ಬೆಳಗಾವಿ | ಪ್ರವಾಸಕ್ಕೆ ತೆರಳುತ್ತಿದ್ದವರ ಮೇಲೆ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ: ಆರೋಪ

Update: 2023-01-18 15:10 GMT

ಬೆಳಗಾವಿ, ಜ, 18: ಕ್ರೈಸ್ತ ಪಾದ್ರಿಯೊಂದಿಗೆ ಗೋವಾ ರಾಜ್ಯಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ಬುಡಕಟ್ಟು ಸಮುದಾಯದ ಜನರಿದ್ದ ಬಸ್ಸಿನ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸಿ, ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಬುಧವಾರ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ 40 ಮಂದಿ ಆದಿವಾಸಿಗಳನ್ನು ಗೋವಾಕ್ಕೆ ಪ್ರವಾಸ ತೆರಳುತ್ತಿದ್ದರು. ಈ ವೇಳೆ ಮತಾಂತರಕ್ಕೆ ಆದಿವಾಸಿಗಳನ್ನು ಕರೆದೊಯ್ಯಲಾಗುತ್ತಿದೆಂಬ ಸಂಶಯದ ಕಾರಣ ಬಸ್ಸಿನ ಮೇಲೆ ಸಾಂಗ್ಲಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಆ ಬಳಿಕ ಬೆಳಗಾವಿಯತ್ತ ಆಗಮಿಸಿದ ಅದೇ ಬಸ್ಸಿನ ಮೇಲೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗಾವಿ ಕ್ಯಾಂಪ್ ಠಾಣಾ ಪೊಲೀಸರು ಮುನ್ನಚ್ಚರಿಕೆ ಕ್ರಮವಾಗಿ ವಾಪಸ್ ಕಳುಹಿಸಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಬಸ್ಸಿನಲ್ಲಿದ್ದವರು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರಪುರ ಮೂಲದವರು. ಶಿರಪುರದ ವಿಶ್ವ ಮಂಡಲ ಸೇವಾಶ್ರಮದ ಪಾದ್ರಿ ಕಾನ್ಸ್ಟಿ ನೇತೃತ್ವದಲ್ಲಿ ಜ.16ಕ್ಕೆ ಆದಿವಾಸಿಗಳು ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು. ಮನ್ಮಾಡ್ ನಿಲ್ದಾಣದಲ್ಲಿ ರೈಲು ಹತ್ತಿದ ಅವರು ರಾತ್ರಿ ಸಾಂಗ್ಲಿಗೆ ಬಂದಿದ್ದರು. ಆಗ, ಸಂಘ ಪರಿವಾರದ ಕಾರ್ಯಕರ್ತರು ಈ ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

''ಪ್ರವಾಸಕ್ಕೆ ತೆರಳಿದ್ದೇವು'':

‘ನಮ್ಮದು ಒಂದು ಸರಕಾರೇತರ ಸಂಸ್ಥೆ, ಶಾಲೆ ನಡೆಸುತ್ತಿದ್ದೇವೆ. ಬುಡಕಟ್ಟು ಜನಾಂಗದವರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 4 ವರ್ಷಗಳಿಗೊಮ್ಮೆ ಶಿಕ್ಷಕರನ್ನು ಪ್ರವಾಸಕ್ಕೆ ಕರೆದೊಯ್ಯುತ್ತೇವೆ. ಈ ಬಾರಿಯೂ ಗೋವಾಕ್ಕೆ ಪ್ರವಾಸಕ್ಕೆಂದು ಹೊರಟಿದ್ದಾಗ, ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ’ ಎಂದು ಪಾದ್ರಿ ಕಾನ್ಸ್ಟಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Similar News