ಜ.18ರಿಂದ ಚಿಕ್ಕಮಗಳೂರು ಉತ್ಸವ: ಹೆಲಿಟೂರಿಸಮ್‍ಗೆ ಚಾಲನೆ

Update: 2023-01-17 18:08 GMT

ಚಿಕ್ಕಮಗಳೂರು, ಜ.17: ಕಾಫಿನಾಡಿನಲ್ಲಿ ಜ.18ರಿಂದ 22ವರೆಗೆ 5 ದಿನಗಳ ಕಾಲ ನಡೆಯಲಿರುವ ಚಿಕ್ಕಮಗಳೂರು ಉತ್ಸವ ಮೆರುಗು ಪಡೆದುಕೊಂಡಿದ್ದು, ಕ್ರೀಡಾಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ. ಈ ನಡುವೆ ಜಿಲ್ಲೆಯ ಪ್ರಮುಖ ತಾಣಗಳ ದರ್ಶನ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹೆಲಿಟೂರಿಸಮ್ ಹಮ್ಮಿಕೊಂಡಿದ್ದು, ಹೆಲಿಟೂರಿಸಮ್‍ಗೆ ಮಂಗಳವಾರ ನಗರದಲ್ಲಿ ಚಾಲನೆ ನೀಡಲಾಯಿತು.

ಸೋಮವಾರ ಸಂಜೆ ಹೆಲೆಟೂರಿಸಮ್‍ಗಾಗಿ ಎರಡು ಹೆಲಿಕಾಪ್ಟರ್ ಗಳು ನಗರಕ್ಕೆ ಆಗಮಿಸಿದ್ದು, ಐಡಿಎಸ್‍ಜಿ ಕಾಲೇಜಿನ ಹೆಲಿಪ್ಯಾಡ್‍ನಿಂದ ಪ್ರಾಯೋಗಿಕ ಪರೀಕ್ಷೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಪಂ ಸಿಇಒ ಪ್ರಭು, ಎಸ್ಪಿ ಉಮಾಪ್ರಶಾಂತ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮತ್ತಿತರರು ಹೆಲಿಕಾಪ್ಟರ್ ಗಳ ಮೂಲಕ ನಗರ ಪ್ರದಕ್ಷಣೆ ಹಾಕುವ ಮೂಲಕ ಹೆಲಿಟೂರಿಸಮ್‍ಗೆ ಚಾಲನೆ ನೀಡಿದರು. 

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಮೇಶ್, ಕಳೆದ ಬಾರಿ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಸಂದರ್ಭದಲ್ಲಿ ನಾನು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕನಾಗಿದ್ದೆ. ಆಗ ಚಿಕ್ಕಮಗಳೂರಿನಲ್ಲಿನ ಹೆಲಿಟೂರಿಸಮ್‍ಗೆ ಬಾರೀ ಬೇಡಿಕೆ ಇತ್ತು. ಜಿಲ್ಲಾ ಉತ್ಸವ ಮುಕ್ತಾದ ಬಳಿಕವೂ ಬೇಡಿಕೆ ಬಂದಿತ್ತು, ಈ ಹಿನ್ನೆಲೆಯಲ್ಲಿ ಈ ಬಾರಿ 10 ದಿನಗಳ ಕಾಲ ಹೆಲಿಟೂರಿಸಂ ಆಯೋಜಿಸಲಾಗಿದೆ. ಈ ಬಾರಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಲಿಟೂರಿಸಂ ಪ್ರಯಾಣದ ಶುಲ್ಕವನ್ನು ಪ್ರಯಾಣಿಕರ ಕೈಗೆಟುಕುವ ದರದಲ್ಲೇ ನಿಗಪಡಿಸಲಾಗಿದೆ. ದಸರಾ ಉತ್ಸವಕ್ಕಿಂತಲೂ ಕಡಿಮೆ ಶುಲ್ಕ ನಿಗದಿ ಮಾಡಲಾಗಿದೆ ಎಂದರು.

2020ರಲ್ಲಿ ನಡೆದ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಪ್ರಥಮ ಬಾರಿಗೆ ಹೆಲಿಟೂರಿಸಮ್ ಏರ್ಪಡಿಸಲಾಗಿತ್ತು. ಆಗ ಕೇವಲ 1 ಹೆಲಿಕಾಪ್ಟರ್ ಮೂಲಕ ಹೆಲಿಟೂರಿಸಂ ನಡೆಸಲಾಗಿದ್ದು, ಜಿಲ್ಲೆಯ ಜನತೆಯಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿತ್ತು. 2023ರ ಜಿಲ್ಲಾ ಉತ್ಸವದಲ್ಲಿ ಹೆಲಿಟೂರಿಸಮ್ ಏರ್ಪಡಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಾರಿ ಎರಡು ಹೆಲಿಕಾಪ್ಟರ್‍ಗಳನ್ನು ತರಿಸಲಾಗಿದೆ. 

ಹೆಲಿಟೂರಿಸಂ ಇಂದಿನಿಂದ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದ್ದು, 10 ದಿನಗಳವರೆಗೆ ಜಿಲ್ಲೆ ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರು ಲೋಹದ ಹಕ್ಕಿಗಳ ಮೂಲಕ ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತಲಿನ ಆಕರ್ಷಕ ಪ್ರವಾಸಿ ತಾಣಗಳನ್ನು ಆಗಸದಿಂದ ಕಣ್ತುಂಬಿಕೊಳ್ಳಲಿದ್ದಾರೆ.

ಹೆಲಿಟೂರಿಸಮ್‍ಗೆ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಆನ್‍ಲೈನ್ ಮೂಲಕ ಹಾಗೂ ಸ್ಥಳದಲ್ಲೇ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಹೆಲಿಟೂರಿಸಮ್‍ನಲ್ಲಿ 6-7 ನಿಮಿಷದ ಒಂದು ರೌಂಡ್‍ಗೆ 3700 ರೂ. ನಿಗದಿಪಡಿಸಲಾಗಿದ್ದು, 12-13ನಿಮಿಷದ ಮುಳ್ಳಯ್ಯನಗಿರಿ ರೌಂಡ್‍ಗೆ 5600 ರೂ. ನಿಗದಿಪಡಿಸಲಾಗಿದೆ. ಏಕಕಾಲದಲ್ಲಿ ಒಂದು ಹೆಲಿಕಾಪ್ಟರ್‍ನಲ್ಲಿ 6 ಮಂದಿ ಪ್ರಯಾಣಿಸಬಹುದಾಗಿದೆ. 2ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಈ ಜಾಲಿ ರೈಡ್‍ನ ಸವಿಯನ್ನು ಅನುಭವಿಸಬೇಕಾಗಿದೆ.

Similar News