಾಡಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತೀರಿ ಎಂದಾದರೆ ಒಬ್ಬರಿಗೆ 300 ರೂ. ಆಸುಪಾಸಲ್ಲಿ ದರ ನಿಗದಿ ಆಗುವ ಸಾಧ್ಯತೆ ಇದೆ ಎಂದು ಅನ್ಬುಕುಮಾರ್ ಮಾಹಿತಿ ನೀಡಿದರು.

ವಿವಿಧ ನಗರಗಳಿಗೆ ಶೀಘ್ರವೇ ಎಲೆಕ್ಟ್ರಿಕ್ ಬಸ್ ಸಂಚಾರ: ಸಾರ್ವಜನಿಕರು ‘ಇವಿ ಪವರ್ ಪ್ಲಸ್'ನಲ್ಲಿ ಅತ್ಯುತ್ತಮ ಅನುಭವ ಪಡೆಯಬಹುದು ಎನ್ನುವ ವಿಶ್ವಾಸವಿದೆ. ಜೊತೆಗೆ ಶೀಘ್ರದಲ್ಲೇ ಇ-ಬಸ್‍ಗಳು ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಗರಗಳಿಗೆ ಸಂಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಲೆಕ್ಟ್ರಿಕ್ ಬಸ್‍ಗಳಿಗೆ ಚಾರ್ಜಿಂಗ್ ಕೇಂದ್ರವನ್ನು ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಿರ್ಮಿಸಲಾಗಿದ್ದು, ಉಳಿದ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಲ್ಲಿ ಇವಿ ಚಾಚಿರ್ಂಗ್ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಅನ್ಬುಕುಮಾರ್ ತಿಳಿಸಿದರು.

Similar News