ಚಿಕ್ಕಮಗಳೂರು | ಕಾಂಗ್ರೆಸ್ ಸಮಾವೇಶಕ್ಕೆ ನಿಗದಿಯಾಗಿದ್ದ ಜಾಗದ ಮಾಲಕರಿಗೆ ಬಿಜೆಪಿ ಮುಖಂಡರಿಂದ ಬೆದರಿಕೆ: ಆರೋಪ

ಪ್ರಜಾಧ್ವನಿಯಾತ್ರೆ ಯಶಸ್ಸು ಸಹಿಸದೇ ಬಿಜೆಪಿಯಿಂದ ಕೀಳು ರಾಜಕೀಯ: ಡಾ.ಅಂಶುಮಂತ್

Update: 2023-01-19 17:33 GMT

ಚಿಕ್ಕಮಗಳೂರು, ಜ.19: ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರಜಾಧ್ವನಿ ಯಾತ್ರೆ ಜ.21ಕ್ಕೆ ನಗರಕ್ಕೆ ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ತೊಂದರೆ ನೀಡುವ ಉದ್ದೇಶದಿಂದ ಬಿಜೆಪಿ ಮುಖಂಡರು ಕೀಳುಮಟ್ಟದ ರಾಜಕಾರಣಕ್ಕೆ ಮುಂದಾಗಿದ್ದಾರೆ. ಪ್ರಜಾಧ್ವನಿಯಾತ್ರೆಯ ಕಾರ್ಯಕ್ರಮಕ್ಕೆ ನಿಗದಿ ಮಾಡಿದ್ದ ಸ್ಥಳದ ಮಾಲಕರಿಗೆ ಬೆದರಿಕೆ ಹಾಕಿ ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಿಸಿದ್ದಾರೆ. ಬಿಜೆಪಿ ಮುಖಂಡರು ಕಾರ್ಯಕ್ರಮ ನಡೆಯುವ ಸ್ಥಳವನ್ನುಬದಲಾಯಿಸಿರಬಹುದು, ಆದರೆ ಜನರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಧ್ವನಿ ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದನ್ನು ಬಿಜೆಪಿ ಪಕ್ಷದ ಮುಖಂಡರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಜ.21ರಂದು ಮಧ್ಯಾಹ್ನ 1ಕ್ಕೆ ನಗರದ ಪಟಾಕಿ ಮೈದಾನದ ಖಾಸಗಿ ಜಮೀನಿನಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಖಾಸಗಿ ಜಮೀನಿನ ಮಾಲಕರು ಸಮಾವೇಶ ನಡೆಸಲು ಲಿಖಿತ ಅನುಮತಿ ನೀಡಿದ್ದರು. ಈ ಕಾರ್ಯಕ್ರಮಕ್ಕಾಗಿ ಪೊಲೀಸ್ ಇಲಾಖೆಯಿಂದಲೂ ಅನುಮತಿ ಪಡೆದುಕೊಳ್ಳಲಾಗಿತ್ತು. ಆದರೆ ಗುರುವಾರ ಭೂಮಿಪೂಜೆಗೆ ತೆರಳಿದ ಸಂದರ್ಭದಲ್ಲಿ ಖಾಸಗಿ ಜಮೀನಿನ ಮಾಲಕರು ಬಿಜೆಪಿ ಮುಖಂಡರ ಒತ್ತಡದ ಕಾರಣಕ್ಕೆ ಭೀತಿಯಿಂದ ಜಾಗ ನೀಡಲು ನಿರಾಕರಿಸಿದ್ದಾರೆ. ಈ ಕಾರಣದಿಂದಾಗಿ ಜ.21ರಂದು ನಡೆಯುವ ಪ್ರಜಾಧ್ವನಿ ಯಾತ್ರೆಯ ಸಮಾವೇಶದ ಸ್ಥಳವನ್ನು ಬೇರೆಡೆಗೆ ಬದಲಾಯಿಸಲಾಗಿದೆ ಎಂದರು. 

ಬಿಜೆಪಿಯ ಕೆಲ ಮುಖಂಡರು ಜಮೀನು ಮಾಲಕರಿಗೆ ಬೆದರಿಕೆ ಹಾಕಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿ ಅವರು, ಇಂತಹ ದಬ್ಬಾಳಿಕೆ, ಕುತಂತ್ರಗಳಿಗೆ ಕಾಂಗ್ರೆಸ್ ಪಕ್ಷ ಜಗ್ಗುವುದಿಲ್ಲ. ಸಮಾವೇಶ ನಡೆಸಲು ಉತ್ತಮ ಮೈದಾನವೇ ಸಿಕ್ಕಿದ್ದು, ನಗರದ ಬೇಲೂರು ರಸ್ತೆಯಲ್ಲಿರುವ ಆಶ್ರಯ ಪೆಟ್ರೋಲ್ ಬಂಕ್‍ನ ಹಿಂಬದಿಯ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಸ್ಥಳಗೊತ್ತು ಪಡಿಸಲಾಗಿದೆ. ಈ ಮೈದಾನದಲ್ಲಿ ಜ.21ರಂದು ನಿಗದಿತ ಸಮಯಕ್ಕೆ ಸಮಾವೇಶ ನಡೆಯಲಿದೆ ಎಂದ ಅವರು, ಕಾರ್ಯಕ್ರಮಕ್ಕೆ ಸುಮಾರು 50ಸಾವಿರ ಜನರು ಪಾಲ್ಗೊಳ್ಳಲಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾವೇಶಕ್ಕೆ ಬರಲಿದ್ದಾರೆ. ಕಾರ್ಯಕ್ರಮದ ಯಶಸ್ಸನ್ನು ಸಹಿಸದ ಬಿಜೆಪಿಯವರು ಕೀಳುಮಟ್ಟದ ರಾಜಕಾರಣಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಬಿಜೆಪಿ ಮುಖಂಡರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನೀಡಿರುವ ಕಿರುಕುಳಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪ್ರಜಾಧ್ವನಿಯಾತ್ರೆಯಿಂದ ಜಿಲ್ಲಾದ್ಯಂತ ಉತ್ತಮ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಆಡಳಿತ ಪಕ್ಷವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿಚಾರಗಳಿಗೆ ಮನ್ನಣೆ ನೀಡದೆ. ವಿರೋಧ ಪಕ್ಷದವರ ಧ್ವನಿ ಹತ್ತಿಕ್ಕುವ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ದೂರಿದರು.

ಸಿಡಿಎ ಮಾಜಿ ಅಧ್ಯಕ್ಷ ಹನೀಫ್, ಕಾಂಗ್ರೆಸ್ ಜಿಲ್ಲಾ ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್ ಮೊಸಸ್ ಉಪಸ್ಥಿತರಿದ್ದರು.

Similar News