2018-2022ರ ಅವಧಿಯಲ್ಲಿ ಚುನಾವಣಾ ಬಾಂಡ್ ಮೂಲಕ ರೂ. 5,270 ಕೋಟಿ ಸ್ವೀಕರಿಸಿದ ಬಿಜೆಪಿ

Update: 2023-01-18 15:33 GMT

ಹೊಸದಿಲ್ಲಿ: ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ಕಂಪನಿಗಳು ಹೆಸರು ಬಹಿರಂಗ ಪಡಿಸದೆ ಅನಿಯಮಿತ ಪ್ರಮಾಣದ ದೇಣಿಗೆ ನೀಡುವ ಅವಕಾಶ ಒದಗಿಸಿರುವುದರಿಂದ ಮಾರ್ಚ್, 2018ರಿಂದ 2022ರ ನಡುವೆ ಮಾರಾಟವಾಗಿರುವ ಎಲ್ಲ ಚುನಾವಣಾ ಬಾಂಡ್‌ಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿಯೊಂದೇ ಸ್ವೀಕರಿಸಿದೆ ಎಂಬ ಅಂಶ ಚುನಾವಣಾ ಆಯೋಗದ ದತ್ತಾಂಶಗಳಿಂದ ಬಹಿರಂಗವಾಗಿದೆ ಎಂದು ndtv.com ವರದಿ ಮಾಡಿದೆ.

ರಾಜಕೀಯ ಪಕ್ಷಗಳು ಬಹಿರಂಗಪಡಿಸಿರುವ ತಮ್ಮ ಆದಾಯದ ಮೂಲಗಳ ಮಾಹಿತಿ ಪ್ರಕಾರ, 2022ರವರೆಗೆ ಮಾರಾಟವಾಗಿರುವ ಒಟ್ಟು ರೂ. 9208 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳ ಪೈಕಿ ಬಿಜೆಪಿ ರೂ. 5270 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದ್ದು, ಇದು ಒಟ್ಟಾರೆ ಮೌಲ್ಯದ ಶೇ. 57ರಷ್ಟಿದೆ ಎಂದು ಹೇಳಲಾಗಿದೆ.

ಇದೇ ಅವಧಿಯಲ್ಲಿ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ ರೂ. 964 ಕೋಟಿ ಅಥವಾ ಶೇ. 10ರಷ್ಟು ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವ ಮೂಲಕ ಎರಡನೆ ಸ್ಥಾನದಲ್ಲಿದ್ದರೆ, ರೂ. 767 ಕೋಟಿ ಅಥವಾ ಶೇ. 8ರಷ್ಟು ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸುವ ಮೂಲಕ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ಮೂರನೆ ಸ್ಥಾನ ಅಲಂಕರಿಸಿದೆ.

2022ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬಿಜೆಪಿ ರೂ. 1033 ಕೋಟಿ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದ್ದು, 2021, 2020 ಹಾಗೂ 2019ರಲ್ಲಿ ಕ್ರಮವಾಗಿ ರೂ. 22.38 ಕೋಟಿ, ರೂ. 2,555 ಕೋಟಿ ಹಾಗೂ 1,450 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದೆ. ಇದಲ್ಲದೆ 2018ರ ಆರ್ಥಿಕ ವರ್ಷದಲ್ಲಿ ರೂ. 210 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿರುವುದಾಗಿ ಬಹಿರಂಗಗೊಳಿಸಿದೆ.

ಕಾಂಗ್ರೆಸ್ ಪಕ್ಷವು ಚುನಾವಣಾ ಬಾಂಡ್‌ಗಳ ಮೂಲಕ 2022ರ ಆರ್ಥಿಕ ವರ್ಷದಲ್ಲಿ ರೂ. 253 ಕೋಟಿ, 2021ರ ಆರ್ಥಿಕ ವರ್ಷದಲ್ಲಿ ರೂ. 10 ಕೋಟಿ, 2020ರ ಆರ್ಥಿಕ ವರ್ಷದಲ್ಲಿ ರೂ. 317 ಕೋಟಿ ಹಾಗೂ 2019ರ ಆರ್ಥಿಕ ವರ್ಷದಲ್ಲಿ ರೂ. 383 ಕೋಟಿ ಸ್ವೀಕರಿಸಿದೆ.

ತೃಣಮೂಲ ಕಾಂಗ್ರೆಸ್ ಪಕ್ಷವು ಮಾರ್ಚ್ 2022ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ರೂ. 528 ಕೋಟಿ, 2021ರಲ್ಲಿ ರೂ. 42 ಕೋಟಿ, 2020ರಲ್ಲಿ ರೂ. 100 ಕೋಟಿ ಹಾಗೂ 2019ರಲ್ಲಿ ರೂ. 97 ಕೋಟಿ ಮೊತ್ತವನ್ನು ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಿದೆ.

2017ರಲ್ಲಿ ಪರಿಚಯಿಸಲಾಗಿರುವ ಚುನಾವಣಾ ಬಾಂಡ್‌ಗಳು ಆರ್ಥಿಕ ಸಾಧನಗಳಾಗಿದ್ದು, ಇವನ್ನು ಯಾವುದೇ ವ್ಯಕ್ತಿ ಅಥವಾ ಕಂಪನಿಗಳು ಖರೀದಿಸಿ, ಭಾರತದಲ್ಲಿನ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದಾಗಿದೆ. ಈ ಚುನಾವಣಾ ಬಾಂಡ್‌ಗಳನ್ನು ಹೆಸರು ಬಹಿರಂಗಪಡಿಸದೆ ದೇಣಿಗೆ ನೀಡಲು ಅವಕಾಶ ಕಲ್ಪಿಸಿರುವುದರಿಂದ ಈ ಯೋಜನೆಯು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಈ ಯೋಜನೆಯ ಟೀಕಾಕಾರರು ಅಭಿಪ್ರಾಯ ಪಡುತ್ತಾರೆ.

ಇದರೊಂದಿಗೆ, ಈ ಬಾಂಡ್‌ಗಳನ್ನು ಅಕ್ರಮ ಹಣ ವರ್ಗಾವಣೆಗೂ ಬಳಸಬಹುದಾಗಿದೆ ಎಂದು ಹೇಳುವ ಟೀಕಾಕಾರರು, ಚುನಾವಣಾ ಬಾಂಡ್‌ಗಳು ರಾಜಕಾಣದಲ್ಲಿನ ಪಾರದರ್ಶಕ ಹೂಡಿಕೆಯನ್ನು ಹೂತು ಹಾಕುತ್ತವೆ ಮತ್ತು ಶ್ರೀಮಂತ ದೇಣಿಗೆದಾರರಿಗೆ ಪಕ್ಷಪಾತದ ನೆರವು ಒದಗಿಸುತ್ತವೆ ಎಂದು ವಾದಿಸುತ್ತಾರೆ.

ಚುನಾವಣಾ ಬಾಂಡ್ ವ್ಯವಸ್ಥೆಯ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ದೂರುಗಳ ವಿಚಾರಣೆಯನ್ನು ಈ ತಿಂಗಳಾಂತ್ಯದ ವೇಳೆಗೆ ನಡೆಸುವುದಾಗಿ ಸುಪ್ರೀಂಕೋರ್ಟ್ ಈ ಮುನ್ನ ಹೇಳಿತ್ತು.

Similar News