ಮೋದಿ ಸಿದ್ದರಾಮಯ್ಯಗೆ ಭಯಪಡುತ್ತಾರೆ ಎಂಬುದು ಈ ವರ್ಷದ ಹೊಸ ಜೋಕ್: ಜಗದೀಶ್ ಶೆಟ್ಟರ್

''ಸಣ್ಣ ಹುಡುಗರೂ ಭಯಪಡುವುದಿಲ್ಲ...''

Update: 2023-01-20 08:45 GMT

ಹುಬ್ಬಳ್ಳಿ: 'ಮೋದಿ ಅವರು ಸಿದ್ದರಾಮಯ್ಯ ಅವರಿಗೆ ಭಯಪಡುತ್ತಾರೆ ಎಂಬುದು ಈ ವರ್ಷದ ಹೊಸ ಜೋಕ್. ವಿಶ್ವದಲ್ಲೇ ಪ್ರಭಾವಿಯಾದ ಮೋದಿ ಅವರು ಇವರಿಗೆ ಭಯಪಡುವುದುಂಟೆ. ಹಾಗೆ ನೋಡಿದರೆ, ಸಿದ್ದರಾಮಯ್ಯ ಅವರನ್ನು ಕಂಡರೆ ಸಣ್ಣ ಹುಡುಗರು ಸಹ ಭಯಪಡುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂಡಾ ನಿವಾಸಿಗಳಿಗೆ ರಾಜ್ಯ ಸರ್ಕಾರದಿಂದ ಹಕ್ಕುಪತ್ರ ವಿತರಣೆ ಮಾಡಿದ ಕುರಿತು ''ನಾವು ಮಾಡಿದ ಅಡುಗೆ ಬಿಜೆಪಿಯವರು ಬಡಿಸಿದ್ದಾರೆ'' ಎಂಬ ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಗೆ ತಿರುಗೇಟು ನೀಡಿದರು. 

'ಕೇಂದ್ರ ಮತ್ತು ರಾಜ್ಯದಲ್ಲಿ 60ಕ್ಕೂ ಹೆಚ್ಚು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ನವರು ತಾವು ಮಾಡಿದ ಅಡುಗೆಯನ್ನು ಇದುವರೆಗೆ ಏಕೆ ಬಡಿಸಲಿಲ್ಲ' ಎಂದು ಪ್ರಶ್ನಿಸಿದರು. 

'ನಾವು ಹಕ್ಕು ಪತ್ರ ಕೊಟ್ಟಾಗ ಕಾಂಗ್ರೆಸ್ ನವರಿಗೆ ಜ್ಞಾನೋದಯವಾಗಿದೆ. ಬಂಜಾರ ಸಮುದಾಯವರಿಗೆ ನ್ಯಾಯ ಕೊಡಿಸುವ ಬಿಜೆಪಿ ಕಾರ್ಯಕ್ರಮದ ಯಶಸ್ಸು ಕಂಡು ಹೊಟ್ಟೆ ಉರಿದಿದೆ. ಅದಕ್ಕಾಗಿ ಈ ರೀತಿ ಸಲ್ಲದ ಟೀಕೆ ಮಾಡುತ್ತಿದ್ದಾರೆ' ಎಂದು ಹೇಳಿದರು.

Similar News