ತೇಜಸ್ವಿ ಸೂರ್ಯ ಬುದ್ಧಿವಂತ, ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದಿಲ್ಲ: ಅಣ್ಣಾಮಲೈ

Update: 2023-01-19 11:43 GMT

ಚಿಕ್ಕಮಗಳೂರು: ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿದ್ದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅದ್ಯಕ್ಷ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ. 

ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, 'ತೇಜಸ್ವಿ ಸೂರ್ಯ ಬುದ್ಧಿವಂತ, ವಿಮಾನದ ಡೋರ್ ಓಪನ್ ಮಾಡಿಲ್ಲ' ಎಂದು ಹೇಳಿದರು. 

'ಸಂಸದ ತೇಜಸ್ವಿ ಸೂರ್ಯ ಹಾಗೂ ನಾನು ಅಂದು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅವರು ತುರ್ತು ನಿರ್ಗಮನದ ಬಾಗಿಲ ಬಳಿ ಸೀಟಿನಲ್ಲಿ ಕುಳಿತಿದ್ದರು. ಎಟಿಆರ್ ವಿಮಾನದ ಸೀಟಿನಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ. ಹಾಗಾಗಿ ಅವರ ಬಾಗಿಲು ಮೇಲೆ ಕೈ ಇಟ್ಟಿದ್ದರು. ಅಲ್ಲಿ ನಿರ್ಗಮನ ಬಾಗಿಲಿನಲ್ಲಿ ಬ್ಲಿಡಿಂಗ್ ಸ್ವಲ್ಪ ತೆರೆದಿತ್ತು. ಅದನ್ನು ವಿಮಾನ ಸಿಬ್ಬಂದಿ ಗಮನಕ್ಕೆ ತಂದಿದ್ದರು. ತಕ್ಷಣ ಪೈಲೆಟ್ ಬಂದು ಸರಿಪಡಿಸಿದರು. ಈ ಘಟನೆ ಬಗ್ಗೆ ತೇಜಸ್ವಿ ಸೂರ್ಯ ಅವರು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದರು' ಎಂದು ಸ್ಪಷ್ಟನೆ ನೀಡಿದರು. 

''ಸಂಸದರು ಬುದ್ಧಿವಂತರಾಗಿದ್ದು, ಜವಾಬ್ದಾರಿ ಸ್ಥಾನದಲ್ಲಿದ್ದಾರೆ, ವಿಮಾನ ಒಂದು ಗಂಟೆ ತಡವಾಗಿದ್ದಕ್ಕೆ ಅವರು ಪ್ರಯಾಣಿಕರ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಇಂಡಿಗೋ ಅವರೇ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದ ಕಾಂಗ್ರೆಸ್‍  ನಾಯಕರಿಗೆ ಮಾತನಾಡಲು ಬೇರೆ ವಿಷಯ ಇಲ್ಲ, ಹೀಗಾಗಿ ಇಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ'' ಎಂದು ಹೇಳಿದರು. 

Similar News