ಮುರುಘಾ ಶ್ರೀ ಪ್ರಕರಣ: ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅರ್ಜಿ ವಿಚಾರಣೆ ಮುಂದೂಡಿಕೆ

Update: 2023-01-18 15:07 GMT

ಬೆಂಗಳೂರು, ಜ.18: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಲು ಸಂತ್ರಸ್ತರಿಗೆ ಪ್ರಚೋದನೆ ನೀಡಿದ ಆರೋಪದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಪಡಿಸುವಂತೆ ಕೋರಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು  ಹೈಕೋರ್ಟ್ ನ್ಯಾಯಪೀಠವು ಕೈಗೆತ್ತಿಕೊಂಡಿತು. ಆದರೆ, ಈ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿರಲಿಲ್ಲ. ಪರಿಣಾಮ ಪೀಠವು ಅರ್ಜಿ ವಿಚಾರಣೆಯನ್ನು ಜ.31ಕ್ಕೆ ಮುಂದೂಡಿತು.

ಮಠ ನಡೆಸುತ್ತಿರುವ ಪ್ರಿಯದರ್ಶಿನಿ ಶಾಲೆಯ ಶಿಕ್ಷಕ ಬಸವರಾಜೇಂದ್ರಪ್ಪ ಮತ್ತು ಪ್ರಕರಣದ ಸಂತ್ರಸ್ತೆಯೊಬ್ಬರ ತಾಯಿ ನಡುವೆ ನಡೆದ ಮೊಬೈಲ್ ಕರೆ ಸಂಭಾಷಣೆಯನ್ನು ಆಧರಿಸಿ ದಾಖಲಿಸಲಾದ ದೂರಿನ ಪ್ರಕರಣ ಇದಾಗಿದೆ.

ಡಾ.ಶಿವಮೂರ್ತಿ ಮರುಘಾ ಶರಣರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಲು ಪಿತೂರಿ ನಡೆಸಿದ ಆರೋಪ ತಮ್ಮ ಮೇಲೆ ಹೊರಿಸಲಾಗಿದೆ. ಆದರೆ, ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿದ ಎಫ್‍ಐಆರ್‍ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿಲ್ಲ. ತಮ್ಮನ್ನು ಕೇಸ್‍ನಲ್ಲಿ ಸಿಲುಕಿಸಲಾಗಿದ್ದು, ಎಫ್‍ಐಆರ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Similar News