ಅಮಿತ್ ಶಾ ರೌಡಿಸಂ ಮುಖ ಜನರ ಮುಂದಿಟ್ಟರೆ ಸಿ.ಪಿ.ಯೋಗೇಶ್ವರ್ ಹೆಸರು ಇತಿಹಾಸದ ಪುಟ ಸೇರುತ್ತೆ: ಉಗ್ರಪ್ಪ

Update: 2023-01-15 18:03 GMT

ಬೆಂಗಳೂರು, ಜ.15: ಅನುಭವಿ ರಾಜಕಾರಣಿಯಾಗಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ರೌಡಿಸಂ ಮುಖಗಳನ್ನು ಜನರ ಮುಂದೆ ಇಡಬೇಕೆಂದು ಕೇಳಿಕೊಳ್ಳುವೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹೇಳಿದ್ದಾರೆ.

ರವಿವಾರ ಮಾಧ್ಯಮಗಳೊಂದಿಗೆ ಸಿ.ಪಿ.ಯೋಗೇಶ್ವರ್ ಆಡಿಯೋ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿಯ ಬಂಡವಾಳವನ್ನು ಯೋಗೇಶ್ವರ್ ಬಯಲಿಗೆಳೆದರೆ ಇತಿಹಾಸದ ಪುಟಗಳಲ್ಲಿ ಸೇರುತ್ತಾರೆ. ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಆತಂಕವಾದ ಬದಲಾವಣೆಯಾಗುತ್ತಿದೆ. ರಾಜಕಾರಣಿಗಳು ದೇಶದ ಜನರಿಗೆ ಆದರ್ಶವಾಗಿರಬೇಕು. ಆದರೆ ಬಿಜೆಪಿಯ ರಾಜಕಾರಣಿಗಳು ದಿನಗಳೆದಂತೆ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ ಎಂದು ತಿಳಿಸಿದರು.

ಯೋಗೇಶ್ವರ್ ಅವರ ಆಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಡಿಯೋದಲ್ಲಿ ಬಿಜೆಪಿ ಒಂದು ರೌಡಿ ಮೋರ್ಚಾ ಎಂದು ಎಲ್ಲರಿಗೂ ಸಾಬೀತಾಗುತ್ತದೆ. ದೇಶದ ರಕ್ಷಣೆ ಮಾಡಬೇಕಾದ ಗೃಹ ಸಚಿವರು ರೌಡಿ ಮೋರ್ಚಾವನ್ನು ಕಟ್ಟುತ್ತಿದ್ದಾರೆ. ಬಿಜೆಪಿಯವರು ಸೋಲನ್ನು ಅಡ್ಮಿಟ್ ಮಾಡಿಕೊಂಡಿದ್ದು, ಸ್ವತಃ ಅಮಿತ್ ಶಾ ನಾವು ಈ ಭಾರಿ ಅಧಿಕಾರಕ್ಕೆ ಬರದ ಕಾರಣ ಚುನಾವಣೆ ಮೊದಲೇ ಆಪರೇಷನ್ ಕಮಲವನ್ನು ಮಾಡಬೇಕು ಎಂದಿದ್ದಾರೆ. ಅವರ ಹೇಳಿಕೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದೇಶದ ಬಗ್ಗೆ ಏನು ಸಂದೇಶ ಹೋಗುತ್ತದೆ ಎಂದು ಅವರ ಗಮನದಲ್ಲಿಲ್ಲ ಎಂದು ಉಗ್ರಪ್ಪ ಕಿಡಿಕಾರಿದರು.

‘ಯತ್ನಾಳ್ ನಾಲಿಗೆಯನ್ನು ಕತ್ತರಿಸುತ್ತೇವೆ’ ಎನ್ನುವ ನಿರಾಣಿ ಮಾತುಗಳಿಗೆ ಸ್ವಯಂ ಪ್ರೇರಿತ (ಸುಮೋಟೋ) ಕೇಸ್ ದಾಖಲಿಸಬಹುದು ಎಂದ ಅವರು, ಯತ್ನಾಳ್ ಕಾರು ಚಾಲಕನ ಕೊಲೆ ನಡೆದಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಸರಕಾರ ಯಾವುದೇ ತನಿಖೆಯನ್ನು ನಡೆಸದೆ, ಪ್ರಕರಣವನ್ನೂ ದಾಖಲಿಸದೆ ಮುಚ್ಚಿ ಹಾಕಿದೆ. ಕೂಡಲೇ ಈ ಪ್ರಕರಣದ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

Similar News