ಜಗ ದಗಲ

Update: 2023-01-17 06:57 GMT

ಬೆಕ್ಕಿನ ಪುರಾಣ

ಈಗ ಮಾತ್ರವಲ್ಲ, ಮಧ್ಯಯುಗದಲ್ಲಿಯೂ ಬೆಕ್ಕುಗಳು ಅಪಖ್ಯಾತಿಯನ್ನೇ ಹೊಂದಿದ್ದವು. ವಾಮಾಚಾರದೊಂದಿಗಿನ ಸಂಬಂಧದ ಹಿನ್ನೆಲೆಯಲ್ಲಿ ಅವುಗಳನ್ನು ಅನುಮಾನದಿಂದ ನೋಡಲಾಗುತ್ತಿತ್ತು. ಇದರ ನಡುವೆಯೂ ಪ್ರತಿಷ್ಠೆಯ ವಿಷಯವಾಗಿಯೂ ಬೆಕ್ಕುಗಳನ್ನು ಕಾಣುವ, ಸಾಕುವ ಒಂದು ವರ್ಗವಿತ್ತು ಮತ್ತು ಮಧ್ಯಕಾಲೀನ ಸಾಕಷ್ಟು ಮನೆಗಳಲ್ಲಿ ಬೆಕ್ಕುಗಳು ಇದ್ದವು ಎಂಬುದನ್ನು ಅನೇಕ ಮಧ್ಯಕಾಲೀನ ಹಸ್ತಪ್ರತಿಗಳು ಗುರುತಿಸಿವೆ.

ಇಂತಹ ಹಸ್ತಪ್ರತಿಗಳನ್ನು ಉಲ್ಲೇಖಿಸುವ ಪರಿಣತರ ಪ್ರಕಾರ, ಮಧ್ಯಯುಗದಲ್ಲಿ, ಪುರುಷರು ಮತ್ತು ಮಹಿಳೆಯರು ಹೆಚ್ಚಾಗಿ ಅವರು ಸಾಕಿದ ಪ್ರಾಣಿಗಳ ಮೂಲಕ ಗುರುತಿಸಲ್ಪಡುತ್ತಿದ್ದುದು ಸಾಮಾನ್ಯವಾಗಿತ್ತು. ಉದಾಹರಣೆಗೆ, ಸಾಕು ಕೋತಿಗಳನ್ನು ವಿಲಕ್ಷಣವೆಂದು ಪರಿಗಣಿಸಲಾಗುವುದರ ನಡುವೆಯೂ ಅವುಗಳ ಮಾಲಕರನ್ನು ಶ್ರೀಮಂತರು ಎಂದು ಗುರುತಿಸುವುದಿತ್ತು. ಏಕೆಂದರೆ ಅವುಗಳನ್ನು ದೂರದ ದೇಶಗಳಿಂದ ತರಿಸಲಾಗುತ್ತಿತ್ತು. ಸಾಕುಪ್ರಾಣಿಗಳು ಶ್ರೀಮಂತರ ವೈಯಕ್ತಿಕ ಗುರುತಿನ ಭಾಗವಾಗಿದ್ದವು. ವಿಶೇಷ ಗಮನ, ವಾತ್ಸಲ್ಯ ಮತ್ತು ಉತ್ತಮ ಗುಣಮಟ್ಟದ ಆಹಾರದೊಂದಿಗೆ ಅದ್ದೂರಿಯಾಗಿ ಅವುಗಳನ್ನು ನೋಡಿಕೊಳ್ಳಲಾಗುತ್ತಿತ್ತು. ಹಾಗಾಗಿ ಅವು ಮನುಷ್ಯರ ಉನ್ನತ ಸ್ಥಾನಮಾನ ಸೂಚಕಗಳಾಗಿದ್ದವು. ಸ್ಥಾನಮಾನ ಸೂಚಿಸಲು ಬೆಕ್ಕುಗಳು ಮತ್ತು ನಾಯಿಗಳೊಂದಿಗೆ ಭಾವಚಿತ್ರದಲ್ಲಿ ಕಾಣಿಸಿಕೊಳ್ಳುವುದೂ ಸಾಮಾನ್ಯವಾಗಿತ್ತು.

ಮಧ್ಯಕಾಲೀನ ಕುಟುಂಬದಲ್ಲಿ ಸಾಕುಪ್ರಾಣಿಯಾಗಿ ಬೆಕ್ಕಿನ ಸ್ಥಾನಮಾನವನ್ನು ಸೂಚಿಸುವ ಹಲವು ವಿವರಗಳನ್ನು ವಿದ್ವಾಂಸರು ಗಮನಿಸಿದ್ದಾರೆ. ಇಂದಿನಂತೆಯೇ, ಮಧ್ಯಕಾಲೀನ ಕುಟುಂಬಗಳು ತಮ್ಮ ಬೆಕ್ಕುಗಳಿಗೆ ಹೆಸರನ್ನು ನೀಡುತ್ತಿದ್ದರು. ವಿಶೇಷ ಆರೈಕೆ ಮಾಡಲಾಗುತ್ತಿತ್ತು. ವಿಶೇಷ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿತ್ತು. ಫ್ರಾನ್ಸ್‌ನ 14ನೇ ಶತಮಾನದ ರಾಣಿ, ಬವೇರಿಯಾದ ಇಸಾಬೌ ತನ್ನ ಸಾಕುಪ್ರಾಣಿಗಳಿಗಾಗಿ ದೊಡ್ಡಮಟ್ಟದದಲ್ಲಿ ಹಣವನ್ನು ಖರ್ಚು ಮಾಡಿದ್ದಳೆಂಬುದನ್ನು ಉಲ್ಲೇಖಿಸುವ ಹಸ್ತಪ್ರತಿಗಳಲ್ಲಿ, ಅವಳು ತನ್ನ ಮುದ್ದಿನ ಅಳಿಲಿಗಾಗಿ ಮುತ್ತುಗಳಿಂದ ಕಸೂತಿ ಮಾಡಿದ ಕಾಲರ್ ಅನ್ನು ಮಾಡಿಸಿ, ಚಿನ್ನದ ಬಕಲಿನಿಂದ ಅದನ್ನು ಜೋಡಿಸಿದ್ದಳು. ಬೆಕ್ಕಿಗೆ ವಿಶೇಷ ಹೊದಿಕೆಯನ್ನು ಮಾಡಲು ಹೊಳೆಯುವ ಹಸಿರು ಬಟ್ಟೆಯನ್ನು ಖರೀದಿಸಲಾಗಿತ್ತು ಎಂಬುದರ ಉಲ್ಲೇಖವಿರುವುದನ್ನು ಸಂಶೋಧಕರು ತೋರಿಸಿದ್ದಾರೆ.

ಬೆಕ್ಕುಗಳು ವಿದ್ವಾಂಸರ ಪಾಲಿಗೂ ವಿಶೇಷವಾಗಿದ್ದವು. 16ನೇ ಶತಮಾನದಲ್ಲಿ ಬೆಕ್ಕುಗಳ ಬಗ್ಗೆ ಸ್ತೋತ್ರಗಳು ಕೂಡ ಇದ್ದವೆನ್ನಲಾಗುತ್ತದೆ. ಒಂದು ಸ್ತೋತ್ರದಲ್ಲಿ ಬೆಕ್ಕನ್ನು ವಿದ್ವಾಂಸರ ಬೆಳಕು ಮತ್ತು ಆತ್ಮೀಯ ಒಡನಾಡಿ ಎಂದು ವಿವರಿಸಲಾಗಿದೆ. ಇಂತಹ ಶ್ಲಾಘನೆಗಳು ಬೆಕ್ಕುಗಳೊಂದಿಗಿನ ಬಲವಾದ ಭಾವನಾತ್ಮಕ ಬಾಂಧವ್ಯವನ್ನು ಸೂಚಿಸುತ್ತವೆ ಮತ್ತು ಬೆಕ್ಕುಗಳು ಅವುಗಳ ಮಾಲಕರ ಪಾಲಿಗೆ ಅದೆಷ್ಟು ಹೆಚ್ಚಿನವಾಗಿದ್ದವು ಎಂಬುದನ್ನು ತೋರಿಸುತ್ತವೆ.

ಮಧ್ಯಕಾಲೀನ ಧಾರ್ಮಿಕ ಸ್ಥಳಗಳಲ್ಲಿಯೂ ಸ್ಥಾನಮಾನದ ಸಂಕೇತವಾಗಿ ಬೆಕ್ಕುಗಳು ಪ್ರಮುಖವಾಗಿ ಕಂಡುಬರುತ್ತವೆ. ಅನೇಕ ಮಧ್ಯಕಾಲೀನ ಹಸ್ತಪ್ರತಿಗಳು, ಬೆಕ್ಕುಗಳೊಂದಿಗಿನ ಸನ್ಯಾಸಿಗಳ ಚಿತ್ರಗಳ ಬಗ್ಗೆ ಉಲ್ಲೇಖಿಸಿರುವುದಿದೆ. ಆದರೂ, ಇದರ ಬಗ್ಗೆ ತುಂಬ ಭಿನ್ನಾಭಿಪ್ರಾಯಗಳೂ ಇವೆ. ಮಧ್ಯಕಾಲೀನ ಧರ್ಮೋಪದೇಶ ಸಾಹಿತ್ಯದಲ್ಲಿ, ಬೆಕ್ಕುಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ಟೀಕೆಗಳೇ ಹೆಚ್ಚಿವೆ. ಬೆಕ್ಕುಗಳನ್ನು ನಿಷ್ಪ್ರಯೋಜಕ ಮತ್ತು ಶ್ರೀಮಂತರ ಅತಿಯಾದ ಶೋಕಿಯ ಸಾಧನಗಳೆಂದು ಕೆಲವರು ಹೇಳಿದ್ದಿದೆ. ಬೆಕ್ಕುಗಳು ದೆವ್ವದೊಂದಿಗೆ ಸಂಬಂಧ ಹೊಂದಿವೆ ಎಂದು ದಾಖಲಿಸಲಾಗಿದೆ. ಇಂತಹ ಪ್ರತಿಪಾದನೆಯ ಕೆಲವರು ಬೆಕ್ಕುಗಳನ್ನು ವ್ಯಾಪಕವಾಗಿ ಕೊಂದಿದ್ದರಿಂದ ಇಲಿಗಳ ಸಂಖ್ಯೆ ಹೆಚ್ಚಿ, ಪ್ಲೇಗಿನಂಥ ಹಾನಿಕಾರಕ ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದೂ ಹೇಳಲಾಗುತ್ತದೆ. ಪವಿತ್ರ ಸ್ಥಳಗಳಲ್ಲಿ ಬೆಕ್ಕುಗಳಿಗೆ ಸ್ಥಾನವಿಲ್ಲ ಎಂದು ಹಲವರು ಭಾವಿಸಿದ್ದರೂ, ಯಾವುದೇ ಔಪಚಾರಿಕ ನಿಯಮಗಳು ಇದ್ದಂತೆ ತೋರುತ್ತಿಲ್ಲ, ಆದಾಗ್ಯೂ, ಧಾರ್ಮಿಕ ಸಮುದಾಯಗಳ ಸದಸ್ಯರಿಗೆ ಬೆಕ್ಕುಗಳನ್ನು ಸಾಕಲು ಅನುಮತಿಯಿರಲಿಲ್ಲ ಎಂದು ಹೇಳಲಾಗುತ್ತದೆ.

ಇತಿಹಾಸದ ಮಾರ್ಗ

ಈ ಮಾರ್ಗವನ್ನು ಸಾಮ್ರಾಜ್ಯಗಳ ಕೊಂಡಿಯಂತೆ ಬಳಸಲಾಗಿತ್ತು. ಮತ್ತು ಅದು ಜೋರ್ಡಾನ್‌ನ ಕೆಲವು ಪ್ರಮುಖ ಐತಿಹಾಸಿಕ ತಾಣಗಳನ್ನು ಸಂಪರ್ಕಿಸುತ್ತಿತ್ತು. ಅದು ರಾಜನ ಹೆದ್ದಾರಿ ಎಂದೇ ಬಣ್ಣಿತವಾಗಿರುವ, ಜೋರ್ಡಾನ್‌ನ ಇತಿಹಾಸವನ್ನು ತೆರೆದಿಡುವ ಮಾರ್ಗ.

ಕಿಂಗ್ಸ್ ಹೈವೇ ಅಥವಾ ದರ್ಬ್ ಅರ್-ರಸೀಫ್ ಅಂದರೆ ಅರೇಬಿಕ್ ಭಾಷೆಯಲ್ಲಿ ಸುಸಜ್ಜಿತ ರಸ್ತೆ ಎಂದು ಕರೆಯಲ್ಪಡುವ ಈ ಮಾರ್ಗವು ಪ್ರಪಂಚದ ಅತ್ಯಂತ ಹಳೆಯ, ನಿರಂತರವಾಗಿ ಬಳಸುವ ರಸ್ತೆಗಳಲ್ಲಿ ಒಂದೆಂದು ನಂಬಲಾಗಿದೆ. ಸಹಸ್ರಮಾನಗಳವರೆಗೆ, ವ್ಯಾಪಾರಿಗಳು, ಯಾತ್ರಿಕರು, ಯೋಧರು ಮತ್ತು ರಾಜರು ಜೋರ್ಡಾನ್‌ನ ಮಧ್ಯ ಎತ್ತರದ ಪ್ರದೇಶಗಳ ಮೂಲಕ ಉತ್ತರದಿಂದ ದಕ್ಷಿಣಕ್ಕೆ ಪ್ರಯಾಣಿಸಿದರು ಮತ್ತು ಈ ಮಾರ್ಗವು ಪ್ರಾಚೀನ ರಾಜ್ಯಗಳು ಮತ್ತು ಸಾಮ್ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿತ್ತು.

ಇಂದಿನ ಆಧುನಿಕ ಡಾಂಬರು ರಸ್ತೆ ಅದೇ ಪುರಾತನ ಮಾರ್ಗವನ್ನು ಮರೆಸಿದೆ. ಜೋರ್ಡಾನ್ ನದಿಯ ಉದ್ದಕ್ಕೂ ಸಿರಿಯಾದಿಂದ ದಕ್ಷಿಣಕ್ಕೆ ಆ ಮಾರ್ಗ ರೋಮನ್ ಅವಶೇಷಗಳು, ಬೈಜಾಂಟೈನ್ ಮೊಸಾಯಿಕ್ಸ್, ಕ್ರುಸೇಡರ್ ಕೋಟೆಗಳು ಮತ್ತು ಪ್ರಾಚೀನ ನಗರವಾದ ಪೆಟ್ರಾ ಮೂಲಕ ಹಾದುಹೋಗುತ್ತಿತ್ತು. ಈ ಮಾರ್ಗವನ್ನು ನಬಾಟಿಯನ್ ಅವಧಿಯಲ್ಲಿ ಅಂದರೆ ಕ್ರಿ.ಪೂ. 4ನೇ ಶತಮಾನದಿಂದ ಸರಿಸುಮಾರು ಕ್ರಿ.ಶ. 106ರವರೆಗೆ ಬಳಸಲಾಗುತ್ತಿತ್ತು ಮತ್ತು ಬಹುಶಃ ಅದಕ್ಕೂ ಮುಂಚೆಯೇ, ಕಬ್ಬಿಣದ ಯುಗದಲ್ಲಿ ಬಳಕೆಯಲ್ಲಿತ್ತು ಎಂದು ಪುರಾತತ್ವಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

ಕಿಂಗ್ಸ್ ಹೈವೇ ಎಂದು ಕರೆಯಲ್ಪಡುವ ಜೋರ್ಡಾನ್ ಅನ್ನು ಹಾದುಹೋಗುವ ರಸ್ತೆಯನ್ನು ಬೈಬಲ್‌ನ ಹಳೆಯ ಒಡಂಬಡಿಕೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸಕ್ತ ಹೆದ್ದಾರಿಯ ಉದ್ದಕ್ಕೂ ಎಡೋಮೈಟ್, ನಬಾಟಿಯನ್, ರೋಮನ್, ಬೈಜಾಂಟೈನ್ ಮತ್ತು ಇಸ್ಲಾಮಿಕ್ ಉಪಸ್ಥಿತಿಯನ್ನು ತೋರಿಸುವ ಪುರಾತತ್ವ ಶಾಸ್ತ್ರದ ಪುರಾವೆಗಳು ಇರುವುದರಿಂದ, ಈ ರಸ್ತೆಯು ಏನಿಲ್ಲವೆಂದರೂ ಕ್ರಿ.ಪೂ. 8ನೇ ಶತಮಾನದಿಂದಲೂ ನಿರಂತರ ಬಳಕೆಯಲ್ಲಿದೆ ಎಂದು ಸೂಚಿಸುತ್ತದೆ ಎನ್ನುತ್ತಾರೆ ಪುರಾತತ್ವಶಾಸ್ತ್ರಜ್ಞರು.

ಪ್ರಾಚೀನ ಕಾಲದಲ್ಲಿ, ಈ ಹೆದ್ದಾರಿಯು ಅರೇಬಿಯ, ಕೆಂಪು ಸಮುದ್ರ ಮತ್ತು ಈಜಿಪ್ಟ್ ಅನ್ನು ಸಂಪರ್ಕಿಸುವ ಪ್ರಮುಖ ವ್ಯಾಪಾರ ಮಾರ್ಗವಾಗಿತ್ತು. ಅರೇಬಿಯದಿಂದ ಧೂಪದ್ರವ್ಯ ಮತ್ತು ಮಸಾಲೆಗಳನ್ನು ಸಾಗಿಸುವ ಕಾರವಾನ್‌ಗಳು ಅಭಿವೃದ್ಧಿ ಹೊಂದುತ್ತಿರುವ ನಬಾಟಿಯನ್ ರಾಜಧಾನಿ ಪೆಟ್ರಾಗೆ ಹೋಗಲು ಈ ಮಾರ್ಗವನ್ನು ಬಳಸುತ್ತಿದ್ದರು. ರೋಮನ್ ಅವಧಿಯಲ್ಲಿ, ಚಕ್ರವರ್ತಿ ಟ್ರಾಜನ್ ಕಾಲದಲ್ಲಿ ಇದನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿತ್ತು. ಈ ಮಾರ್ಗದ ಮೇಲೆಯೇ ನಿರ್ಮಾಣವಾಗಿರುವ ಆಧುನಿಕ ರಸ್ತೆಯ ಬದಿಯಲ್ಲಿ ಇನ್ನೂ ರೋಮನ್ ಮೈಲಿಗಲ್ಲುಗಳನ್ನು ಕಾಣಬಹುದು ಎನ್ನುತ್ತಾರೆ ಪರಿಣತರು. ಶತಮಾನಗಳಿಂದಲೂ ಇದು ಪ್ರಮುಖ ಯಾತ್ರಾ ಮಾರ್ಗವೂ ಆಗಿತ್ತು ಎಂಬುದನ್ನು ಗುರುತಿಸಲಾಗಿದೆ. ಅನೇಕ ಪ್ರಾಚೀನ ನಾಗರಿಕತೆಗಳು ಬಳಸಿದ ಮಾರ್ಗವಾಗಿ ಅದು ಮಹತ್ವ ಪಡೆದಿತ್ತು.

ಅದು ಜೋರ್ಡಾನ್‌ನ ಹಲವು ಹಾಸುಗಳ ಪರಂಪರೆಯ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ದೇಶದ ಅತ್ಯಂತ ಫಲವತ್ತಾದ ಭಾಗಗಳ ಮೂಲಕ ಹಾದುಹೋಗಿದ್ದ ಮಾರ್ಗ ಅದು. ಬುಗ್ಗೆಗಳು ಮತ್ತು ನೀರಿನ ಮೂಲಗಳನ್ನು ಹೊಂದಿರುವ ಪ್ರದೇಶ, ಕೃಷಿ ಭೂಮಿ ಎಲ್ಲವೂ ಅದರ ಎರಡೂ ಬದಿಗಳಲ್ಲಿದ್ದವು.

ಡೈನೋಸಾರ್ ಅವಶೇಷ

ಕಳೆದ ದಶಕದಲ್ಲಿ ಪ್ರಮುಖ ಪಳೆಯುಳಿಕೆ ನಿಕ್ಷೇಪವಾಗಿ ಹೊರಹೊಮ್ಮಿರುವ ಚಿಲಿಯ ಪ್ಯಾಟಗೋನಿಯಾದ ನಿರ್ಜನ ಕಣಿವೆಯಲ್ಲಿ ಮೆಗಾರಾಪ್ಟರ್ ಸೇರಿದಂತೆ ನಾಲ್ಕು ಜಾತಿಯ ಡೈನೋಸಾರ್‌ಗಳ ಅವಶೇಷಗಳನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಈ ವಿಶಿಷ್ಟ ಡೈನೋಸಾರ್‌ಗಳ ಕುರಿತಾದ ವಿವರಗಳು ಸಿಕ್ಕಿವೆ.

ಪಳೆಯುಳಿಕೆಗಳು ಅರ್ಜೆಂಟೀನಾದ ಗಡಿಯ ಸಮೀಪ, ದಕ್ಷಿಣ ಚಿಲಿಯ ಲಾಸ್ ಚೈನಾಸ್ ಕಣಿವೆಯಲ್ಲಿರುವ ಸೆರೊ ಗೈಡೋದಲ್ಲಿ ಕಂಡುಬಂದಿವೆ. ಈ ಪ್ರದೇಶದಲ್ಲಿ ಹಿಂದೆ ಕಂಡಿರದ ಡೈನೋಸಾರ್‌ಗಳ ಜಾತಿಗೆ ಸೇರಿದವುಗಳಿವು ಎಂದು ಸಂಶೋಧಕರು ಹೇಳಿದ್ದಾರೆ.

ಲಾಸ್ ಚೈನಾಸ್ ಕಣಿವೆಯಲ್ಲಿ ಈ ಹಿಂದೆ ಪತ್ತೆಯಾಗಿರದ ಹೊಸ ಪ್ರಭೇದಗಳ ಪಳೆಯುಳಿಕೆ ಸಿಕ್ಕಿರುವುದು ವೈಜ್ಞಾನಿಕವಾಗಿ ನಿಜಕ್ಕೂ ಬಹಳ ರೋಮಾಂಚನಕಾರಿ ಎಂದು ಸಂಶೋಧಕರು ಭಾವಿಸಿದ್ದಾರೆ. ಇನಾಚ್ ಚಿಲಿ ವಿಶ್ವವಿದ್ಯಾನಿಲಯ ಮತ್ತು ಟೆಕ್ಸಾಸ್ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ನಡೆದ ಸಂಶೋಧನೆ ಇದಾಗಿದೆ.

ಥೆರೋಪಾಡ್ ಕುಟುಂಬಕ್ಕೆ ಸೇರಿದ ಮೆಗಾರಾಪ್ಟರ್ ಸೇರಿದಂತೆ ನಾಲ್ಕು ಜಾತಿಯ ಡೈನೋಸಾರ್‌ಗಳ ಹಲ್ಲುಗಳು ಮತ್ತು ಪೋಸ್ಟ್‌ಕ್ರೇನಿಯಲ್ ಮೂಳೆ ತುಣುಕುಗಳು ಸೇರಿದಂತೆ ವಿವಿಧ ಅವಶೇಷಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಈ ಮಾಂಸಾಹಾರಿ ಡೈನೋಸಾರ್‌ಗಳು ರಾಪ್ಟರ್ ಉಗುರುಗಳು, ಸಣ್ಣ ಹಲ್ಲುಗಳು ಮತ್ತು ದೊಡ್ಡ ಮೇಲ್ಭಾಗದ ಕೈಕಾಲುಗಳನ್ನು ಹೊಂದಿದ್ದವು. ಸಂಶೋಧನೆಯ ಪ್ರಕಾರ, ಅವು 66ರಿಂದ 75 ದಶಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿದ್ದವು.

ಎರಡು ಪಕ್ಷಿ ಪ್ರಭೇದಗಳ ಅವಶೇಷಗಳನ್ನು ಸಹ ಇದೇ ವೇಳೆ ಶೋಧಕರು ಕಂಡುಕೊಂಡಿದ್ದಾರೆ. ಎನಾಂಟಿಯೊರ್ನಿಥೆ ಎಂಬ ಮೆಸೊಜೊಯಿಕ್‌ನ ಅತ್ಯಂತ ವೈವಿಧ್ಯಮಯ ಮತ್ತು ಹೇರಳವಾಗಿರುವ ಪಕ್ಷಿಗಳ ಅವಶೇಷಗಳು ಅವಾಗಿವೆ.

ಪ್ರತಿಷ್ಠಿತ ಜರ್ನಲ್ ಆಫ್ ಸೌತ್ ಅಮೆರಿಕನ್ ಅರ್ಥ್ ಸೈನ್ಸಸ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಪ್ರಕಟವಾದ ಅಧ್ಯಯನ ಬರಹದಲ್ಲಿ ವಿಜ್ಞಾನಿಗಳ ಈ ಕೆಲಸವನ್ನು ಉಲ್ಲೇಖಿಸಲಾಗಿದೆ.