ಕಾಂಗ್ರೆಸ್ ಸೇರಲು BJP ಶಾಸಕರು ಸಿದ್ಧರಿದ್ದಾರೆ, ಸ್ವಲ್ಪ ಕಾಲ ಕಾಯಿರಿ ಎಂದಿದ್ದೇನೆ: ಡಿ.ಕೆ.ಶಿವಕುಮಾರ್

''ನಮಗೆ ಲಂಚದ ವಿಚಾರದಲ್ಲಿ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ''

Update: 2023-01-19 12:30 GMT

ಹಾವೇರಿ, ಜ. 19: ‘ಬಿಜೆಪಿಯಿಂದ ಕಾಂಗ್ರೆಸ್ ಸೇರಲು ಶಾಸಕರುಗಳೇ ಸಿದ್ಧರಿದ್ದಾರೆ. ನನ್ನ ಹತ್ತಿರ ಜಾಗ, ಕುರ್ಚಿ ಇಲ್ಲ, ಸ್ವಲ್ಪ ಕಾಲ ಕಾಯಿರಿ ಎಂದು ನಾನೇ ತಡೆದಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಗುರುವಾರ ಹಾವೇರಿಯಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದೆ ಕಾಂಗ್ರೆಸ್ 140 ಸೀಟುಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ. ಜನರಿಗೆ ಅಧಿಕಾರ ಸಿಗಲಿದೆ. ಹಾವೇರಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಇಂದು ನಾವು ಒಂದು ಉದ್ದೇಶ ಮನದಲ್ಲಿಟ್ಟುಕೊಂಡು ನಿಮ್ಮ ಮುಂದೆ ಬಂದಿದ್ದೇವೆ. ರಾಜ್ಯದ ಜನರ ನೋವು, ಸಮಸ್ಯೆ, ಭಾವನೆ, ಅಭಿಪ್ರಾಯಗಳನ್ನು ಶೇಖರಿಸಿ, ನಿಮಗೆ ಶಕ್ತಿ ನೀಡುವುದೇ ಪ್ರಜಾಧ್ವನಿ ಯಾತ್ರೆ ಎಂದು ನುಡಿದರು.

ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಹೊಸಪೇಟೆ, ಕೊಪ್ಪಳ, ಗದಗ ಮುಗಿಸಿ ಇಲ್ಲಿಗೆ ಬಂದಿದ್ದೇವೆ. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಹಾವೇರಿಯಲ್ಲಿ ಬಹಳ ದೊಡ್ಡ ಮಟ್ಟದ ಜನ ಸೇರಿದ್ದೀರಿ. ಎಲ್ಲ ಕಡೆಗಳಲ್ಲಿ ನಮಗೆ ಉತ್ತಮ ಜನ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ ಮಹಾ ಅಲೆಯನ್ನು ನೀವೆಲ್ಲರೂ ಆರಂಭಿಸಿದ್ದೀರಿ.

ನೀವು ಬಿಜೆಪಿಗೆ ಯಾಕೆ ಬೆಂಬಲ ನೀಡಬೇಕು? ಈ ಸರಕಾರ ಶೇ.40ರಷ್ಟು ಕಮಿಷನ್ ಪಡೆದಿದ್ದಕ್ಕಾ, ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಲು ಹಣ ಪಡೆದಿದ್ದಕ್ಕಾ, ಕೋವಿಡ್ ಸಮಯದಲ್ಲಿ ಜನ ಸತ್ತಿದ್ದಾಕ್ಕಾ?ಅವರ ಬದುಕು ನಿರ್ನಾಮ ಮಾಡಿದ್ದಕ್ಕಾ, ರೈತರ ಆದಾಯ ಡಬಲ್ ಮಾಡದಿರುವುದಕ್ಕೆ ಬಿಜೆಪಿಗೆ ಬೆಂಬಲ ನೀಡಬೇಕಾ? ಎಂದು ವಾಗ್ದಾಳಿ ನಡೆಸಿದರು.

ಚರ್ಚೆಗೆ ಬರಲಿ: ಗೃಹಜ್ಯೋತಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಪ್ರತಿ ಕುಟುಂಬಕ್ಕೆ 200ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ನಿರ್ಧಾರಿಸಿದ್ದೇವೆ. 200ಯುನಿಟ್‍ಗೆ ಈಗಿನ ದರದಲ್ಲಿ 1500ರೂ. ಆಗುತ್ತದೆ. ನೀವು 200ಯುನಿಟ್ ವರೆಗೂ ವಿದ್ಯುತ್  ಬಿಲ್ ಪಾವತಿ ಮಾಡುವಂತಿಲ್ಲ. ಇದು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆ. ಈ ಯೋಜನೆ ಬಗ್ಗೆ ಸಚಿವ ಸುನೀಲ್ ಕುಮಾರ್ ಈ ವಿದ್ಯುತ್ ಎಲ್ಲಿಂದ ತರುತ್ತಾರೆಂದು ಕೇಳುತ್ತಿದ್ದಾರೆ. ಸಿಎಂ, ಸಚಿವರಾಗಲಿ, ಯಾರಾದರೂ ವೇದಿಕೆ ಅಥವಾ ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರಲಿ, ವಿದ್ಯುತ್ ಹೇಗೆ ನೀಡುತ್ತೇವೆಂದು ವಿವರಿಸುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದರು.

ಬೊಮ್ಮಾಯಿ ನಮ್ಮ ಧಮ್ಮು ತಾಕತ್ತಿನ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಬರಲಿ, ನನಗೆ, ಸಿದ್ದರಾಮಯ್ಯ, ಎಚ್.ಕೆ ಪಾಟೀಲ್ ಅವರಿಗೆ ಎಷ್ಟು ಧಮ್ ಇದೆ ಎಂದು ತೋರಿಸುತ್ತೇವೆ. ನಿಮ್ಮ ಲಂಚದ ವಿಚಾರದಲ್ಲಿ ನಮ್ಮ ಧಮ್ ಇಲ್ಲ, ಬಡವರ ಬದುಕಿನಲ್ಲಿ ಬದಲಾವಣೆ ತರುವ ಧಮ್ ಇದೆ. ಜನರಿಗೆ ನೆರವಾಗಲು ನಮ್ಮ ಬಳಿ ಧಮ್ ಇದೆ. ನಾವು ಇಲ್ಲಿಗೆ ಬರುವ ಮುನ್ನ ಬಿಜೆಪಿಯ ಪಾಪದ ಪುರಾಣ ಮಾಡಿದ್ದೇವೆ. ಈ ಪಾಪದ ಪುರಾಣವನ್ನು ನಿಮಗೆ ಕಳಿಹಿಸಿಕೊಡುತ್ತೇವೆ. ಇದನ್ನು ಮನೆ ಮನೆಗೂ ತಲುಪಿಸಬೇಕು ಎಂದರು.

ಈಗ ಬಿಜೆಪಿಯವರು ಬಜೆಟ್‍ನಲ್ಲಿ ನಾವು ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳುತ್ತಿದ್ದಾರೆ. ಅಲ್ಲಮ ಪ್ರಭುಗಳು ಒಂದು ಮಾತು ಹೇಳಿದ್ದಾರೆ. ‘ಕೊಟ್ಟ ಕುದುರೆ ಏರಲಾಗದೇ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ ಶೂರನೂ ಅಲ್ಲ’. ಅದೇ ರೀತಿ ಅಧಿಕಾರ ಇದ್ದಾಗ ಜನಪರ ಕಾರ್ಯಕ್ರಮ ನೀಡದ ಬಿಜೆಪಿ ಸರಕಾರ ಅಧಿಕಾರ ಅಂತ್ಯವಾಗುವ ಸಮಯದಲ್ಲಿ ಕಾರ್ಯಕ್ರಮ ಘೋಷಣೆ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Similar News