ವಿಮಾನ ಪ್ರಯಾಣಿಕರ ಜೀವದ ಜೊತೆ ತೇಜಸ್ವಿ ಸೂರ್ಯ ಚೆಲ್ಲಾಟ: ಕಾಂಗ್ರೆಸ್

''ತೇಜಸ್ವಿ ಸಂಸದನಾಗಿದ್ದು ಮಕ್ಕಳ ಕೈಗೆ ಆಟಿಕೆ ಸಿಕ್ಕಂತಾಗಿದೆ'' ► ವಿಮಾನದ ತುರ್ತು ನಿರ್ಗಮನವನ್ನು ತೆರೆದ ವಿಚಾರ; ತನಿಖೆಗೆ ಆಗ್ರಹ

Update: 2023-01-17 17:10 GMT

ಬೆಂಗಳೂರು, ಜ.17: ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ಟರೆ ಏನಾಗಲಿದೆ ಎಂಬ ಮಾತಿಗೆ ಸಂಸದ ತೇಜಸ್ವಿ ಸೂರ್ಯ ನಿದರ್ಶನವಾಗಿದ್ದಾರೆ. ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆದು ಮಕ್ಕಳ ಚೇಷ್ಟೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ? ದೋಸೆ ತಿನ್ನುವ ಚಪಲ ಹೆಚ್ಚಾಗಿ ‘ಎಮರ್ಜೆನ್ಸಿ ಎಕ್ಸಿಟ್’ ಅಗಲು ಹೊರಟಿದ್ದೇ? ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಸಂಸದ ತೇಜಸ್ವಿ ಸೂರ್ಯ ವಿಮಾನದ ಸುರಕ್ಷಾ ನಿಯಮಗಳ ವಿರುದ್ಧವಾಗಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲನ್ನು ತೆರೆದಿದ್ದ ಸಂಗತಿಯನ್ನು ಸರಕಾರ ಮುಚ್ಚಿಟ್ಟಿದ್ದೇಕೆ? ಸಂಸದರ ಉದ್ದೇಶವೇನಿತ್ತು? ಯಾವ ಅನಾಹುತ ಸೃಷ್ಟಿಸುವ ಯೋಜನೆ ಇತ್ತು? ನಂತರ ಕ್ಷಮಾಪಣೆ ಕೋರಿ ಹಿಂದಿನ ಸೀಟಿಗೆ ವರ್ಗಾವಣೆಯಾಗಿದ್ದೇಕೆ? ಎಂದು ಪ್ರಶ್ನಿಸಿದೆ.

ಸಂಸದ ತೇಜಸ್ವಿ ಸೂರ್ಯ ತುರ್ತು ನಿರ್ಗಮನದ ದ್ವಾರವನ್ನು ವಿಮಾನ ನಿಲ್ದಾಣದಲ್ಲಿ ಅಲ್ಲದೆ, ಟೇಕಾಫ್ ಆದ ನಂತರ ಈ ‘ಕಪಿಚೇಷ್ಟೆ’ ನಡೆಸಿದ್ದಿದ್ದರೆ ಸಂಭವಿಸುವ ಅನಾಹುತಕ್ಕೆ ಯಾರು ಹೊಣೆಯಾಗುತ್ತಿದ್ದರು ಪ್ರಧಾನಿ ನರೇಂದ್ರ ಮೋದಿ ಅವರೇ? ಈ ಬಗ್ಗೆ ತನಿಖೆ ಮಾಡುತ್ತಿಲ್ಲವೇಕೆ? ತೇಜಸ್ವಿ ಸೂರ್ಯ ಸಂಸದನಾಗಿದ್ದು ಮಕ್ಕಳ ಕೈಗೆ ಆಟಿಕೆ ಸಿಕ್ಕಂತಾಗಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Similar News