ನಾವು ತಯಾರಿಸಿದ ಅಡುಗೆಯನ್ನು ಬಿಜೆಪಿಯವರು ಬಡಿಸುತ್ತಿದ್ದಾರೆ: ಸಿದ್ದರಾಮಯ್ಯ

Update: 2023-01-19 09:25 GMT

ಹುಬ್ಬಳ್ಳಿ: 'ಲಂಬಾಣಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದ್ದು ನಾವು. ಇಂದು ಮೋದಿ ಕರೆಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಕಂದಾಯ ಗ್ರಾಮ ಮಾಡಬೇಕೆಂದು ಖರ್ಗೆ ಅವರು ಪ್ರಯತ್ನ ಮಾಡಿದ್ದರು' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾವು ಮಾಡಿಟ್ಟಿದ್ದ ಅಡುಗೆಯನ್ನು ಬಿಜೆಪಿಯವರು ಬಡಿಸುತ್ತಿದ್ದಾರೆ. ಪ್ರಧಾನಿ ಮೋದಿಗೆ ತಪ್ಪು ಸಂದೇಶ ಕೊಟ್ಟು ನಾವೇ ಮಾಡಿದ್ದು ಎಂದು ಹೇಳಿತ್ತಿದ್ದಾರೆ' ಎಂದರು.

'ಅನೇಕ ದಶಕಗಳ ಕಾಲ ಲಂಬಾಣಿ ತಾಂಡಾ, ಗೊಲ್ಲರು ಮುಂತಾದ ಪಶುಪಾಲಕ ಸಮುದಾಯಗಳು ಹಾಗೂ ಇತರರು ವಾಸಿಸುವ ಹಟ್ಟಿ, ಪಾಳ್ಯ, ಹಾಡಿ, ಮಜರೆ , ಕಾಲೋನಿ ಮುಂತಾದ ಸ್ವತಂತ್ರ ಅಸ್ತಿತ್ವವಿಲ್ಲದ, ಮುಖ್ಯ ಕಂದಾಯ ಗ್ರಾಮಗಳ ಜೊತೆ ಸೇರಿ ಹೋಗಿ ಅಭಿವೃದ್ಧಿಯನ್ನೆ ಕಾಣದಾಗಿದ್ದ ಅನೇಕ ಹಿಂದುಳಿದ ಮತ್ತು ದಲಿತ ಸಮುದಾಯಗಳ ಜನರ ಕಲ್ಯಾಣಕ್ಕೆಂದು ನಮ್ಮ ಸರ್ಕಾರ ಸ್ವತಂತ್ರ ಕಂದಾಯ ಗ್ರಾಮಗಳ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಆಗ ಈ ಯೋಜನೆಗೆ ಬಿಜೆಪಿಯ ಹಲವರು ವಿರೋಧ ಮಾಡಿದ್ದರು' ಎಂದು ತಿಳಿಸಿದರು.

'ಶತಮಾನಗಳ ಕಾಲದಿಂದ ವಾಸಿಸುತ್ತಿದ್ದರೂ ಈ ಜಾಗಗಳ ಮೇಲೆ ಈ ದಮನಿತ ಸಮುದಾಯಗಳಿಗೆ ಯಾವುದೆ ಹಕ್ಕುಗಳು ಇರಲಿಲ್ಲ. ಅರಣ್ಯ ಭೂಮಿ, ಸರ್ಕಾರಿ ಭೂಮಿ ಹಾಗೂ ಇತರೆ ಯಾರದೊ ಖಾಸಗಿ ಭೂಮಿಯಲ್ಲಿ ಈ ಜನರು ವಾಸಿಸುತ್ತಿದ್ದರು. ಅದೆಷ್ಟೊ ವರ್ಷಗಳಿಂದ ವಾಸಿಸುತ್ತಿದ್ದರೂ ಸಹ ಜಾಗ ಖಾಲಿ ಮಾಡುವಂತೆ ಅನೇಕರಿಗೆ ಚಿತ್ರಹಿಂಸೆಗಳನ್ನು ಮಾಡಿದ್ದ ಉದಾಹರಣೆಗಳೂ ಇವೆ' ಎಂದು ಆರೋಪಿಸಿದರು. 

'ಇದನ್ನು ತಪ್ಪಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರವು ಈ ಸಮಸ್ಯೆಯನ್ನು ಅಧ್ಯಯನ ಮಾಡಿ ವರದಿ ನಿಡಲು ನರಸಿಂಹಯ್ಯ ಸಮಿತಿಯನ್ನು ನೇಮಕ ಮಾಡಿತ್ತು. ನರಸಿಂಹಯ್ಯನವರ ಸಮಿತಿ ವರದಿ ನೀಡಿದ ಕೂಡಲೆ ನಾವು ಭೂ ಕಂದಾಯ ಕಾಯ್ದೆಯ ಸೆಕ್ಷನ್ 94ಡಿ ಮತ್ತು ಭೂ ಸುಧಾರಣಾ ಕಾಯ್ದೆಯ 38ಎ ಗಳಿಗೆ ತಿದ್ದುಪಡಿ ತಂದೆವು ಹಾಗೂ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಅರಣ್ಯ ಹಕ್ಕು ಕಾಯ್ದೆಗೆ ನಿಯಮಾವಳಿಗಳನ್ನು ರೂಪಿಸಿದ್ದೆವು' ಎಂದು ತಿಳಿಸಿದರು. 

'ಇಷ್ಟನ್ನು ಮಾಡಿ ಸುಮ್ಮನಾಗಲಿಲ್ಲ. 2017 ರಿಂದ ಅನುಷ್ಠಾನಕ್ಕೆ ಮುಂದಾದೆವು. ಕೇವಲ 11 ತಿಂಗಳಲ್ಲಿ 2800ಕ್ಕೂ ಅಧಿಕ ದಾಖಲೆ ರಹಿತ ಗ್ರಾಮಗಳನ್ನು ಗುರ್ತಿಸಿ ಅವುಗಳನ್ನು ಕಂದಾಯ ಗ್ರಾಮ ಮಾಡಲು 2300 ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ತರಿಸಿಕೊಂಡು 1300ಕ್ಕೂ ಹೆಚ್ಚಿನ ಗ್ರಾಮಗಳನ್ನು ಕಂದಾಯ ಗ್ರಾಮ ಎಂದು ಅಧಿಸೂಚನೆ ಹೊರಡಿಸಿದ್ದೆವು. ಸ್ವಂತ ಕೆಲಸ ಮಾಡಿ ಗೊತ್ತಿಲ್ಲದ ಬಿಜೆಪಿಯವರು ನಾವು ಮಾಡಿದ್ದರ ಕ್ರೆಡಿಟ್ಟು ತೆಗೆದುಕೊಳ್ಳಲು ಹೊರಟಿದ್ದಾರೆ. ಇದಕ್ಕಿಂತ ದುರಂತ ಬೇರೇನಾದರೂ ಇದೆಯೆ? ಎಂದು ನರೇಂದ್ರ ಮೋದಿಯವರೆ ಹೇಳಬೇಕು' ಎಂದು ಸಿದ್ದರಾಮಯ್ಯ ಆಗ್ರಹಿಸಿದರು. 

Similar News