ತುಮಕೂರು: ಮನೆಯಲ್ಲಿ ಮೂವರು ಸೋದರಿಯರ ಆತ್ಮಹತ್ಯೆ

ಮೃತಪಟ್ಟ ಒಂಬತ್ತು ದಿನಗಳ ಬಳಿಕ ಪ್ರಕರಣ ಬೆಳಕಿಗೆ

Update: 2023-01-19 15:14 GMT

ಹುಳಿಯಾರು (ತುಮಕೂರು): ಒಂದೇ ಮನೆಯಲ್ಲಿ ಮೂವರು ಸೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಳಿಯಾರು ಹೋಬಳಿಯ ಬರಕನಹಾಲ್‍ತಾಂಡ್ಯದ ಬಳಿ ಗುರುವಾರ ಸಂಜೆ ಬೆಳಕಿಗೆ ಬಂದಿದೆ.

ರಂಜಿತಾ (24), ಬಿಂಧು (21) ಚಂದನಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿಯರಾಗಿದ್ದಾರೆ. ಇವರ ತಂದೆ, ತಾಯಿ ಇಬ್ಬರೂ ದಶಕಗಳ ಹಿಂದೆಯೇ ನೀಧನರಾಗಿದ್ದರು. ಕಳೆದ 3 ತಿಂಗಳ ಹಿಂದಷ್ಟೇ ಇವರನ್ನು ಸಾಕುತ್ತಿದ್ದ ಅಜ್ಜಿಯೂ ಸಹ ಮೃತಪಟ್ಟಿದ್ದರು. 

ರಂಜಿತಾ (24), ಬಿಂದು (21) ಇಬ್ಬರೂ ಕೆ.ಬಿ.ಕ್ರಾಸ್‍ನ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದರು. ಚಂದನಾ ವಿದ್ಯಾಭಾಸ್ಯ ಮಾಡುತ್ತಿದ್ದರು. ಈ ಮೂವರೂ ಬಾಲದೇವರಹಟ್ಟಿಯಿಂದ ಬರಕನಹಾಲ್ ತಾಂಡ್ಯಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ತಮ್ಮ ಒಂಟಿ ಮನೆಯಲ್ಲಿ ಕಳೆದ ಒಂಬತ್ತು ದಿನಗಳ ಹಿಂದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ದೇಹ ಕೊಳತೆ ವಾಸನೆ ಬಂದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಹೆಂಚು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಮೃತ ದೇಹವನ್ನು ಹೊರತೆಗೆದು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತಿಪಟೂರು ಎಎಸ್‍ಪಿ ಸಿದ್ಧಾರ್ಥಗೋಯಲ್, ಚಿಕ್ಕನಾಯಕನಹಳ್ಳಿ ಪಿಎಸ್‍ಐ ನಿರ್ಮಾಲ, ಹುಳಿಯಾರು ಪಿಎಸ್‍ಐ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News