‘ಡಬಲ್ ಇಂಜಿನ್’ ಸರಕಾರದಿಂದ ಕರ್ನಾಟಕ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ: ಪ್ರಧಾನಿ ಮೋದಿ

Update: 2023-01-19 18:17 GMT

ಯಾದಗಿರಿ, ಜ. 19: ‘ರಾಜ್ಯದಲ್ಲಾಗುತ್ತಿರುವ ಪ್ರಗತಿಯ ಸಾಧನೆಗೆ ಕಾರಣೀಕರ್ತರಾದ ಬಸವರಾಜ ಬೊಮ್ಮಾಯಿ ಮತ್ತು ಅವರ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶಹಬ್ಬಾಸಗಿರಿ ನೀಡಿದ್ದಾರೆ. ನೀರಾವರಿ ಯೋಜನೆಗಳ ಜಾರಿಗೆ ಡಬಲ್ ಇಂಜಿನ್ ಸರಕಾರ ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಗುರುವಾರ ಜಿಲ್ಲೆಯ ಕೊಡೇಕಲ್‍ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ ಮತ್ತು ಆಧುನೀಕರಣದಿಂದ ಯಾದಗಿರಿ, ಕಲಬುರಗಿ, ವಿಜಯಪುರದ ಲಕ್ಷಾಂತರ ರೈತರಿಗೆ ನೇರ ಲಾಭ ಆಗಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಲಕ್ಷಾಂತರ ಜನರಿಗೆ ಶುದ್ಧ ಕುಡಿಯುವ ನೀರು ಸಿಗಲಿದೆ ಎಂದರು.

ಮುಂದಿನ 25 ವರ್ಷಗಳ ವಿಕಾಸ ನಮ್ಮ ಗುರಿ: ಸೂರತ್-ಚೆನ್ನೈ ಆರ್ಥಿಕ ಕಾರಿಡಾರ್‍ನ ಭಾಗ ಕರ್ನಾಟಕದಲ್ಲೂ ಇದೆ. ಇದರ ಕೆಲಸ ಇಂದು ಶುರು ಆಗಿದೆ. ಈ ಮೂಲಕ ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಯ ಜನರ ಜೀವನ ಉತ್ತಮವಾಗಲಿದೆ ಹಾಗೂ ಉದ್ಯೋಗ ಸಿಗಲಿದೆ. ಇದರ ಜತೆಗೆ ಉತ್ತರ ಕರ್ನಾಟಕದ ಅಭಿವೃದ್ದಿ ಶರವೇಗದಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲದಲ್ಲಿ ಮುಂದಿನ 25 ವರ್ಷಗಳ ಅಭಿವೃದ್ದಿ ಕಲ್ಪನೆಯೊಂದಿಗೆ ದೇಶ ಮುಂದುವರಿಯುತ್ತಿದೆ. ಅಮೃತ ಮಹೋತ್ಸವ ಕಾಲದಲ್ಲಿ ವಿಕಸಿತ ಭಾರತವನ್ನು ನಿರ್ಮಾಣ ಮಾಡಬೇಕಿದೆ. ಭಾರತದ ಪ್ರತಿ ಕುಟುಂಬ, ಪ್ರತಿ ರಾಜ್ಯ ಈ ಅಭಿಯಾನದಲ್ಲಿ ಭಾಗವಹಿಸಿದಲ್ಲಿ ವಿಕಸಿತ ಭಾರತ ಉದ್ದೇಶ ಸಫಲವಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಕಾಂಗ್ರೆಸ್‍ನದ್ದು ವೋಟ್ ಬ್ಯಾಂಕ್ ರಾಜಕೀಯ: ಹಿಂದೆ ತಪ್ಪು ರಾಜಕೀಯ ನೀತಿಗಳು ಮತ್ತು ನಿರ್ಧಾರಗಳಿಂದ ನಾವು ಪಾಠ ಕಲಿತಿದ್ದೇವೆ. ನಮ್ಮ ಮುಂದೆ ಯಾದಗಿರಿ ಮತ್ತು ಉತ್ತರ ಕರ್ನಾಟಕದ ಉದಾಹರಣೆ ಇದೆ. ಈ ಕ್ಷೇತ್ರದ ಸಾಮಥ್ರ್ಯ ಕಮ್ಮಿ ಇಲ್ಲ. ಆದರೂ ಇದು ವಿಕಾಸದ ಯಾತ್ರೆಯಲ್ಲಿ ಬಹಳ ಹಿಂದೆ ಉಳಿದುಕೊಂಡಿದೆ ಎಂದು ನರೇಂದ್ರ ಮೋದಿ ಟೀಕಿಸಿದರು.
ಹಿಂದಿನ ಸರಕಾರ ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆ ಎಂದು ಘೋಷಿಸಿ ಸುಮ್ಮನಿದ್ದರು. ಹೀಗಿದ್ದರೆ ಬಡತನ ಹೇಗೆ ಕಡಿಮೆ ಆಗುತ್ತದೆ. ವಿದ್ಯುತ್, ನೀರಾವರಿ, ರಸ್ತೆ ಅಭಿವೃದ್ಧಿಗಳಿಗೆ ಸಮಯ ಕೊಡುವ ಕಾಲದಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡಿದರು. ಇದರ ನಷ್ಟವನ್ನು ಕರ್ನಾಟಕ ನೋಡಿದೆ ಎಂದು ಅವರು ಹೇಳಿದರು.

ಈಗ ನಮ್ಮ ಸರಕಾರ ಆ ಹಣೆಪಟ್ಟಿ ಕಳಚುವ ಕೆಲಸ ಮಾಡುತ್ತಿದೆ. ನಮ್ಮ ಪ್ರಾಥಮಿಕ ಕೆಲಸ ವಿಕಾಸ ಆಗಿದೆ. ಯಾವುದೇ ಜಿಲ್ಲೆ ಅಭಿವೃದ್ಧಿಯಿಂದ ಹಿಂದೆ ಉಳಿದರೆ ದೇಶದ ವಿಕಾಸ ಸಾಧ್ಯವಿಲ್ಲ. ಇದಕ್ಕೆ ಯಾದಗಿರಿ ಜಿಲ್ಲೆಯೂ ಸೇರಿದಂತೆ ದೇಶದ 100 ಜಿಲ್ಲೆಗಳಲ್ಲಿ ಆಕಾಂಕ್ಷ ಜಿಲ್ಲೆಗಳ ಯೋಜನೆ ಪ್ರಾರಂಭಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದರು.

ಯಾದಗಿರಿಯಲ್ಲಿ ಅಪೌಷ್ಠಿಕತೆ ಕಡಿಮೆ ಆಗಿದೆ: ಯಾದಗಿರಿಯಲ್ಲಿ ಶೇ.100ರಷ್ಟು ಮಕ್ಕಳ ವ್ಯಾಕ್ಸಿನ್ ಆಗಿದೆ. ಜಿಲ್ಲೆಯಲ್ಲಿ ಅಪೌಷ್ಠಿಕತೆಗೆ ಈಡಾಗಿದ್ದ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಇಲ್ಲಿನ ಎಲ್ಲ ಹಳ್ಳಿಗಳು ರಸ್ತೆ ಸಂಪರ್ಕ ಪಡೆದಿದೆ. ಆಕಾಂಕ್ಷ ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆ ಟಾಪ್ 10ರಲ್ಲಿದೆ. ಭಾರತ ಅಭಿವೃದ್ಧಿ ಹೊಂದಲು ಗಡಿ ಭದ್ರತೆ, ಕರಾವಳಿ ಭದ್ರತೆ ಜತೆಗೆ ನೀರಿನ ಭದ್ರತೆಯೂ ಮುಖ್ಯ. ಡಬಲ್ ಇಂಜಿನ್ ಸರಕಾರ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು.

ಕರ್ನಾಟಕದಲ್ಲಿ ಬಾಕಿ ಉಳಿದಿದ್ದ ಅನೇಕ ಯೋಜನೆಗಳು ಈಗ ಮುಕ್ತಾಯವಾಗುತ್ತಿದೆ. ಅದರಲ್ಲಿ ಹಲವು ನದಿಗಳ ಜೋಡಣೆ ಕಾರ್ಯವೂ ಜರುಗುತ್ತಿದೆ. ನಾರಾಯಣಪುರ ಎರದಂಡೆ ಕಾಲುವೆಯನ್ನು ಹೊಸ ತಂತ್ರಜ್ಞಾನದ ಮೂಲಕ ಕಾಮಗಾರಿ ಪೂರ್ಣಗೊಳಿಸಿದ್ದು, ನಾಲ್ಕೂವರೆ ಲಕ್ಷ ಹೆಕ್ಟೇರ್ ಜಮೀನು ನೀರಾವರಿ ಆಗಿದೆ. ಈಗ ದೇಶದಲ್ಲಿ ಪರ್ ಡ್ರಾಪ್ ಮೋರ್ ಕ್ರಾಪ್ ಯೋಜನೆ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು. 

ಮೈಕ್ರೋ ಇರಿಗೇಷನ್ ಮೂಲಕ ಬಲ ನೀಡುತ್ತಿದ್ದೇವೆ. ಹಿಂದಿನ ಆರೇಳು ವರ್ಷಗಳಲ್ಲಿ ದೇಶದ 70 ಲಕ್ಷ ಹೆಕ್ಟೇರ್ ಭೂಮಿಯನ್ನು ಮೈಕ್ರೋ ಇರಿಗೇಷನ್ ಅಡಿಯಲ್ಲಿ ತಂದಿದ್ದೇವೆ. ಕರ್ನಾಟಕದಲ್ಲಿ ಈ ಯೋಜನೆಯಿಂದ 5 ಲಕ್ಷ ಹೆಕ್ಟೇರ್ ಜಮೀನಿಗೆ ಲಾಭವಾಗಲಿದೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಎನ್‍ಇಪಿ ಜೊತೆಯಲ್ಲಿ ವಿದ್ಯಾನಿಧಿ: ವಿದ್ಯಾ ಕ್ಷೇತ್ರದಲ್ಲಿ ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿ ಜಾರಿಗೆ ತಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮ ಜಾರಿ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆ ಆಗಿದೆ. ಮಹಾಮಾರಿಯ ನಡುವೆಯೂ ಕರ್ನಾಟಕ ದೇಶದಲ್ಲಿ ಅಭಿವೃದ್ಧಿಯ ಪ್ರಗತಿಯಲ್ಲಿ ಮುನ್ನುಗ್ಗುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾದಗಿರಿ ರಾಷ್ಟ್ರದ ತೊಗರಿ ಕಣಜ: ಯಾದಗಿರಿ ಕ್ಷೇತ್ರ ತೊಗರಿಯ ಕಣಜವಾಗಿದೆ. ನೀವು ಬೆಳೆಯುವ ಉತ್ತರ ಕರ್ನಾಟಕದ ತೊಗರಿ ಹಾಗೂ ಬೇಳೆ ಕಾಳುಗಳು ದೇಶದಾದ್ಯಂತ ರಫ್ತಾಗುತ್ತಿದೆ. ಕೇಂದ್ರ ಸರಕಾರ ಕಳೆದ 8 ವರ್ಷಗಳಲ್ಲಿ ರೈತರಿಂದ ಶೇ.80ಕ್ಕೂ ಅಧಿಕ ಬೆಳೆಯನ್ನು ಎಂ.ಎಸ್.ಪಿ ಅಡಿ ಖರೀದಿ ಮಾಡಿದೆ. ಬೆಳೆ ಬೆಳೆಯುವ ರೈತರಿಗೆ 70 ಸಾವಿರ ಕೋಟಿ ಹಣದ ನೆರವು ನೀಡಿದ್ದೀವಿ ಎಂದು ಅವರು ತಿಳಿಸಿದರು.

ಖಾದ್ಯ ತೈಲದಲ್ಲಿ ಆತ್ಮನಿರ್ಭರತೆ ಮಾಡಲಾಗುತ್ತಿದೆ. ಇದರ ಲಾಭ ಕರ್ನಾಟಕದ ರೈತರಿಗೂ ಸಿಗಲಿದೆ. ಬಯೋ ಫ್ಯೂಯೆಲ್ ಆದ ಇಥೆನಾಲ್ ಬಳಕೆಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದ ಪ್ರಧಾನಿ ಮೋದಿ, ಉತ್ತರ ಕರ್ನಾಟಕದಲ್ಲಿ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಕೃಷಿ, ಉದ್ಯೋಗ, ಸಂಚಾರ ಎಲ್ಲಕ್ಕೂ ರಸ್ತೆ ಮುಖ್ಯ. ಇದಕ್ಕಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನ ಸವಾಲಾಗಿ ಸ್ವೀಕರಿಸಿದ್ದೇವೆ ಎಂದು ಹೇಳಿದರು.

Similar News