ಒಬ್ಬರಿಗೆ ಒಂದೇ ಕ್ಷೇತ್ರದಿಂದ ಟಿಕೆಟ್, ಶೀಘ್ರದಲ್ಲೇ ಅಭ್ಯರ್ಥಿಗಳ ಘೋಷಣೆ: ಡಿ.ಕೆ.ಶಿವಕುಮಾರ್

Update: 2023-01-20 13:32 GMT

ಬೆಂಗಳೂರು, ಜ. 20: ಒಬ್ಬರೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಗೊಂದಲವಿಲ್ಲ. ಪಕ್ಷ ಈಗಾಗಲೇ ತೀರ್ಮಾನ ಮಾಡಿದೆ. ಫೆ.2ಕ್ಕೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ನಂತರ ಸ್ಕ್ರೀನಿಂಗ್ ಕಮಿಟಿ ಸಭೆ ಮಾಡಿ ಆದಷ್ಟು ಬೇಗ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾರು ಅರ್ಜಿ ಹಾಕಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಂಚಮಸಾಲಿ, ಒಕ್ಕಲಿಗರು, ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಸರಕಾರ ಎಲ್ಲರಿಗೂ ಮೋಸ ಮಾಡುತ್ತಿದೆ. ಬಿಜೆಪಿ ಯಾವ ನಿರ್ಧಾರವನ್ನು ಕಾನೂನು ಪ್ರಕಾರ ಮಾಡಿಲ್ಲ. ಫೆಬ್ರವರಿ ಅಂತ್ಯಕ್ಕೆ ಬಿಜೆಪಿ ಸರಕಾರದ ಅಧಿಕಾರ ಬಹುತೇಕ ಅಂತ್ಯವಾಗುತ್ತದೆ. ಅಧಿಕಾರಿಗಳ ಕೈಯಲ್ಲಿ 48 ದಿನಗಳ ಕಾಲ ಅಧಿಕಾರ ಇರುತ್ತದೆ. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ' ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿಕಾರು ಗುದ್ದಿ ಬಾನೆಟ್‌ ಮೇಲೆ ಯುವಕನನ್ನು ಎಳೆದೊಯ್ದ ಚಾಲಕಿ: ವಿಡಿಯೊ ವೈರಲ್ 

ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಮಿತ್ ಶಾ ಕೆಲ ತಿಂಗಳ ಹಿಂದೆ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು. ಇದೀಗ ಪ್ರಧಾನಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆಂದು ತಿಳಿಸಿದ್ದಾರೆ. ಎಂದರೆ ರಾಜ್ಯದ ನಾಯಕತ್ವ ವಿಫಲವಾಗಿದ್ದು, ಜನರ ಬದುಕಿನಲ್ಲಿ ಸುಧಾರಣೆ ತರಲು ಸಾಧ್ಯವಾಗಿಲ್ಲ. ಮುಂದಿನ ಬಜೆಟ್‍ನಲ್ಲಿ ಕಾರ್ಯಕ್ರಮ ನೀಡುತ್ತೇವೆ ಎನ್ನುತ್ತಿದ್ದಾರೆ. ಮೂರು ವರ್ಷಗಳಿಂದ ಇವರು ಏನು ಮಾಡಿದರು ಎಂದು ಅವರು ಪ್ರಶ್ನಿಸಿದರು. 

ಯಾರಿಗೆ ಬಂತು ಅಚ್ಚೆ ದಿನ? ಮಂತ್ರಿಗಳು ಬಹಳಷ್ಟು ಮಾತನಾಡುತ್ತಾರೆ. ಕೋವಿಡ್ ಬೆಡ್ ಹಗರಣ, ಹೆಣದ ಮೇಲೆ ಹಣ ಮಾಡಿದ್ದು ಯಾರು? ಕೆಂಪಣ್ಣ ದೂರು, ತಿಪ್ಪಾರೆಡ್ಡಿ ಮೇಲೆ ಆರೋಪ, ಯತ್ನಾಳ್, ವಿಶ್ವನಾಥ್ ಅವರ ಆರೋಪ ನಾವು ಮಾಡಿದ್ದೇವಾ? ಪೊಲೀಸ್ ನೇಮಕಾತಿ ಹಗರಣ, ಅಕ್ರಮಗಳೆ ಬಿಜೆಪಿ ಸಾಧನೆ ಎಂದು ಅವರು ವಾಗ್ದಾಳಿ ನಡೆಸಿದರು.

Similar News