ರಾಜ್ಯದಲ್ಲಿ ಹಾಲು ಉತ್ಪಾದನೆ ದಿನಕ್ಕೆ 10 ಲಕ್ಷ ಲೀಟರ್ ಇಳಿಕೆ

Update: 2023-01-17 05:45 GMT

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ 2022ರ ಜುಲೈನಿಂದೀಚೆಗೆ ಖರೀದಿ ಮಾಡುವ ಹಾಲಿನಲ್ಲಿ ದಿನಕ್ಕೆ ಒಂಬತ್ತರಿಂದ 10 ಲಕ್ಷ ಲೀಟರ್ ಕುಸಿತವಾಗಿದೆ. ಉನ್ನತ ಮೂಲಗಳ ಪ್ರಕಾರ ಈ ಹೈನು ಸಹಕಾರ ಸಂಸ್ಥೆ ದಿನಕ್ಕೆ ಸುಮಾರು 26 ಲಕ್ಷ ಹಾಲು ಉತ್ಪಾದಕರಿಂದ 75.6 ಲಕ್ಷ ಲೀಟರ್ ಹಾಲು ಖರೀದಿಸುತ್ತಿದೆ.

2021-22ರಲ್ಲಿ ಸರಾಸರಿ 84.5 ಲಕ್ಷ ಲೀಟರ್ ಹಾಲು ಖರೀದಿಸಲಾಗುತ್ತಿತ್ತು. ಲಭ್ಯವಿರುವ ಐದು ವರ್ಷಗಳ ಅಂಕಿ ಅಂಶಗಳ ಆಧಾರದಲ್ಲಿ ಹಾಲು ಖರೀದಿಯಲ್ಲಿ ಇಳಿಕೆ ಉಂಟಾಗಿರುವುದು ಇದೇ ಮೊದಲು ಎಂದು deccanherald.com ವರದಿ ಮಾಡಿದೆ.

ಚರ್ಮಗಂಟು ರೋಗ, ಕಾಲು ಬಾಯಿ ರೋಗ ಮತ್ತು ಕಳಪೆ ಮೇವು ಲಭ್ಯತೆ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಕುಂಠಿತಗೊಳ್ಳಲು ಪ್ರಮುಖ ಕಾರಣಗಳು ಎನ್ನಲಾಗಿದೆ. ಹಸಿರು ಹುಲ್ಲು ಲಭ್ಯತೆ ಕೊರತೆಯ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಉತ್ಪಾದನೆ ಮತ್ತಷ್ಟು ಕುಂಠಿತಗೊಳ್ಳುವ ಸಾಧ್ಯತೆ ಇದೆ. 

ಹಾಲಿನ ಕೊರತೆಯಿಂದಾಗಿ ತುಪ್ಪ, ಬೆಣ್ಣೆ, ಪನೀರ್ ಮತ್ತು ಇತರ ಹೈನು ಉತ್ಪನ್ನಗಳ ಬೆಲೆ ಕೂಡಾ ಹೆಚ್ಚುತ್ತಿದೆ. ಉದಾಹರಣೆಗೆ ತುಪ್ಪ ಹಾಗೂ ಬೆಣ್ಣೆಯ ಬೆಲೆ ಪ್ರತಿ ಕಿಲೋಗ್ರಾಂಗೆ 30 ರಿಂದ 40 ರೂಪಾಯಿ ಹೆಚ್ಚಿದೆ. ಕೆಎಂಎಫ್ ಅಡಿಯಲ್ಲಿ ಬರುವ ರಾಜ್ಯದ 16 ಹಾಲು ಯೂನಿಯನ್‌ಗಳು ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಪೂರೈಸುತ್ತಿದ್ದ ಹಾಲು ಪುಡಿ ಉತ್ಪಾದನೆಯನ್ನು ಕುಂಠಿತಗೊಳಿಸಿವೆ.

"ರಾಜ್ಯದಲ್ಲಿ ಹಾಲಿನ ಬೇಡಿಕೆ ಹೆಚ್ಚುತ್ತಿರುವ ಸಂದರ್ಭಧಲ್ಲಿ ಉತ್ಪಾದನೆ ಕುಸಿದಿದೆ. ಕಡಿಮೆ ಹಾಲು ಪೂರೈಕೆಯಿಂದಾಗಿ ಸಣ್ಣ ಚಿಲ್ಲರೆ ಮಳಿಗೆಗಳು ಮುಚ್ಚಿವೆ. ಖರೀದಿ ಆಧರಿತ ಮಾರಾಟವನ್ನು ಬಿಗಿಗೊಳಿಸಲಾಗುತ್ತಿದೆ'' ಎಂದು ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಬಿ.ಪಿ. ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಹಾಲು ಉತ್ಪಾದನೆ ರಾಜ್ಯದಲ್ಲೇ ಗರಿಷ್ಠ ಅಂದರೆ ದಿನಕ್ಕೆ 70 ಸಾವಿರ ಲೀಟರ್‌ನಷ್ಟು ಕಡಿಮೆಯಾಗಿದೆ.

Similar News