ವ್ಯವಹಾರದಲ್ಲಿ ಪ್ರವಾದಿ ಸಂಗಾತಿಗಳನ್ನು ಅನುಸರಿಸಿ,ದಾನ ನೀಡಿ: ಜಮಾಅತೆ ಇಸ್ಲಾಮಿ ಅಧ್ಯಕ್ಷ ಸೈಯದ್ ಸಾದಾತುಲ್ಲಾ ಹುಸೈನಿ
ಕಲಬುರಗಿ (ಗುಲ್ಬರ್ಗ): ನಗರದಲ್ಲಿ ಬುಧವಾರ ನಾಲ್ಕು ದಿನಗಳ ಉದ್ಯಮ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ, "ಪ್ರಾಮಾಣಿಕತೆ ಮತ್ತು ನ್ಯಾಯೋಚಿತ ವ್ಯಾಪಾರದ ಇಸ್ಲಾಮಿಕ್ ಮಾದರಿಯನ್ನು ಅನುಸರಿಸುವ ಮೂಲಕ ಸಂಪತ್ತು ಗಳಿಸಲು" ಜನರಿಗೆ ಮನವಿ ಮಾಡಿದರು. ವ್ಯಾಪಾರಿಗಳು ನಿರ್ಗತಿಕರಿಗೆ ದಾನ ನೀಡುವ ಪರಿಪಾಠವನ್ನೂ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೊಸದಿಲ್ಲಿಯಲ್ಲಿ ಪ್ರಧಾನ ಕಛೇರಿ ಇರುವ ರಿಫಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (RCCI), ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಸಂಘ ಈ ಪ್ರದರ್ಶನವನ್ನು ಕಲಬುರಗಿಯಲ್ಲಿ ಆಯೋಜಿಸಿತ್ತು.
ರಿಫಾ ಒಂದು ಆಂದೋಲನವಾಗಿದೆ ಮತ್ತು ಅದರ ಮೂಲ ಉದ್ದೇಶವು ನ್ಯಾಯಯುತ ವಿಧಾನಗಳ ಮೂಲಕ ಸಂಪತ್ತನ್ನು ಗಳಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದಾಗಿದೆ ಎಂದು ಹೇಳಿದ ಜಮಾಅತೆ ಇಸ್ಲಾಮಿ ಮುಖ್ಯಸ್ಥರು, ಇಸ್ಲಾಮಿಕ್ ಧರ್ಮದ ಎರಡು ಪ್ರಮುಖ ಸ್ತಂಭಗಳಾದ ಝಕಾತ್ ಮತ್ತು ಹಜ್ ಕುರಿತು ವಿವರಿಸಿದರು. ಧಾರ್ಮಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಹಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
"ಅಶ್ರ ಮುಬಾಶ್ಶರಾ" ಅಂದರೆ ಪ್ರವಾದಿ ಮುಹಮ್ಮದ್ ಅವರು ಸ್ವರ್ಗ ಭರವಸೆ ನೀಡಿದ್ದ ಹತ್ತು ಮಂದಿಯ ಪೈಕಿ ನಾಲ್ವರು ಅನುಯಾಯಿಗಳು ಹಝ್ರತ್ ಅಬ್ದುರ್ರಹ್ಮಾನ್ ಬಿನ್ ಔಫ್, ಹಝ್ರತ್ ಉಸ್ಮಾನ್ ಬಿನ್ ಅಫ್ಫಾನ್, ಹಝ್ರತ್ ತಲ್ಹಾ ಬಿನ್ ಉಬೈದುಲ್ಲಾ ಮತ್ತು ಹಝ್ರತ್ ಝುಬೈರ್ ಕೋಟ್ಯಧಿಪತಿಗಳಾಗಿದ್ದರು ಎಂದು ಅವರು ಹೇಳಿದರು. ಹಝ್ರತ್ ಅಬ್ದುರ್ರಹ್ಮಾನ್ ಅವರ ಒಡೆತನದ ಸಂಪತ್ತು 100 ಬಿಲಿಯನ್ ಯುಎಸ್ ಡಾಲರ್ ಅಥವಾ ಭಾರತೀಯ ಕರೆನ್ಸಿಗಳ ಪ್ರಸ್ತುತ ಮೌಲ್ಯವನ್ನು ಆಧರಿಸಿ ಲೆಕ್ಕ ಹಾಕಿದರೆ 80,000 ಕೋಟಿಗಳಾಗಿತ್ತು ಎಂದು ಅವರು ಹೇಳಿದರು.
ಇಷ್ಟೆಲ್ಲ ಸಂಪತ್ತು ಇದ್ದ ಹಝ್ರತ್ ಅಬ್ದುರ್ರಹ್ಮಾನ್ ಅವರು ವ್ಯಾಪಾರದ ಮೂಲಕವೇ ಇದನ್ನೆಲ್ಲಾ ಸಂಪಾದಿಸಿದ್ದರು ಎಂದು ಅವರು ಉದಾಹರಣೆ ನೀಡಿದರು. ಅವರು ತನ್ನ ಸಂಪಾದನೆಯ ದೊಡ್ಡ ಭಾಗವನ್ನು ದಾನಕ್ಕಾಗಿ ಮತ್ತು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿದರು. ಅವರು ನಿಧನರಾಗುವ ವೇಳೆ ಅಪಾರ ಪ್ರಮಾಣದ ಸಂಪತ್ತನ್ನು ತೊರೆದಿದ್ದರು ಎಂದೂ ಅವರು ಉಲ್ಲೇಖಿಸಿದರು.
ಪ್ರವಾದಿಯವರ ಕೋಟ್ಯಧಿಪತಿ ಸಹಚರರ ಉದಾಹರಣೆಗಳನ್ನು ನೀಡುತ್ತಾ, ಹುಸೇನಿ ಅವರು ಮಾನವತೆಯ ಪ್ರಯೋಜನಕ್ಕಾಗಿ ಪ್ರವಾದಿಯ ನಾಲ್ಕು ಸಹಚರರ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವುದು ರಿಫಾದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಪ್ರವಾದಿ ಮುಹಮ್ಮದ್ ಅವರ ಮೂಲಕ ಮಾನವರಿಗೆ ಅವತರಿಸಲ್ಪಟ್ಟ ಕುರ್ ಆನ್, ಜನರು ಸಂಪತ್ತನ್ನು ನ್ಯಾಯಯುತ ವಿಧಾನಗಳ ಮೂಲಕ ಸಂಪಾದಿಸಲು ಮತ್ತು ಇತರರಿಗೆ ಸಹಾಯ ಮಾಡಲು ಅದನ್ನು ವ್ಯಯಿಸಲು ಪ್ರೋತ್ಸಾಹಿಸುತ್ತದೆ ಎಂದು ವಿವರಿಸಿದರು.
ಕುರ್ ಆನ್‌ನಿಂದ ಉಲ್ಲೇಖಿಸಿದ ಅವರು, ಶ್ರೀಮಂತ ವ್ಯಕ್ತಿ ತನ್ನ ಸಂಪತ್ತನ್ನು ಇತರರಿಗೆ ಖರ್ಚು ಮಾಡುವ ಮೂಲಕ ಅಲ್ಲಾಹನ ಕೃಪೆಗೆ ಮರಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಿಫಾ ಕಾರ್ಯದರ್ಶಿ ಅಫ್ಝಲ್ ಬೇಗ್, ಜೆಐಎಚ್ ಕರ್ನಾಟಕ ಘಟಕದ ಅಧ್ಯಕ್ಷ ಡಾ.ಮಹಮ್ಮದ್ ಸಾದ್ ಬಿಲ್ಗಾಮಿ, ಜೆಐಎಚ್ ಕರ್ನಾಟಕ ಕಾರ್ಯದರ್ಶಿ ಯೂಸುಫ್ ಕಣ್ಣಿ ಮಾತನಾಡಿದರು.