ಸರಕಾರದ ವಿರುದ್ಧ ಮಾತನಾಡುವವರ ಬಗ್ಗೆ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ: ಯತ್ನಾಳ್‍ಗೆ ಸಿಎಂ ಪರೋಕ್ಷ ಎಚ್ಚರಿಕೆ

Update: 2023-01-14 14:12 GMT

ಬೆಂಗಳೂರು: ‘ರಾಜ್ಯ ಸರಕಾರ ಹಾಗೂ ಬಿಜೆಪಿ ವಿರುದ್ಧ ಮಾತನಾಡುವವರ ಬಗ್ಗೆ ಪಕ್ಷವು ಸರಿಯಾದ ನಿರ್ಧಾರ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಮ್ಮ ಮೇಲೆ ದೊಡ್ಡ  ಜವಾಬ್ದಾರಿ ಇದೆ. ಲಿಂಗಾಯತ ಪಂಚಮಸಾಲಿ ಸಮಾಜವು ಸೇರಿದಂತೆ ಎಲ್ಲ ಸಮುದಾಯವನ್ನು ಸಮನಾಗಿ ನೋಡಬೇಕು ಹಾಗೂ ನ್ಯಾಯ ನೀಡಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ವಾಗಬಾರದು’ ಎಂದು ಹೇಳಿದರು.

ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕಾಲಮಿತಿ ನೀಡಿಲ್ಲ. ಅವರೆ ಮಾಡಿ ಎಂದು ಹೇಳಿದ್ದು. ಅವರು ಕೊಟ್ಟ ಒಂದು ವಾರದಲ್ಲಿಯೇ ನಾವು ತೀರ್ಮಾನ ಕೈಗೊಂಡಿದ್ದೇವೆ. ಕಾಶಪ್ಪನವರ್ ಅಧ್ಯಕ್ಷರು ಹಾಗೂ ಶಾಸಕರಿದ್ದರು ಹಾಗೂ ಅವರ ತಂದೆ ಸಚಿವರಿದ್ದಾಗ ಕಾಂಗ್ರೆಸ್ ಯಾಕೆ ಮಾಡಿಲ್ಲ. 2016ರಲ್ಲಿ ಕಾಂಗ್ರೆಸ್ ಸರಕಾರ ಇತ್ತು, ಸಿದ್ದರಾಮಯ್ಯ ಸಿಎಂ ಆಗಿದ್ದರು. 

ಕಾಂತರಾಜ ಸಮಿತಿ ಇವರ ಅರ್ಜಿಯನ್ನು ತಿರಸ್ಕರಿಸಿತು. ಪ್ರವರ್ಗ 2 ‘ಎ’ ನೀಡಲಾಗುವುದಿಲ್ಲ 3 ‘ಬಿ’ನಲ್ಲಿಯೇ ಇರಬೇಕು ಎಂದು ಆದೇಶವಾಗಿದೆ. 2016ರಿಂದ 18ರ ವರೆಗೆ ಅವರದ್ದೇ ಸರಕಾರವಿತ್ತು. ಆಗ ಪ್ರಶ್ನೆ ಕೇಳದವರು ಈಗ ಏಕೆ ಕೇಳುತ್ತಾರೆ. ಅವರಿಗೆ ಯಾವ ನೈತಿಕ ಹಕ್ಕಿದೆ. ಕಾಂಗ್ರೆಸ್‍ನವರು ಈ ಜಾತಿ ರಾಜಕಾರಣದಲ್ಲಿ ತಮ್ಮ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸ್ವಾಮಿಗಳು ಅವರ ಅಕ್ಕಪಕ್ಕದಲ್ಲಿರುವವರಿಗೆ ಅವರು ಇದ್ದಾಗ ಏನು ಮಾಡಿದರು ಎಂಬ ಪ್ರಶ್ನೆ ಕೇಳಬೇಕು. ಅದು ಬಿಟ್ಟು ಈ ರೀತಿಯ ವಿಷಮ ವಾತಾವರಣ ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ವೈಯಕ್ತಿಕ ನಿಂದನೆ ರಾಜಕೀಯ ಸಂಸ್ಕೃತಿಯಲ್ಲ: ಮೀಸಲಾತಿ ವಿಚಾರದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ಹಿಂದುಳಿದ ವರ್ಗದ ಆಯೋಗ ನೀಡಿರುವ ಮಧ್ಯಂತರ ವರದಿಯನ್ನು ವಾರದಲ್ಲಿ ಸಂಪುಟದಲ್ಲಿಟ್ಟು, ತಾತ್ವಿಕ ಒಪ್ಪಿಗೆ ನೀಡಿ, ಬೇಡಿಕೆ ಇಟ್ಟವರನ್ನು ಗಮನಿಸಿ, ಪ್ರವರ್ಗ-2ರಲ್ಲಿ ಸೇರಿಸಲು ನಾವು ಘೋಷಣೆ ಮಾಡಿದ್ದೇವೆ ಎಂದರು.

ರಾಜಕಾರಣದಲ್ಲಿ ಎಲ್ಲರೂ ಜನ ಮನ್ನಣೆ ಪಡೆದೆ ಬಂದಿರುತ್ತಾರೆ. ಯಾರು ಏನು ಎಂದು ಜನರಿಗೆ ತಿಳಿದಿದೆ. ವೈಯಕ್ತಿಕವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನಾವು ಚಿಂತಿಸಬೇಕು. ಕರ್ನಾಟಕದ ರಾಜಕೀಯ ಸಂಸ್ಕೃತಿ ಇದಲ್ಲ. ವಿಷಯಾಧಾರಿತ ಭಿನ್ನಾಭಿಪ್ರಾಯ ಇರಬೇಕು. ಆದರೆ ವೈಯಕ್ತಿಕ ನಿಂದನೆ ಸಲ್ಲ. ಅದಕ್ಕೆ ಹೊರತಾಗಿ ಮಾತನಾಡಿದರೆ, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಯತ್ನಾಳ್‍ಗೆ ತಿರುಗೇಟು ನೀಡಿದರು.

ಸಾಲದ ಸುಳಿಗೆ ನೂಕಿದ ಕಾಂಗ್ರೆಸ್: ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಈಗಾಗಲೆ ಎಸ್ಕಾಂಗಳನ್ನು ಸಾಲದ ಶೂಲಕ್ಕೆ ನೂಕಿದ್ದಾರೆ. ಅವುಗಳಿಗೆ ನೇರವಾಗಿ 8 ಸಾವಿರ ಕೋಟಿ ರೂ.ನೀಡಿದ್ದೇವೆ. 13 ಸಾವಿರ ಕೋಟಿ ರೂ.ಗಳಿಗೆ ಗ್ಯಾರಂಟಿ ಕೊಟ್ಟು ಸಾಲ ಪಡೆಯಲಾಗಿದೆ. ಅಂದರೆ 21ಸಾವಿರ ಕೋಟಿ ರೂ.ಎಸ್ಕಾಂ ಮತ್ತು ಇಂಧನ ಕ್ಷೇತ್ರದಲ್ಲಿ ತೊಡಗಿಸಿದ್ದರಿಂದ ಅವು ಜೀವಂತವಾಗಿವೆ ಎಂದು ಅವರು ಟೀಕಿಸಿದರು.

ಇಂಧನ ಕ್ಷೇತ್ರಕ್ಕೆ ಇದು ಕಾಂಗ್ರೆಸ್ ಕಾಣಿಕೆ. ಅವರು ಬಿಟ್ಟು ಹೋದ ಬಳುವಳಿ. ಈಗ ಮತ್ತೆ ಚುನಾವಣೆ ಯಲ್ಲಿ ಸೋಲುತ್ತೇವೆ ಎಂದು ಗೊತ್ತಾಗಿ ಹತಾಶರಾಗಿ ಈ ರೀತಿ ಘೋಷಣೆಗಳನ್ನು ಮಾಡಿದ್ದಾರೆ. ಅವರಿಗೆ ಇದ್ಯಾವುದೂ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಎಂದು ತಿಳಿದಿದೆ. ದಾರಿ ತಪ್ಪಿಸುವ, ಮೋಸ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಅವರ ಘೋಷಣೆಗೆ 9 ಸಾವಿರ ಕೋಟಿ ರೂ.ಗಿಂತ ಹೆಚ್ಚು ಹಣದ ಅವಶ್ಯಕತೆ ಇದೆ.

9 ಸಾವಿರ ಕೋಟಿ ರೂ.ಇಲ್ಲಿ ನೀಡಿದರೆ, ಬೇರೆ ಯೋಜನೆಗಳಿಗೆ ಕಡಿತ ಮಾಡುತ್ತಾರೆ. ಸಾಮಾಜಿಕ ವಲಯದಲ್ಲಿ ಕಡಿತವಾಗುತ್ತದೆ. ಅವರು ಆರಿಸಿ ಬರುವುದಿಲ್ಲ. ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಸರಕಾರ ವಾಗಿರುವುದರಿಂದ ಜವಾಬ್ದಾರಿಯಿಂದ ಮಾತನಾಡುತ್ತೇವೆ. ನಮಗೂ ಜನರ ಕಷ್ಟಗಳು ತಿಳಿದಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನು ಓದಿ: ಸಿದ್ದರಾಮಯ್ಯ 25 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುವುದಿಲ್ಲ: ಕೆ.ಎಸ್. ಈಶ್ವರಪ್ಪ

Similar News