ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಆಗ್ರ

Update: 2023-01-17 17:52 GMT

ಬೆಂಗಳೂರು, ಜ.17: ಭ್ರಷ್ಟಚಾರ ಆರೋಪವನ್ನು ಹೊತ್ತಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಸುರೇಶ್‍ ಕುಮಾರ್ ಕಾಲಾವಧಿ ಸೇರಿ ನಿಗಮದಲ್ಲಿ 10 ವರ್ಷಗಳಿಂದ ನಡೆದ ಎಲ್ಲ ಅಕ್ರಮಗಳನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯನ್ನು ನಡೆಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.

ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಕೆ.ಎಂ.ಸುರೇಶ್‍ ಕುಮಾರ್ ನಿಗಮದಲ್ಲಿ ಅಧಿಕಾರವನ್ನು ವಹಿಸುಕೊಳ್ಳುವ ಮುನ್ನ ನಿಗಮದಲ್ಲಿ ಕಮಿಷನ್ ವ್ಯವಹಾರ ನಡೆಯುತ್ತಿತ್ತು. ಕೆ.ಎಂ. ಸುರೇಶ್‍ಕುಮಾರ್ ಒಂದು ವರ್ಷ ಎರಡು ತಿಂಗಳುಗಳ ಕಾಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದು, ನಿಗಮದಲ್ಲಿ ನಡೆಯುತ್ತಿದ್ದ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಿದ್ದಾರೆ.ಆದರೆ ಒಂದು ನಿರ್ದಿಷ್ಟ ಗುಂಪು ಅವರ ಮೇಲೆ ಆರೋಪ ಹೊರಿಸುತ್ತಿದೆ ಎಂದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕನಾಗ ಬೇಕಾದರೆ ಐಎಎಸ್‍ ಅಥವಾ ಕೆಎಎಸ್‍ ಅಧಿಕಾರಿ ಆಗಿರಬೇಕು. ಆದರೆ, ಸರಕಾರದ ಉದ್ದಿಮೆಯಲ್ಲಿ ಅಪರ ನಿರ್ದೇಶಕರಾಗಿ ಕೆಲಸ ಮಾಡಿದ ಸುರೇಶ್ ನಾಯ್ಕ್‍ ಅವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕನನ್ನಾಗಿ(ಎಂಡಿ) ನೇಮಕ ಮಾಡಿ, ಅವರ ಹಿಂದಿನ ಎಂಡಿ ಆಗಿದ್ದ ಕೆ.ಎಂ. ಸುರೇಶ್‍ ಕುಮಾರ್‍ ಅವರ ಕುರಿತು ತನಿಖಾ ವರದಿಯನ್ನು ಪಡೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವರದಿ ಸಲ್ಲಿಸಿದ ಸುರೇಶ್ ನಾಯ್ಕ್‍ ನಿಗಮದ ಎಂಡಿ ಆಗಲು ಅರ್ಹರಿಲ್ಲ. ಆದರೂ ಕೆ.ಎಂ.ಸುರೇಶ್‍ ಕುಮಾರ್‍ ಅವರಕುರಿತು ಕೇವಲ ಒಂದು ತಿಂಗಳಿನಲ್ಲಿಯೇ ವರದಿಯನ್ನು ನೀಡಿದ್ದಾರೆ.ಇದು ಉದ್ದೇಶಪೂರ್ವಕವಾಗಿ ಒಂದು ಗುಂಪು ಸುರೇಶ್‍ ಕುಮಾರ್‍ ಅವರ ತೇಜೋವಧೆ ಮಾಡಲು ನಡೆಸುತ್ತಿರುವ ಪಿತೂರಿಯಾಗಿದೆ. ಹೀಗಾಗಿ ಸರಕಾರ ಸುರೇಶ್ ನಾಯ್ಕ್ ಸಲ್ಲಿಸಿದ ವರದಿಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದರು.

ದಲಿತ ಮುಖಂಡ ಚನ್ನಕೃಷ್ಣಪ್ಪ ಮಾತನಾಡಿ, ಬಾಬಾ ಸಹೇಬರ ಹೆಸರಿನಲ್ಲಿ ನಿರ್ಮಾಣವಾದ ನಿಗಮವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಹೀಗಾಗಿ ಅಂಬೇಡ್ಕರ್ ನಿಗಮದ ವಿವಿಧಯೋಜನೆಗಳಲ್ಲಿ ನಡೆದ ಅವ್ಯವಹಾರವನ್ನು ತನಿಖೆ ಮಾಡಬೇಕು. ನಿಗಮದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಜೆ.ಜಿ.ಪದ್ಮನಾಭ ಅವರ ಕಾರ್ಯನಿರ್ವಹಣೆಯ ಬಗ್ಗೆ ಇಲಾಖಾ ವಿಚಾರಣೆ ಮೂಲಕ ಕೂಲಂಕುಷ ತನಿಖೆ ನಡೆಸಿ ಸೂಕ್ತ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಶಿವಶಂಕರ್, ಹೈಕೋರ್ಟ್ ವಕೀಲ ಮೋಹನ್‍ ಕುಮಾರ್, ಸಿದ್ಧಪ್ಪ, ಕಮಲಮ್ಮ, ರಾಮಣ್ಣ, ಪುಟ್ಟಸ್ವಾಮಿ, ಬಸವರಾಜ್ ಕೌತಾಳ್ ಮತ್ತಿತರರು ಉಪಸ್ಥಿತರಿದ್ದರು.

Similar News