ಹಾಸನ: ಕಾರಾಗೃಹದ ಮೇಲೆ ಪೊಲೀಸರಿಂದ ದಾಳಿ; ಮೊಬೈಲ್ ಫೋನ್, ಗಾಂಜಾ ಪತ್ತೆ

ಇಬ್ಬರ ಗಡಿಪಾರಿಗೆ ಎಸ್ಪಿ ಹರಿರಾಂ ಶಂಕರ್ ಆದೇಶ

Update: 2023-01-19 13:08 GMT

ಹಾಸನ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರಿಂದ ಜಿಲ್ಲಾ ಕಾರಾಗೃಹದ ಮೇಲೆ  ದಾಳಿ ನಡೆಸಲಾಗಿದ್ದು, ಈ ವೇಳೆ ಮೊಬೈಲ್ ಫೋನ್, ಗಾಂಜಾ ಪತ್ತೆಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಿಲ್ಲಾ ಬಂಧಿಖಾನೆಯಲ್ಲಿ ಕಾನೂನಿಗೆ ವಿರೋಧವಾಗಿರುವ ಘಟನೆಗಳು ಸಂಭವಿಸುತ್ತಿದೆ ಎನ್ನುವ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಮೇಲಧಿಕಾರಿಗಳ ಸೂಚನೆ ಮೇರೆಗೆ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಪೊಲೀಸ್ ಅಧಿಕಾರಿಗಳು ಕಾರಗೃಹಕ್ಕೆ ತಮ್ಮ 80ಕ್ಕೂ ಹೆಚ್ಚು ಜನ ಪೊಲೀಸ್ ಸಿಬ್ಬಂದಿಯೊಂದಿಗೆ ಏಕಕಾಲದಲ್ಲಿ 6 ಸೆಲ್ ಗಳ ಮೇಲೆ ದಿಢೀರ್ ದಾಳಿ ಮಾಡಿ ಪರಿಶೀಲನೆ ಮಾಡಿದಾಗ ಮೊಬೈಲ್ ಮತ್ತು 5 ರಿಂದ 10 ಗ್ರಾಂ ಮಾದಕ ವಸ್ತು ಇರುವ 5 ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ ಎಂದು ತಿಳಿಸಿದರು.

ಮೊಬೈಲ್ ನಿಂದ ಹಾಸನ ವ್ಯಾಪ್ತಿಯಲ್ಲಿ ಯಾರಿಗೂ ಕರೆ ಮಾಡಿರುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಹೊರಗಡೆಗೆ ಕರೆ ಮಾಡಲಾಗಿದೆಯೇ ಬಗ್ಗೆ ತನಿಖೆ ನಡೆಸಲಾಗುವುದು. ಹಾಗೆಯೇ ಗಾಂಜಾ ಎಲ್ಲಿಂದ ಪೂರೈಕೆಯಾಗಿದೆ, ಇಲ್ಲಿಗೆ ಕಳುಹಿಸಿಕೊಟ್ಟವರು ಯಾರು? ಎಂಬುದರ ಬಗ್ಗೆಯೂ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ ಎಂದರು. ಜೈಲ್ ಗೆ ಗಾಂಜಾ ಪೂರೈಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಈಗಾಗಲೇ ಹಾಸನ ನಗರದ ಆದಿಲ್ ಮತ್ತು ರಾಹಿಲ್ ಎಂಬುವರನ್ನು ಗಡಿಪಾರು ಮಾಡಲಾಗಿದೆ. ರಾಹಿಲ್ ನನ್ನು ಚಿಕ್ಕಮಗಳೂರು ಜಿಲ್ಲೆಗೆ ಕಳಿಸಲಾಗಿದೆ. ಆದಿಲ್ ತಲೆ ಮರೆಸಿಕೊಂಡಿದ್ದು, ಆತ ಸಿಕ್ಕ ನಂತರ ಜಿಲ್ಲೆಯಿಂದ ಹೊರ ಕಳಿಸಲಾಗುವುದು. ಕೆಲ ತಿಂಗಳಿಂದ ಈವರೆಗೆ 6 ಮಂದಿಯನ್ನು ಗಡಿಪಾರು ಮಾಡಲಾಗಿದೆ.​

ಕಾರಗೃಹಕ್ಕೆ ದಾಳಿ ವೇಳೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಣಿಕಂಠ, ನವೀನ್ ಕುಮಾರ್ ಮತ್ತು ಕಳವು ಪ್ರಕರಣದಲ್ಲಿ ಭಾಗಿ ಯಾಗಿದ್ದ ಅಬ್ದುಲ್ ಕರೀಂ, ಗುರುಮೂರ್ತಿ ಎಂಬುವರ ರಕ್ತ ಪರೀಕ್ಷೆ ಮಾಡಿಸಿದಾಗ ಗಾಂಜಾ ಸೇವಿಸಿರುವ ಬಗ್ಗೆ ಪಾಸಿಟಿವ್ ಬಂದಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುವುದು ಎಂದರು.

ಹೊರಗಡೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಿ ಜೈಲಿಗೆ ಕಳಿಸಿದರೆ ಅಲ್ಲೂ ಭೀತಿ ಹುಟ್ಟಿಸುವ ಚಟುವಟಿಕೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದರು.

ತನಿಖೆ ಸಂದರ್ಭದಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ಕಂಡು ಬಂದರೆ ಅವರ ವಿರುದ್ಧವೂ ಯಾವ ಮುಲಾಜು ಇಲ್ಲದೇ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ದಿನಗಳಲ್ಲಿ ಬಂದಿಖಾನೆ ಸುತ್ತ ಸಿಸಿ ಕ್ಯಾಮಾರ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Similar News