ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದ ‘ಕೈದಿ ವಿಚಾರಣೆ’: ಸಚಿವ ಆರಗ ಜ್ಞಾನೇಂದ್ರ

Update: 2023-01-19 15:22 GMT

ಬೆಂಗಳೂರು, ಜ. 19: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಬೆದರಿಕೆ ಕರೆ ಮಾಡಿರುವ ಪ್ರಕರಣ ಸಂಬಂಧ ಕೈದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂಡಲಗಾ ಜೈಲಿನಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಕಚೇರಿಗೆ ಜ.14ರಂದು ಬೆದರಿಕೆ ಕರೆ ಮಾಡಿದ್ದು, ಕೈದಿಗೆ ಮೊಬೈಲ್‍ಫೋನ್ ಕೊಟ್ಟಿದ್ದು ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದರು.

ನೋಟಿಸ್ ಜಾರಿ: ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಸೇರಿದಂತೆ ಏಳು ಮಂದಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ, ಕಾರಾಗೃಹಗಳಿಗೆ ಜಾಮರ್ ಅಳವಡಿಕೆ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಸ್ಯಾಂಟ್ರೋ ರವಿ ಪ್ರಕರಣ ಮುಚ್ಚಿ ಹಾಕಲು ಸಿಐಡಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರ. ವಿಪಕ್ಷಗಳ ನಾಯಕರ ಯಾವುದೇ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಿಎಸ್ಸೈ ನೇಮಕಾತಿ ಅಕ್ರಮದ ತನಿಖೆ ಕೈಗೊಂಡಿದ್ದ ಸಿಐಡಿ ತಂಡವೇ ಸ್ಯಾಂಟ್ರೋ ರವಿ ಪ್ರಕರಣದ ತನಿಖೆ ಮಾಡುತ್ತಿದ್ದು, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

Similar News