ಪಕ್ಕದ ಮನೆಯ ಅಡುಗೆ ಪರಿಮಳ ನಮ್ಮ ಮನೆಯದ್ದೇ ಅಂತಾರೆ...: ಸಿದ್ದರಾಮಯ್ಯಗೆ ಸಚಿವ ಅಶೋಕ್ ತಿರುಗೇಟು

Update: 2023-01-20 05:17 GMT

ಬೆಂಗಳೂರು: 'ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನವರು ಖಾಲಿಯಾಗಿರುವ ಅಡುಗೆ ಮನೆಯ ಡಬ್ಬ ಅಲ್ಲಾಡಿಸಿ, ಪಕ್ಕದ ಮನೆಯಿಂದ ಹೊರಬರುವ ಅಡುಗೆ ಪರಿಮಳ ನಮ್ಮ ಮನೆಯದ್ದೇ ಎಂದು ಹೇಳಿಕೊಂಡು ಓಡಾಡುತ್ತಾರೆ' ಎಂದು  ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ಯೋಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  'ಸಿದ್ದರಾಮಯ್ಯ ನವರೇ ನಮ್ಮ ಸರ್ಕಾರ ಯಾವುದೇ ಜನಪರ ಕಾರ್ಯಕ್ರಮ ಮಾಡಲಿ, ಅದನ್ನು ನಾನು ಅಧಿಕಾರದಲ್ಲಿದ್ದಾಗಲೇ ಯೋಚನೆ ಮಾಡಿದ್ದೆ ಅನ್ನುತ್ತೀರಿ. ನಿಮ್ಮದು ಬರೀ ಯೋಚನೆ ಮಾತ್ರ. ಯೋಜನೆ, ಕಾರ್ಯರೂಪ ಇಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾವು ತಯಾರಿಸಿದ ಅಡುಗೆಯನ್ನು ಬಿಜೆಪಿಯವರು ಬಡಿಸುತ್ತಿದ್ದಾರೆ: ಸಿದ್ದರಾಮಯ್ಯ 

'ಬಂಜಾರ ಸಮುದಾಯದವರದ್ದು ಸುಮಾರು 20-30 ವರ್ಷ ಹಳೆಯ ಬೇಡಿಕೆಯಾಗಿತ್ತು. ನೀವೆಲ್ಲರೂ ಬರಿ ಆಶ್ವಾಸನೆ ಕೊಡುವುದರಲ್ಲಿಯೇ ಕಾಲ ಕಳೆದಿರಿ. ನಮ್ಮ ಸರ್ಕಾರ ಬಂದ ಮೇಲೆ ಪ್ರಾಥಮಿಕ ಹಾಗೂ‌ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಮಾಡಿ 52,072 ಕುಟುಂಬಕ್ಕೆ ಹಕ್ಕುಪತ್ರ ನೀಡಿದ್ದೇವೆ' ಎಂದು ತಿಳಿಸಿದ್ದಾರೆ. 

''ಮುಂದೆ ದಾವಣಗೆರೆಯಲ್ಲಿಯೂ ಇದೇ ರೀತಿ ಕಾರ್ಯಕ್ರಮ ಮಾಡಿ, ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕುಪತ್ರ ನೀಡುತ್ತೇವೆ. ಆಗ ಯಾವ ಹೇಳಿಕೆ ನೀಡಬೇಕು ಎಂದು ಯೋಚಿಸಿ ಸಿದ್ಧರಾಗಿ ಸಿದ್ದರಾಮಯ್ಯನವರೇ'' ಎಂದು ಲೇವಡಿ ಮಾಡಿದ್ದಾರೆ.

'75 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಹಿಂದುಳಿದವರ ಕಲ್ಯಾಣದ ಹೆಸರಲ್ಲಿ ಮತ ಪಡೆದಿರಿ. ಅಧಿಕಾರ ಅನುಭವಿಸಿದ್ದೀರಿ. ಆದರೆ ಜನಕಲ್ಯಾಣದ ಮಾತು ದೂರವೇ ಉಳಿಯಿತು. ನಿಮ್ಮದು ಮತ ಬ್ಯಾಂಕ್ ರಾಜಕೀಯ. ನಮ್ಮದು ಅಭಿವೃದ್ಧಿ ಪಥದ ರಾಜಕೀಯ' ಎಂದು ಸಚಿವ ಅಶೋಕ್ ಟ್ವೀಟಿಸಿದ್ದಾರೆ. 

Similar News