ಚಾಮರಾಜನಗರ: ಕಾಡಾನೆ ತುಳಿತಕ್ಕೆ ಅರಣ್ಯ ಇಲಾಖೆಯ ದಿನಗೂಲಿ ನೌಕರ ಬಲಿ

Update: 2023-01-19 14:44 GMT

ಚಾಮರಾಜನಗರ : ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟುವ ವೇಳೆ ಕಾಡಾನೆ ತುಳಿತದಿಂದ ಅರಣ್ಯ ಇಲಾಖೆ ದಿನಗೂಲಿ ನೌಕರ (ವಾಚರ್) ಸಾವನ್ನಪ್ಪಿರುವ ಘಟನೆ ತಾಲೂಕಿನ ಪ್ರಾದೇಶಿಕ ವಲಯ ವ್ಯಾಪ್ತಿಯ ಕರ್ನಾಟಕ ತಮಿಳುನಾಡು ಗಡಿ ಎತ್ತಗಟ್ಟಿಬೆಟ್ಟ ದ ದೇವಸ್ಥಾನ ಬಳಿ ನಡೆದಿದೆ.

ಚಾಮರಾಜನಗರ ತಾಲೂಕಿನ ಪುಣಜನೂರು ವಲಯದ ಹೊಸ ನೋಡಿನ ನಂಜಯ್ಯ (35) ಮೃತ ವ್ಯಕ್ತಿ. ಕಳೆದ ಕೆಲ ದಿನಗಳಿಂದಲೂ ಕಾನೆಗಳ ಹಿಂಡು ತಾಲೂಕಿನ ವಡ್ಗಲ್ಪುರ, ಚೆನ್ನಪ್ಪನಪುರ ಸೇರಿದಂತೆ ಇತರೆ ಗ್ರಾಮಗಳ ಜಮೀನು ಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟು ಜಮೀನುಗಳಲ್ಲಿ ಬೆಳೆದಿದ್ದ ಪಸಲು ನಾಶ ಪಡಿಸಿರುವುದಲ್ಲದೇ ಒಂದು ಎತ್ತು ಸಾವಿಗೂ ಕಾರಣವಾಗಿದ್ದವು. 

ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶ ದಿಂದ ಬಂದಿದ್ದ ಆನೆಗಳ ಹಿಂಡನ್ನು ವಾಪಸ್ಸು ಕಳುಹಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎತ್ತಗಟ್ಟಿ ಕ್ಯಾಂಪ್ ಗೆ ಒಳಪಡುವ ಚಿನ್ನಪ್ಪನವರ ಗುಡ್ಡದಲ್ಲಿ ಬೀಡು ಬಿಟ್ಟಿದ್ದ ಸುಮಾರು 60-15 ಆನೆ ಗಳನ್ನು ಕಾಡಿನತ್ತ ಓಡಿಸಲು ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಚೆನ್ನಪ್ಪನಮರ ಗುಡ್ಡದಲ್ಲಿನ ದೇವಸ್ಥಾನದ ಬಳಿಯಿಂದ ಆನೆಗಳನ್ನು ಅಟ್ಟುವ ಕಾರ್ಯ ನಡೆಸಿದ್ದಾರೆ. ಈ ವೇಳೆ ಇಲ್ಲಿಂದ ಹೊರಟ ಆನೆಗಳ ಹಿಂಡು ತಮಿಳುನಾಡು ಗಡಿಯಲ್ಲಿನ ಎತ್ತುಗಟ್ಟಿ ದೇವಸ್ಥಾನದ ಹತ್ತಿರ ತೆರಳಿವೆ.  ಅರಣ್ಯ ಇಲಾಖೆಯ ಸುಮಾರು 20-30 ಸಿಬ್ಬಂದಿಯನ್ನು ಕಂಡು ಗಾಬರಿಗೊಂಡ ತಾಯಿ ಆನೆಯೊಂಡು ಹಿಂದಿರುಗಿ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಗಿದೆ.

ಈ ವೇಳೆ ಸಿಬ್ಬಂದಿ ಚದುರಿ ಹೋಗಿದ್ದು ಆನೆಯು ನಂಜಯ್ಯ ಮೇಲೆ ದಾಳಿ ನಡೆಸಿ ತುಳಿದಿದೆ. ಬಳಿಕ ಸಿಬ್ಬಂದಿ ಕೂಗಾಟದಿಂದ ಸ್ಥಳದಿಂದ ಆನ ಕಾಲ್ಕಿತ್ತಿದೆ. ತೀವ್ರ ಗಾಯಗೊಂಡಿದ್ದ ನಂಜಯ್ಯನನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ನಂಜಯ್ಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Similar News