ಜನಾರ್ದನ ರೆಡ್ಡಿ ಪಕ್ಷಕ್ಕೆ ಆಹ್ವಾನಿಸಿ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಸಚಿವ ಶ್ರೀರಾಮುಲು?

ಡಿಲೀಟ್ ಮಾಡಿದ್ದೇಕೆ? ಐಟಿ ದಾಳಿ ಮಾಡುವ ಬೆದರಿಕೆ ಬಂತೇ? ಎಂದು ಪ್ರಶ್ನಿಸಿದ ಕಾಂಗ್ರೆಸ್

Update: 2023-01-17 17:42 GMT

ಬೆಂಗಳೂರು:  ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ 'ಕಲ್ಯಾಣ ರಾಜ್ಯ ಪ್ರಗತಿ' ಪಕ್ಷಕ್ಕೆ ಕಾರ್ಯಕರ್ತರು ಸೇರ್ಪಡೆಯಾಗುವ ಸಮಾರಂಭಕ್ಕೆ ಆಗಮಿಸುವಂತೆ ಸಚಿವ ಶ್ರೀರಾಮುಲು ಅವರು ಆಹ್ವಾನಿಸುವ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಸಚಿವರು ಮಾಡಿದ್ದರೆನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡಿರುವ ಕಾಂಗ್ರೆಸ್ @INCKarnataka,  'ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಶ್ರೀರಾಮುಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ? ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ?' ಎಂದು ಪ್ರಶ್ನೆ ಮಾಡಿದೆ. 

ಇನ್ನು 'ಶ್ರೀರಾಮುಲು ಪಕ್ಷ ಬಿಡುವರೇ @BJP4Karnataka?' ಎಂದು  ಬಿಜೆಪಿಯನ್ನು ಟ್ಯಾಗ್ ಮಾಡಿ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಸ್ಕ್ರೀನ್‌ಶಾಟ್‌ ನಲ್ಲಿ ಹೀಗಿದೆ...: ''ಜನವರಿ 17ನೇ 2023ರಂದು ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾ ಜನತೆಯನ್ನು ಹೃದಯ ಪೂರ್ಕವಾಗಿ ಆಹ್ವಾನಿಸುತ್ತೇನೆ'' ಎಂದು ಸಚಿವ ಶ್ರೀರಾಮುಲು ಅವರದ್ದೆನ್ನಲಾದ ಅಧಿಕೃತ ಟ್ವಿಟರ್ ಖಾತೆಯಲ್ಲಿದೆ. ಸದ್ಯ ಈ ಟ್ವೀಟ್‌ ಅನ್ನು ಡಿಲೀಟ್‌ ಮಾಡಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ಬಗ್ಗೆ ಈ ವರೆಗೆ ಸಚಿವ ಶ್ರೀರಾಮುಲು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

Similar News