ಪಕ್ಷ ಅಧಿಕಾರಕ್ಕೆ ಬಂದರೆ ವರ್ಗಾವಣೆ, ಪೋಸ್ಟಿಂಗ್‍ಗೆ ಲಂಚ ಪಡೆಯಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2023-01-18 14:23 GMT

ಬಾಗಲಕೋಟೆ, ಜ.18: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಪೊಲೀಸರು ನಮಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರಿಗೊಂದು ಸಲಾಂ. ಮುಂದೆ ನಮ್ಮ ಸರಕಾರದಲ್ಲಿ ಅವರ ವರ್ಗಾವಣೆಗೆ, ಪೋಸ್ಟಿಂಗ್ ಗೆ ಲಂಚ ಪಡೆಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಬುಧವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ‘ಪ್ರಜಾಧ್ವನಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ವರ್ಗಾವಣೆ, ಪೋಸ್ಟಿಂಗ್‍ಗೆ ಲಂಚ ಪಡೆಯುವುದು ಬಿಜೆಪಿ ಸರಕಾರದ ಕೆಲಸ. ನಾವು ಯಾವುದೆ ಲಂಚ ಪಡೆಯದೆ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ಪೋಸ್ಟಿಂಗ್ ನೀಡುತ್ತೇವೆ ಎಂದರು.

ಒಂದು ಕಾಲದಲ್ಲಿ ಕರ್ನಾಟಕ ದೇಶದಲ್ಲಿಯೇ ಅತ್ಯಂತ ಗೌರವ ಪಡೆದಿದ್ದ ರಾಜ್ಯವಾಗಿತ್ತು. ಆದರೆ ಇಂದು ರಾಜ್ಯದ ಗೌರವ ಏನಾಗಿದೆ? ಎಂದು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ರಾಜ್ಯದ ಜನರ ಸಮಸ್ಯೆ, ನೋವುಗಳ ಧ್ವನಿಯಾಗಿ ಪ್ರಜಾಧ್ವನಿ ಯಾತ್ರೆ ನಡೆಸಲಾಗುತ್ತಿದೆ. ಈ ಯಾತ್ರೆಯನ್ನು ಜನಸಾಮಾನ್ಯರ ಸಂಕಷ್ಟ ಪರಿಹಾರಕ್ಕಾಗಿ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು. 

ಚುನಾವಣೆ ನಮಗೆ ಪರೀಕ್ಷೆ ಇದ್ದಂತೆ, ನಾವು ಜನರಿಗಾಗಿ ಏನು ಮಾಡಿದ್ದೇವೆ, ಆಡಳಿತ ಪಕ್ಷ ಏನು ಮಾಡಿದೆ ಎಂದು ತೀರ್ಮಾನ ಮಾಡುವವರು ಜನರು. ಹೀಗಾಗಿ ಜನರ ಮಧ್ಯೆ ಈ ವಿಚಾರ ತಿಳಿಸಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿಗೆ ಬರುವ ಮುನ್ನ ಬಿಜೆಪಿ ಪಾಪದ ಪುರಾಣವನ್ನು ಬಿಡುಗಡೆ ಮಾಡಿದ್ದೇವೆ. ಬಿಜೆಪಿ ಮಾಡಿರುವ ಲೂಟಿ ಬಗ್ಗೆ ಪ್ರಸ್ತಾಪಿಸಿದ್ದೇವೆ ಎಂದು ಅವರು ಹೇಳಿದರು.

ಈ ಸರಕಾರಕ್ಕೆ 40 ಪರ್ಸೆಂಟ್ ಸರಕಾರ ಎಂದು ಹೆಸರು ಬಂದಿದೆ. ಯುವಕರು ಉದ್ಯೋಗ ಪಡೆಯಲು ಕಷ್ಟಪಡುತ್ತಿದ್ದಾರೆ. ಸರಕಾರ ಪಿಎಸ್ಸೈ, ಜೆಇಇ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ಇಲಾಖೆ ನೇಮಕಾತಿಯಲ್ಲಿ ಅಕ್ರಮ ಎಸಗಿದೆ. ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ 4-5 ಕೋಟಿ ಹಣ ನೀಡಬೇಕು ಎಂದು ಬಿಜೆಪಿ ಸಂಸದ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದರು. 

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ನೀರಾವರಿ ಇಲಾಖೆ ಟೆಂಡರ್ ನಲ್ಲಿ 20 ಪರ್ಸೆಂಟ್ ಕಮಿಷನ್ ಪಡೆಯಲಾಗಿದೆ ಎಂದರು. ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈ ಸರಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದರು. ಆದರೂ ಅದನ್ನು ತನಿಖೆ ಮಾಡಲು ಈ ಸರಕಾರದಿಂದ ಸಾಧ್ಯವಾಗಿಲ್ಲ. ಪಿಡಬ್ಲ್ಯೂಡಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ 40-60 ಲಕ್ಷ ರೂ.ನೀಡಬೇಕು ಎಂದು ಪತ್ರಿಕೆಗಳು ವರದಿ ಮಾಡುತ್ತಿವೆ ಎಂದು ಶಿವಕುಮಾರ್ ದೂರಿದರು.

ವಿಜಯಪುರದಲ್ಲಿ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ, ಹುಬ್ಬಳ್ಳಿ ಧಾರವಾಡದಲ್ಲಿ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸಭೆ ಮಾಡಿ ಅಲ್ಲಿ ಈ ಭಾಗದ ಭೂಮಿಯನ್ನು ಹಸನಾಗಿಸಲು, ನೀರಾವರಿ ಸೌಲಭ್ಯ ನೀಡಲು ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಮೀಸಲಿಡಲು ತೀರ್ಮಾನಿಸಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ವಚನ ಎಂದು ಅವರು ಹೇಳಿದರು.

Similar News