ಸಿಗಂದೂರು ಚೌಡಮ್ಮ ದೇವಿ ಜಾತ್ರೆಗೆ ಸಕಲ ಸಿದ್ಧತೆ

Update: 2023-01-13 16:09 GMT

ಶಿವಮೊಗ್ಗ, ಜ.13: ಭಕ್ತರ ಶ್ರದ್ಧಾಕೇಂದ್ರ ನಾಡಿನ ಶಕ್ತಿದೇವತೆಯಾದ ಶ್ರೀಕ್ಷೇತ್ರ ಸಿಗಂದೂರು ಚೌಡಮ್ಮ ದೇವಿ ದೇವಾಲಯದಲ್ಲಿ ಸಂಕ್ರಾಂತಿ ಪ್ರಯಕ್ತ ಜ.14 ಮತ್ತು 15 ರಂದು ಎರಡು ದಿನಗಳ ಜಾತ್ರೆ ವೈಭವದಿಂದ ನೆರವೇರಲಿದೆ.

ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸರಳ ಜಾತ್ರೆ ನಡೆದಿತ್ತು. ಆದರೆ ಈ ಬಾರಿ ದೇವಿಯ ಜಾತ್ರೆ ಸಂಪ್ರದಾಯದಂತೆ ನಡೆಯುತಿದ್ದು, ನಾಡಿನಾದ್ಯಂತ ಇರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

ಜಾತ್ರೆಯ ಅಂಗವಾಗಿ ಸಂಪೂರ್ಣ ದೇವಾಲಯವನ್ನು ಸಿಂಗರಿಸಲಾಗಿದೆ. ದೇವಳಕ್ಕೆ ಬಣ್ಣಬಳಿದಿದ್ದು, ತಳಿರು ತೋರಣ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ದೇವಾಲಯದಲ್ಲಿ ಆವರಣದಲ್ಲಿ ದೀಪಾಲಂಕಾರ ಮಾಡಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. 

ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಇಡೀ ಪರಿಸರವನ್ನು ಶುಭ್ರಗೊಳಿಸಲಾಗಿದೆ. ಎಲ್ಲೆಡೆ ಸೂಚನಾ ಫಲಕಗಳನ್ನು ಅವಳವಡಿಸಿದ್ದು, ದೇವಾಲಯದ ಸುತ್ತ ಇರುವ ಹಿನ್ನೀರಿ ಭಾಗಕ್ಕೆ ಬೇಲಿ ಹಾಕಿದ್ದು, ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಕೋವಿಡ್ ನಿಯಮಾನುಸಾರವೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಚೌಡಮ್ಮ ದೇವಿ ಟ್ರಸ್ಟ್ ವತಿಯಿಂದ ಅಳವಡಿಸಲಾಗಿದೆ.

ಎರಡೂ ದಿನಗಳಂದು ಸಹಸ್ರಾರು  ಭಕ್ತರು ಬರುವುದರಿಂದ ಉಪಹಾರ, ಊಟ ಹಾಗೂ ಸಿಹಿತಿಂಡಿಗಳ ವ್ಯವಸ್ಥೆ ಇರಲಿದೆ. ಕರೂರು ಹೋಬಳಿ ಸೇರಿದಂತೆ ದೂರದೂರುಗಳಿಂದಲೂ ದೇವಿಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದು, ಸ್ವಯಂಪ್ರೇರಿತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸುಮಾರು 300 ಮಂದಿ ಸ್ವಯಂ ಸೇವಕರು ಜಾತ್ರೆಯಲ್ಲಿ ಭಕ್ತಾದಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸೇವಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.

ಜ.14 ರಂದು ದೇವಿಯ ಮೂಲಸ್ಥಳವಾದ ಸೀಗೆಕಣಿವೆಯಲ್ಲಿ ಜ್ಯೋತಿ ಸ್ವರೂಪದಲ್ಲಿ ದೇವಿಯ ಮೆರವಣಿಗೆ ನಡೆಯಲಿದೆ. ಈ ಸಂದರ್ಭ ಮೂಲ ಸ್ಥಳದಲ್ಲಿ ಐದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಅಂದು ಬೆಳಗ್ಗೆ ಅಲ್ಲಿಯೇ ಉಪಾಹಾರದ ವ್ಯವಸ್ಥೆಯನ್ನು ಆಡಳಿತ ಮಂಡಳಿ ಮಾಡಿದೆ. ಜಾತ್ರೆಯನ್ನು ಖ್ಯಾತ ಚಲನಚಿತ್ರ ನಟ ರಾಘವೇಂದ್ರ ರಾಜ್‌ಕುಮಾರ್ ಹಾಗೂ ವಡನ್‌ಬೈಲ್ ಪದ್ಮಾವತಿ ಕ್ಷೇತ್ರದ ಧರ್ಮದರ್ಶಿ ವೀರರಾಜಯ್ಯ ಜೈನ್ ಜ್ಯೋತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡುವರು. ಕ್ಷೇತ್ರದ ಧರ್ಮದರ್ಶಿ ಡಾ.ಎಸ್.ರಾಮಪ್ಪ, ಶ್ರೀಮತಿ ಮೀನಾಕ್ಷಮ್ಮ, ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್ ಹಾಗೂ ಭಕ್ತರು, ಪ್ರಮುಖರು ಭಾಗವಹಿಸುವರು. 

ದೇವಸ್ಥಾನದಲ್ಲಿ ಹೋಮ ಹವನ ಮತ್ತು ಯಾಗಗಳನ್ನು ಆಯೋಜಿಸಲಾಗಿದೆ. ಮೊದಲ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ ಸಿಗಂದೂರು ಮೇಳದವರಿಂದ ಯಕ್ಷಗಾನ ಪ್ರದರ್ಶನವಿದೆ. ಸಿಡಿಮದ್ದು ಪ್ರದರ್ಶನ ಗಂಗಾರತಿ ಕಾರ್ಯಕ್ರಮಗಳಿವೆ.

 ಜ.15 ರಂದು ಬೆಳಗಿನಜಾವ ಮೂರು ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪಂಚಾಮೃತ ಅಭಿಷೇಕ ಪೂಜೆ, ಮಹಾ ಅಭಿಷೇಕ, ಹೂವಿನ ಅಲಂಕಾರ, ಆಭರಣ ಅಲಂಕಾರ, ಚಂಡಿಕಾಹೋಮ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಅಂದು ಮಧ್ಯಾಹ್ನದಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ಸಂಜೆ ನಡೆಯುವ ಗಾನ ವೈಭವ ಕಾರ್ಯಕ್ರಮದಲ್ಲಿ ಸರಿಗಮಪಾ ಹಾಗೂ ಎದೆತುಂಬಿ ಹಾಡುವೆನು ಖ್ಯಾತಿಯ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ.

Similar News