ಯಂತ್ರ ನಾಗರಿಕತೆಯ ಯಾತನೆಯ ಕತೆ ‘ಮುಕ್ತಧಾರ’

ರಂಗ ವಿಮರ್ಶೆ

Update: 2023-01-17 04:49 GMT

ನದಿಗಳು ನಾಗರಿಕತೆಯ ಮೂಲಾಧಾರ. ನದಿಗಳ ಸುತ್ತಲೇ ಆದಿಮಾನವ ಆಧುನಿಕ ಮಾನವನಾಗಿದ್ದು, ಜೀವ ಸಂಕುಲ ಅರಳಿದ್ದು ಮತ್ತು ಸಂಸ್ಕೃತಿ ಬೆಳೆದಿದ್ದು. ಹೆಚ್ಚು ಆಧುನಿಕನಾದಂತೆಲ್ಲ ಅಭಿವೃದ್ಧಿಯ ಗೋಜಿಗೆ ಸಿಲುಕಿದ ಮಾನವ ನಿಧಾನ ನದಿಗಳಿಂದ ದೂರ ನಡೆಯುತ್ತಾ ಸಾಗಿದ. ಯಂತ್ರನಾಗರಿಕತೆಗೆ ತೆರೆದುಕೊಳ್ಳುತ್ತಾ ಪ್ರಕೃತಿಗೇ ಸವಾಲು ಎಸೆದ. ಹರಿವ ನದಿಗೆ ಅಣೆಕಟ್ಟು ಕಟ್ಟಿದ. ಜಲಪಾತಗಳನ್ನು ಒಣಗಿಸಿದ. ಕಾಡು ಕಡಿದ. ಬೆಟ್ಟಗಳನ್ನು ನೆಲಸಮ ಮಾಡಿದ. ಸ್ವಚ್ಛಂದವಾಗಿ ಹರಿದು ಸಮುದ್ರ ಸೇರುತ್ತಿದ್ದ ನದಿಗಳನ್ನು ಬರಡಾಗಿಸಿದ. ನೆಲ ಜಲ ಗಾಳಿ ಹೀಗೆ ಎಲ್ಲವನ್ನೂ ಮಲಿನಗೊಳಿಸಿದ.

ಜತೆಗೇ ತನ್ನ ಮನಸ್ಸನ್ನೂ ಕೊಳಕಾಗಿಸಿಕೊಂಡ. ಸಾಮಾಜಿಕ ತಾರತಮ್ಯಗಳನ್ನು, ಅನ್ಯಾಯವನ್ನು ಹುಟ್ಟುಹಾಕಿದ. ಯಂತ್ರಗಳಿಗೆ, ತಂತ್ರಗಳಿಗೆ ತನ್ನನ್ನು ತಾನು ಮಾರಿಕೊಂಡು ಇದೇ ವಿಕಾಸವೆಂದು ಬೀಗತೊಡಗಿದ. ಇಷ್ಟು ಸಾಲದೆಂಬಂತೆ ಎಲ್ಲಾ ಕಡೆ ಬಗೆಬಗೆಯ ಗಡಿಗಳನ್ನು ನಿರ್ಮಿಸಿ ಅದರೊಂದಿಗೆ ವ್ಯಾಜ್ಯಗಳನ್ನು ಹುಟ್ಟುಹಾಕಿದ. ಯುದ್ಧಗಳನ್ನೇ ಸಂಸ್ಕೃತಿಯೆಂದು ಪರಿಗಣಿಸಿ ಯುದ್ಧದ್ದೇ ಆರ್ಥಿಕತೆಯನ್ನು ಕಟ್ಟಿದ. ಕಡೆಗೆ ತನ್ನ ವಿನಾಶಕ್ಕೆ ತಾನೇ ಮುನ್ನುಡಿ ಬರೆದ.

ಅಭಿವೃದ್ಧಿಯ ಅಂಧಯುಗದಲ್ಲಿರುವ ಇವತ್ತಿನ ಈ ವಾಸ್ತವಿಕ ವಿವರಗಳೇ ರವೀಂದ್ರನಾಥ ಟಾಗೋರರು ಇಂದಿಗೆ ನೂರು ವರ್ಷ ಮೊದಲು ಬರೆದ ‘ಮುಕ್ತಧಾರ’ ನಾಟಕದ ವಸ್ತು. ಇವತ್ತಿನ ರಾಷ್ಟ್ರೀಯತೆಗಿಂತ ಸಾಕಷ್ಟು ಭಿನ್ನವಾದ ಇಪ್ಪತ್ತರ ದಶಕದ ಗಾಂಧಿ ಪ್ರೇರಿತ ರಾಷ್ಟ್ರವಾದವನ್ನು ಸಾಂಕೇತಿಕವಾಗಿ ವಿಮರ್ಶಿಸುವ ನಾಟಕ ಎಲ್ಲಾ ಬಗೆಯ ಪ್ರಾಕೃತಿಕ ಮತ್ತು ಸಾಮಾಜಿಕ ಶೋಷಣೆಗಳನ್ನು, ಅನೀತಿಗಳನ್ನು ಟೀಕಿಸುತ್ತಾ ಯಂತ್ರಗಳ ಮೇಲಿನ ಅಂಧ ಪ್ರೀತಿಯ ಪರಿಣಾಮಗಳು ಮತ್ತು ಅಹಿಂಸೆಯ ಆಶಯಗಳನ್ನು ವಿಸ್ತಾರವಾಗಿ ವಿವರಿಸುತ್ತದೆ. ಯಾವುದೇ ದೇಶದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ವಿವೇಕಯುತ ಆಡಳಿತ ನೀತಿಯಿಲ್ಲದಿದ್ದರೆ ಆ ದೇಶ ಮತ್ತು ಆ ಸಮಾಜ ಪಡಬೇಕಾದ ಸಂಕಟ ಹಾಗೂ ಯಾತನೆಗಳ ಚಿತ್ರಣ ಈ ನಾಟಕದಲ್ಲಿದೆ. ಬಂಡವಾಳಶಾಹಿ ಆರ್ಥಿಕತೆಯಿಂದ ಹುಟ್ಟಿದ ಕೈಗಾರಿಕೀಕರಣವನ್ನು ನಾಟಕ ಒಪ್ಪುವುದಿಲ್ಲ.

ಉತ್ತರಕೂಟ ಮತ್ತು ಶಿವ-ತರಾಯಿ ಎನ್ನುವ ಕಾಲ್ಪನಿಕ ಊರುಗಳ ನಡುವೆ ಸ್ವಚ್ಛಂದವಾಗಿ ಹರಿದು ಜಲಧಾರೆಯಾಗಿ ಧುಮ್ಮಿಕ್ಕುವ ತೊರೆಯೇ ಮುಕ್ತಧಾರ. ಊರಿನ ಹಿಡಿತವಿರುವುದು ರಾಜ ರಂಜಿತನ ಕೈಯಲ್ಲಿ. ಅವನೋ ಅನ್ಯಾಯದ ಆಡಳಿತಗಾರ. ಅವನ ಸಾಕುಮಗ ಅಭಿಜಿತ್. ತಂದೆಗಿಂತ ಸಾಕಷ್ಟು ಭಿನ್ನ. ಮುಕ್ತಧಾರವೇ ತನ್ನ ತಾಯಿಯೆಂದು ನಂಬಿದ ಅಭಿಜಿತ್ ಪ್ರಕೃತಿಗೆ, ಮಣ್ಣಿಗೆ ಬಹಳ ಹತ್ತಿರ. ಸದಾ ಬಿಡುಗಡೆಯನ್ನು ಬಯಸುವ ಮುಕ್ತ ಮನಸ್ಸಿನ ಯುವಕ; ಮುಕ್ತಧಾರ ತೊರೆಯ ಜಲಪಾತದ ಪಕ್ಕದಲ್ಲಿಯೇ ಒಂದು ಬೈರಾಗಿಯ ಮಂದಿರ. ಜಲಪಾತದ ಧಾರೆಯನ್ನು ತಡೆದು ಕೆಳಗಿನ ಊರು ಶಿವ-ತರಾಯಿಯ ಜನರಿಗೆ ನೀರು ಸಿಗದಂತೆ ಮಾಡಬಯಸುವ ರಾಜ, ವಿಭೂತಿಯೆನ್ನುವ ತಂತ್ರಜ್ಞನನ್ನು ದೊಡ್ಡ ಅಣೆಕಟ್ಟು ಕಟ್ಟಲು ನೇಮಿಸಿಕೊಂಡಿದ್ದಾನೆ. ವಿಭೂತಿಯು ಈಗಾಗಲೇ ಬೃಹತ್ ಯಂತ್ರಗಳನ್ನು ನಿರ್ಮಿಸಿ ಜಲಪಾತದ ನೀರನ್ನು ತಡೆದಿದ್ದಾನೆ.

ಅಂಬಾ ಎನ್ನುವ ತಾಯಿ ಸದಾ ತನ್ನ ಮಗ ಸುಮಂತ್‌ನನ್ನು ಹುಡುಕುತ್ತಿದ್ದಾಳೆ. ಆತ ಕಾಣೆಯಾಗಿರುವುದು ಅಣೆಕಟ್ಟು ನಿರ್ಮಾಣಮಾಡುತ್ತಿರುವವರ ಕಾರಣದಿಂದಲೇ. ಅವರು ನರಬಲಿ ಪಡೆದರೋ ತಿಳಿಯದು, ಉತ್ತರಕೂಟದ ಜನರು ಅಣೆಕಟ್ಟನ್ನು ಮತ್ತು ಬೃಹತ್ ಯಂತ್ರಗಳನ್ನೂ ಆರಾಧಿಸುತ್ತಿದ್ದಾರೆ. ಧನಂಜಯ ಭೈರಾಗಿ ಎನ್ನುವ ಸಂತ ವಿವೇಕ ಶೂನ್ಯ ರಾಜನ ಅಟ್ಟಹಾಸಕ್ಕೆ ಅಹಿಂಸೆಯ ಉತ್ತರವನ್ನು ಊರಿನವರಿಗೆ ಬೋಧಿಸುತ್ತಿದ್ದಾನೆ. ಶಿವನ ಮಂದಿರಕ್ಕಿಂತ ಎತ್ತರಕ್ಕೆ ಅಣೆಕಟ್ಟಿನ ಯಂತ್ರಗಳು ತಲೆಯೆತ್ತಿವೆ. ಮಂದಿರದ ಭಕ್ತರು ಯಾವುದನ್ನು ಲೆಕ್ಕಿಸದೇ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಎರಡೂ ಊರಿನ ಜನರು ಪರಸ್ಪರ ಬಡಿದಾಡುತ್ತಿದ್ದಾರೆ. ನಾಟಕದ ಕೊನೆಯಲ್ಲಿ ಅಭಿಜಿತ್‌ನ ಸತತ ಪ್ರಯತ್ನದಿಂದ ಎಲ್ಲಾ ಕಟ್ಟೆಗಳು ಎಲ್ಲಾ ಬಗೆಯ ಸಂಕೋಲೆಗಳನ್ನು ಕಳಚಿಕೊಂಡು ಎಲ್ಲವೂ ಮುಕ್ತವಾಗುತ್ತವೆ. ಮುಕ್ತಧಾರ ತನ್ನ ಒಡಲಲ್ಲಿ ಅಭಿಜಿತ್‌ನನ್ನು ಸೆಳೆದುಕೊಂಡು ಆತನೂ ಎಲ್ಲದರಿಂದ ಮುಕ್ತನಾಗುತ್ತಾನೆ.

ನಾಟಕದ ನಿರೂಪಣಾ ಶೈಲಿ ಸರಳರೇಖೆಯಲ್ಲಿದ್ದರೂ ನಾಟಕದ ಸ್ವರೂಪ ಮತ್ತು ಬಂಧವು ಸಂಕೀರ್ಣವಾಗಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಪಾತ್ರಗಳು ನಾಟಕದಲ್ಲಿವೆ. ಪ್ರತಿಯೊಂದು ದೃಶ್ಯವೂ ಮತ್ತು ಪ್ರತಿಯೊಂದು ಪಾತ್ರವೂ ಯಾವುದೋ ಒಂದು ಅನೂಹ್ಯ ಬಂಧನದಿಂದ ಕಳಚಿ ಮುಕ್ತವಾಗಲು ಹವಣಿಸುತ್ತಿರುವಂತಿದೆ. ತಳಮಳ, ಆತಂಕ, ಪ್ರಕ್ಷುಬ್ಧತೆ, ಬೇಗುದಿ ಮತ್ತು ಅಸಹನೆ ನಾಟಕದ ತುಂಬೆಲ್ಲಾ ಹರಡಿಕೊಂಡಿದೆ. ಹಾಸ್ಯವೂ ಗಾಂಭೀರ್ಯದ ಮುಸುಕು ಹೊದ್ದು ಇಡೀ ನಾಟಕವೂ ಒಂದು ವಿಶ್ರಾಂತಿ ರಹಿತ ಸುದೀರ್ಘ ಪ್ರಯಾಣದಂತಿದೆ. ಪ್ರಕೃತಿಯ ವಿರುದ್ದ ತಂತ್ರಜ್ಞಾನ, ವಿವೇಚನೆಯ ವಿರುದ್ಧ ಅವಿವೇಕ, ಶಾಂತಿಯ ವಿರುದ್ಧ ಅಸಹಿಷ್ಣುತೆ ಹೀಗೆ ನಾನಾ ರೀತಿಯ ಇಬ್ಬಗೆಯ ವೈರುಧ್ಯಗಳನ್ನು ನಾಟಕ ಎತ್ತಿತೋರಿಸುತ್ತದೆ. ಸರ್ವಾಧಿಕಾರದಿಂದ ಹುಟ್ಟುವ ಹಿಂಸೆ ಮತ್ತು ಶೋಷಣೆ ದುರಾಡಳಿತದ ಪರಿಣಾಮಗಳಿಗೆ ನಾಟಕ ಪ್ರತಿರೋಧದ ದಾರಿಯನ್ನು ಉದ್ದಕ್ಕೂ ಶೋಧಿಸುತ್ತದೆ.

ನಾಟಕದ ರಚನೆಯಾದ ಕಾಲಕ್ಕೆ ಈ ಎಲ್ಲಾ ಅಂಶಗಳು ಎಷ್ಟು ಪ್ರಸ್ತುತಗೊಂಡಿದ್ದವೋ ಅದಕ್ಕಿಂತ ಭಿನ್ನವಾಗಿ ಮತ್ತು ಇನ್ನಷ್ಟು ತೀವ್ರವಾಗಿ ಈ ನಾಟಕ ಇವತ್ತಿನ ಕಾಲಕ್ಕೆ ಸ್ಪಂದಿಸುತ್ತದೆ. ಯಾವಾಗಲೋ ಯಾವುದೋ ಕಾರಣಕ್ಕೆ ತಡೆಹಿಡಿದು ನಿಲ್ಲಿಸಿದ ಭಾವವೊಂದು ಪ್ರಬಲ ಆವೇಗದ ಒತ್ತಡಕ್ಕೆ ಸಿಲುಕಿ ನಿಧಾನಕ್ಕೆ ಬೃಹತ್ ಶಕ್ತಿಯಾಗಿ ಬಲಗೊಳ್ಳುತ್ತಾ ಕಡೆಯಲ್ಲಿ ಸ್ಫೋಟವಾಗುವ ಹಾಗೆ ನಾಟಕ ಕೊನೆಯಾಗುತ್ತದೆ. ಉದ್ವೇಗದ ಪ್ರವಾಹಕ್ಕೆ ಸಿಲುಕಿ ಎಲ್ಲವೂ ಕೊಚ್ಚಿಹೋಗುವಂತೆ ನಾಟಕದ ಮುಕ್ತಾಯವಿದೆ. ನದಿ ಮತ್ತು ಜಲಪಾತದ ತಡೆರಹಿತ ಧಾರೆಗಳು ಬಿಡುಗಡೆಯ ಪ್ರತೀಕವಾಗುತ್ತವೆ. ತಡೆಹಿಡಿದ ಎಲ್ಲವೂ ನಿರಂತರ ಹೋರಾಟದ ಫಲವಾಗಿ ಒಂದಲ್ಲಾ ಒಂದು ದಿನ ಮುಕ್ತವಾಗುವ ಆಶಯದ ಸಂಕೇತ ನಾಟಕದ ತುದಿಯಲ್ಲಿ ಮೂರ್ತರೂಪ ಪಡೆಯುತ್ತದೆ.

ಅಭಿಜಿತ್‌ನ ಪಾತ್ರದ ಹುಟ್ಟು ಮತ್ತು ಅಂತ್ಯ ಈ ಎರಡೂ ಅಂಶಗಳು ಸಾತ್ವಿಕ ಹೊರಾಟಗಾರನೊಬ್ಬನ ಅಂತರಂಗದ ಅದಮ್ಯ ಪ್ರೀತಿ, ಛಲ, ಶಕ್ತಿ, ನಿಸ್ವಾರ್ಥತೆ ಮತ್ತು ಬಹಿರಂಗದಲ್ಲಿರುವ ದೃಢನಿಲುವಿಗೆ ಲಾಂಛನವಾಗುತ್ತದೆ. ಮಮತೆಯಿಂದ ತನ್ನ ಒಡಲೊಳಗೆ ಸೆಳೆದುಕೊಂಡು ಪೋಷಿಸುವ ತಾಯಿಯ ಹಾಗೆ ನದಿಯ ಚಿತ್ರಣ ಬರುತ್ತದೆ. ಬಂಗಾಳದ ಅತ್ಯತ್ತಮ ಸಾಹಿತ್ಯಗಳನ್ನು ಕನ್ನಡಕ್ಕೆ ಅನುವಾದಿಸಿದ ಅಹೋಬಲ ಶಂಕರರು ‘ಮುಕ್ತಧಾರ’ವನ್ನೂ ಬಹಳ ಹಿಂದೆಯೇ ಕನ್ನಡಕ್ಕೆ ತಂದಿದ್ದಾರೆ. ಈ ವರ್ಷದ ನೀನಾಸಮ್ ತಿರುಗಾಟ ತಂಡಕ್ಕೆ ಪ್ರವೀಣ್ ಎಡಮಂಗಲ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಆಧುನಿಕ ರಂಗಭೂಮಿಯ ಸಮಕಾಲೀನ ರಂಗ ಸಜ್ಜಿಕೆ ಮತ್ತು ರಂಗದ ಮುಂಭಾಗದ ವಿಶೇಷ ಬಳಕೆಯ ಮುಖಾಂತರ ಈ ನಾಟಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತದೆ.

  ಫೋಟೊ: ರಮೇಶ್ ಪಿ.ಕೆ.