ತೊಗರಿ ಬೆಳೆಗೆ ನೆಟೆ ರೋಗ: ಪರಿಹಾರಕ್ಕೆ ಆಗ್ರಹಿಸಿ ಕಲಬುರಗಿ ಬಂದ್ ಗೆ ಕರೆ, ಧರಣಿ

Update: 2023-01-17 04:28 GMT

ಕಲಬುರಗಿ, ಜ.17: ನೆಟೆ ರೋಗದಿಂದ ತತ್ತರಿಸಿರುವ ತೊಗರಿ ಬೆಳೆಗಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಪರ ಸೇರಿ ವಿವಿಧ ಸಂಘಟನೆಗಳು ಮಂಗಳವಾರ ಕಲಬುರಗಿ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ (ಎಐಕೆಕೆಎಂಎಸ್) ಕಾರ್ಯಕರ್ತರು, ರೈತರು ಮುಂಜಾನೆ 5 ಗಂಟೆಗೆ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಜಮಾಯಿಸಿ ಧರಣಿ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಧರಣಿನಿರತರು, ರೈತರ ಪರವಾಗಿ ನಿಂತು ಬಂದ್‌  ಬೆಂಬಲಿಸುವಂತೆ  ಆಟೊ ಚಾಲಕರು, ಬಸ್ ಚಾಲಕ ಮತ್ತು ನಿರ್ವಾಹಕರನ್ನು ಮನವಿ ಮಾಡಿದರು.

 ನೆಟೆ ರೋಗದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಜ.19ರಂದು ಕಲಬುರಗಿ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ವೇಳೆ ತೊಗರಿ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ‌ ನೀಡಬೇಕು. ಇಲ್ಲದಿದ್ದರೆ ಹೋರಾಟ‌ತೀವ್ರಗೊಳಿಸಲಾಗುವುದು ಎಂದು ಎಚ್ವರಿಸಿದರು.

ಬಂದ್ ಕರೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

ಬಂದ್ ಕರೆಗೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ, ಅಖಿಲ ಭಾರತ ಕಿಸಾನ್ ಸಭಾ, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್ (ಸಿಐಟಿಯು), ಜನವಾದಿ ಮಹಿಳಾ ಸಂಘಟನೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ), ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆ, ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ), ದಲಿತ ಸಂಘಟನೆಗಳ ಒಕ್ಕೂಟ, ಆಹಾರ ಧಾನ್ಯಗಳ ಮತ್ತು ಬೀಜ ವ್ಯಾಪಾರಿಗಳ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ, ಕಿರಾಣಾ ಬಜಾರ್ ವ್ಯಾಪಾರಸ್ಥರ ಸಂಘ, ಕನ್ನಡ ಪರ ಸಂಘಟನೆಗಳು ಮತ್ತು ಅಡತ್ ಹಮಾಲರ ಸಂಘ ಸೇರಿದಂತೆ ‌ಹಲವು ಸಂಘಟನೆಗಳು ಬೆಂಬಲ ಘೋಷಿಸಿವೆ.

Similar News