ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸಾಕ್ಷಿಗಳ ಗೋಪ್ಯ ವಿಚಾರಣೆ ಆರಂಭಿಸಿದ ಕೋರ್ಟ್

Update: 2023-01-17 14:07 GMT

ಬೆಂಗಳೂರು, ಜ.17: ಸುಮಾರು ಆರು ವರ್ಷಗಳ ಹಿಂದೆ ಗುಂಡೇಟಿಗೆ ಬಲಿಯಾಗಿದ್ದ ಹಿರಿಯ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಕೇಸ್‍ಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಾಕ್ಷಿಗಳ ಗೋಪ್ಯ ವಿಚಾರಣೆ ನಡೆಸಲು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮೆಮೊವನ್ನು ಬೆಂಗಳೂರಿನ ವಿಶೇಷ ಕೋರ್ಟ್, ಇತ್ತೀಚೆಗೆ ಮಾನ್ಯ ಮಾಡಿದೆ. ಜ.17ರಿಂದ ಗೋಪ್ಯ ವಿಚಾರಣೆ ಆರಂಭವಾಗಿದೆ. 

ಕೋಕಾ ಕಾಯಿದೆಯ ಅಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಪೀಠದಲ್ಲಿ ನಡೆಯಿತು.

ವಿಶೇಷ ಸರಕಾರಿ ಅಭಿಯೋಜಕರು, ಸಾಕ್ಷಿಗಳ ಗೋಪ್ಯ ವಿಚಾರಣೆ ನಡೆಸಲು ಮೆಮೊ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿಗಳಿಗೆ ಸಮನ್ಸ್ ಜಾರಿಗೆ ಆದೇಶಿಸಲಾಗಿದೆ ಎಂದು ನ್ಯಾಯಪೀಠವು ಈ ಹಿಂದಿನ ವಿಚಾರಣೆ ವೇಳೆ ಆದೇಶದಲ್ಲಿ ತಿಳಿಸಿತ್ತು. 

ಗೌರಿ ಹತ್ಯೆ ಕೇಸ್‍ಗೆ ಸಂಬಂಧಿಸಿದಂತೆ ಕಳೆದ ವರ್ಷವೇ ವಿಚಾರಣೆಯನ್ನು ಆರಂಭಿಸಲಾಗಿದ್ದು, ಈವರೆಗೆ 30ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 

ಪ್ರಕರಣವೇನು?: 2017ರ ಸೆ.5ರಂದು ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಈ ಸಂಬಂಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‍ಗಳಾದ 25(1), 25(1ಬಿ), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‍ಗಳಾದ 3(1)(ಐ), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೊರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಲಾಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್ ಪಾಟೀಲ್, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ರುಶಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.

ಎಸ್‍ಐಟಿ ನಡೆಸಿದ್ದ ತನಿಖೆ: ಈ ಕೇಸ್‍ನ್ನು ವಿಶೇಷ ತನಿಖಾ ದಳ (ಎಸ್‍ಐಟಿ) ತನಿಖೆ ನಡೆಸಿದ್ದು, 9,235 ಪುಟಗಳುಳ್ಳ ಚಾರ್ಜ್ ಶೀಟ್ ಅನ್ನು ಬೆಂಗಳೂರು ಒಂದನೇ ಸೆಷನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೆಲ ಆರೋಪಿಗಳು ಸನಾತನ ಸಂಸ್ಥೆಯೊಂದಿಗೆ ನಂಟು ಹೊಂದಿದ್ದಾರೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿತ್ತು. 

Similar News