ಬಡವರ ಮನೆ ಬೆಳಕನ್ನು ಹೇಗೆ ಹಚ್ಚುತ್ತೇವೆಂದು ಬಹಿರಂಗ ಚರ್ಚೆಗೆ ಸಿದ್ಧ: ಡಿ.ಕೆ.ಶಿವಕುಮಾರ್

''ಪ್ರಧಾನಿಯೇ ನನ್ನನ್ನು ಕರೆಸಿ ಪ್ರಶಸ್ತಿ ಪತ್ರ ನೀಡಿದ್ದರು...''

Update: 2023-01-17 16:26 GMT

ಹೊಸಪೇಟೆ, ಜ.17: ರಾಜ್ಯದ ಪ್ರತಿಯೊಂದು ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆ ಬಗ್ಗೆ ವ್ಯಂಗ್ಯವಾಡಿರುವ ಕಂದಾಯ ಸಚಿವ ಅಶೋಕ್ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಯೋಜನೆ ಹೇಗೆ ಜಾರಿಗೊಳಿಸುತ್ತೇವೆ, ಬಡವರ ಮನೆ ಬೆಳಕನ್ನು ಹೇಗೆ ಹಚ್ಚುತ್ತೇವೆ ಎಂದು ಬಹಿರಂಗವಾಗಿ ಚರ್ಚೆಗೆ ಸಿದ್ಧ ಎಂದರು.

ಮಂಗಳವಾರ ಹೊಸಪೇಟೆಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ತಾಲೂಕಿನಲ್ಲೂ 20 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಬಹುದು. ನನಗೆ ವಿದ್ಯುತ್ ಬಗ್ಗೆ ಏನು ಗೊತ್ತು ಎಂದು ಕೇಳುವ ಅಶೋಕ್ ಅವರೇ, ಸುನೀಲ್ ಕುಮಾರ್ ಅವರೇ, ನೀವು ಬೇಕಾದರೂ ಬನ್ನಿ, ನಿಮ್ಮ ಮುಖ್ಯಮಂತ್ರಿಯನ್ನಾದರೂ ಕಳಿಸಿ, ಈ ಬಗ್ಗೆ ಚರ್ಚೆ ಮಾಡಲು ಸಿದ್ಧ ಎಂದರು.

ನಾನು ಇಂಧನ ಸಚಿವನಾಗಿದ್ದಾಗ ಏನು ಮಾಡಿದ್ದೆ ಎಂದು ಅವರು ಕೇಳಿದ್ದಾರೆ. ನಾನು ಏನು ಮಾಡಿದ್ದೇನೆ ಎಂದು ನಿಮ್ಮ ಕೇಂದ್ರದ ಇಂಧನ ಸಚಿವರನ್ನು ಕೇಳಿ. ಈ ದೇಶದ ಪ್ರಧಾನಿಯೆ ನನ್ನನ್ನು ಕರೆಸಿ ಪ್ರಶಸ್ತಿ ಪತ್ರ ನೀಡಿರುವ ಚಿತ್ರವನ್ನು ನಾನು ಬಿಡುಗಡೆ ಮಾಡಲು ಸಿದ್ಧ ಎಂದು ಅವರು ತಿರುಗೇಟು ನೀಡಿದರು.

ರಾಜ್ಯದಲ್ಲಿ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಇತ್ತು. ಸಿದ್ದರಾಮಯ್ಯ ನನ್ನನ್ನು ಇಂಧನ ಸಚಿವನನ್ನಾಗಿ ಮಾಡಿದ ನಂತರ ಅಧಿಕಾರದಿಂದ ಕೆಳಗಿಳಿಯುವ ಮುನ್ನ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯನ್ನು 21 ಸಾವಿರ ಮೆ.ವ್ಯಾ ಗೆ ಏರಿಸಿದ್ದೆ. ದೇಶದ ಇತಿಹಾಸದಲ್ಲಿ ಒಂದೇ ಜಾಗದಲ್ಲಿ 14 ಸಾವಿರ ಎಕರೆಯಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಮಾಡಿ ಇತಿಹಾಸ ನಿರ್ಮಿಸಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ಪ್ರಿಯಾಂಕಾ ಗಾಂಧಿ ಅವರು ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ.ಭತ್ತೆ ನೀಡುವ ಯೋಜನೆ ಘೋಷಣೆ ಮಾಡಿದ್ದಕ್ಕೆ ವ್ಯಂಗ್ಯ ಮಾಡುತ್ತೀರಲ್ಲಾ, ಮುಖ್ಯಮಂತ್ರಿಗಳೇ ನೀವು ಬಜೆಟ್ ನಲ್ಲಿ ಮಹಿಳೆಯರಿಗೆ ಹೇಗೆ ಕಾರ್ಯಕ್ರಮ ನೀಡುತ್ತೀರಿ? ನಿಮಗೆ ತಲೆ ಇರುವಂತೆ ನಮಗೆ ಇಲ್ಲವೇ? ಈ ಜನ ನಮ್ಮನ್ನು ಅಧಿಕಾರಕ್ಕೆ ತಂದ ಮೊದಲ ತಿಂಗಳಲ್ಲೇ ಮಹಿಳೆಯರ ಖಾತೆಗೆ ಹಣ ಹಾಕಿ ನಿಮ್ಮ ತಲೆಗಿಂತ ನಮ್ಮ ತಲೆ ಚೆನ್ನಾಗಿ ಓಡುತ್ತದೆ ಎಂದು ತೋರಿಸುತ್ತೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೂ ಹೋಗಿ, ಪಂಚಾಯ್ತಿ ಚುನಾವಣೆಯಲ್ಲಿ ಮತ ಯಾಚಿಸುವ ರೀತಿ, ಬಿಜೆಪಿಯ ಈ ಪಾಪದ ಪುರಾಣದ ಪಾಂಪ್ಲೇಟ್ ಹಿಡಿದು 200 ಯುನಿಟ್ ವಿದ್ಯುತ್ ಉಚಿತ ಹಾಗೂ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ.ಯಾರಿಗೆಲ್ಲಾ ಬೇಕು ಎಂದು ಅರ್ಜಿ ಸ್ವೀಕಾರ ಮಾಡುವ ಕೆಲಸವನ್ನು ಒಂದು ತಿಂಗಳಲ್ಲಿ ಮಾಡಬೇಕು ಎಂದು ಶಿವಕುಮಾರ್ ಕರೆ ನೀಡಿದರು.

ಇಂದಿರಾಗಾಂಧಿ ಇಲ್ಲಿನ ಜನರಿಗೆ ಉದ್ಯೋಗ ಕೊಡಿಸಲು ವಿಜಯನಗರ ಸ್ಟೀಲ್ ಕಾರ್ಖಾನೆಯನ್ನು ಆರಂಭಿಸಿದರು. ಸೋನಿಯಾ ಗಾಂಧಿ ಇಲ್ಲಿನ ಸಂಸದರಾಗಿ ಆಯ್ಕೆಯಾದಾಗ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ಮಾಡಿದರು ಎಂದು ಅವರು ಹೇಳಿದರು.

Similar News