58.65 ಮೆಟ್ರಿಕ್ ಟನ್ ಅಕ್ರಮ ದಾಸ್ತಾನು ಯೂರಿಯಾ ವಶ

Update: 2023-01-19 17:07 GMT

ಮಂಡ್ಯ, ಜ.19: ನಾಗಮಂಗಲ ತಾಲೂಕು ಚೀಣ್ಯ ಗ್ರಾಮದಲ್ಲಿ ಕೋಳಿ ಫಾರಂನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 58.65 ಮೆಟ್ರಿಕ್ ಟನ್ (1,173 ಚೀಲ) ಯೂರಿಯಾ ಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚೀಣ್ಯ ಗ್ರಾಮದ ರಮೇಶ್ ಮತ್ತು ಅವರ ಮಗ ದರ್ಶನ್ ಎಂಬುವರು ಸರಕಾರದ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸುವ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆಂಬ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್ ವಿ.ಎಸ್.ತಿಳಿಸಿದ್ದಾರೆ.

ಯಾವುದೇ ಪರವಾನಗಿ ಇಲ್ಲದೆ ಎಲ್ಲಿಂದಲೋ ತಂದು ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕಂಡುಬಂದಿರುವುದರಿಂದ ಆರೋಪಿಗಳ ವಿರುದ್ಧ ಕಲಂ-3, 7 ಅಗತ್ಯ ಸರಕುಗಳ ಕಾಯ್ದೆ, ಕಲಂ-25(1), 19(ಸಿ), ಕಲಂ-420 ಐಪಿಸಿ ಅಡಿಯಲ್ಲಿ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ರಸಗೊಬ್ಬರದ ಜತೆಗೆ, ಯೂರಿಯಾ ರಸಗೊಬ್ಬರದ ವಿವಿಧ ಕಂಪನಿಯ ಖಾಲಿ ಚೀಲಗಳು ಮತ್ತು ವಿವಿಧ ಬ್ರಾಂಡ್‍ನ ಖಾಲಿ ಚೀಲಗಳು, ಎರಡು ಹೊಲಿಗೆ ಯಂತ್ರಗಳು, ಒಂದು ಜನರೇಟರ್ ಹಾಗೂ ದಾರದ ಉಂಡೆಗಳನ್ನೂ ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ವ್ಯಕ್ತಿ ಅನಧಿಕೃತವಾಗಿ ರಸಗೊಬ್ಬರ ದಾಸ್ತಾನು, ಅಕ್ರಮ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಶಂಕೆ, ಅನುಮಾನ ಬಂದಲ್ಲಿ ರೈತರು ಹಾಗೂ ಸಾರ್ವಜನಿಕರು ಕೃಷಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

Similar News