ಪ.ಮಲ್ಲೇಶ್ ಅಂತಿಮ‌ದರ್ಶನ ಪಡೆದ ಸಿದ್ದರಾಮಯ್ಯ; ಧೀರ್ಘ ಕಾಲದ ಸ್ನೇಹಿತನ ನೆನೆದು ಕಂಬನಿ

Update: 2023-01-20 17:14 GMT

ಮೈಸೂರು,ಜ.29: ತಮ್ಮ ಧೀರ್ಘ ಕಾಲದ ಆತ್ಮೀಯ ಸ್ನೇಹಿತ ಪ.ಮಲ್ಲೇಶ್ ಅವರ ಅಂತಿಮ‌ ದರ್ಶನ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದರು.

ಬೆಂಗಳೂರಿನಿಂದ ಶುಕ್ರವಾರ ರಾಮಕೃಷ್ಣ ನಗರದಲ್ಲಿರುವ ಪ‌.ಮಲ್ಲೇಶ್ ಅವರ ನಿವಾಸಕ್ಕೆ  ನೇರವಾಗಿ ಆಗಮಿಸಿದ ಸಿದ್ಧರಾಮಯ್ಯ, ಆತ್ಮೀಯ ಸ್ನೇಹಿತನೊಂದಿಗಿನ ಒಡನಾಟ ನೆನೆದು ಬಾವುಕರಾದರು. ಬಳಿಕ ಅವರ ಕುಟುಂಬದವರಿಗೆ ಸಾಂತ್ವಾ ಹೇಳಿದರು.

ಕೆಲ ಸಮಯ ಅವರ ಮನೆಯಲ್ಲೇ ಕುಳಿತು ಸಾಹಿತಿಗಳು, ಹೋರಾಟಗಾರರೊಂದಿಗೆ ಪ.ಮಲ್ಲೇಶ್ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ.ಮಲ್ಲೇಶ್ ಸಾವಿಗೀಡಾದರು ಎಂದರೆ ನಂಬಲು ಆಗುತ್ತಿರಲಿಲ್ಲ. ಅಷ್ಟೊಂದು ಲವಲವಿಕೆಯಿಂದ್ದ ವ್ಯಕ್ತಿ. ಕಳೆದ 15 ದಿನಗಳ ಹಿಂದಷ್ಟೇ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ನನಗೆ ಸ್ವಲ್ಪ ಕಾಲು ನೋವಿದೆ. ಶುಗರ್, ಬಿಪಿ ಏನೂ ಇಲ್ಲ ಎಂದಿದ್ದರು.

ಆದರೆ ಅವರ ಹಠಾತ್ ಸಾವು ನನಗೆ ಅತೀವ ನೋವುಂಟು ಮಾಡಿದೆ. ಪ.ಮಲ್ಲೇಶ್ ಯಾವುದೇ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನೇರವಾಗಿಯೇ ಮಾತನಾಡುತ್ತಿದ್ದರು. ರಾಜಕೀಯವಾಗಿ ನನಗೆ ಹಲವು ವಿಚಾರಗಳನ್ನು ಮಾರ್ಗದರ್ಶನ ಮಾಡುತ್ತಿದ್ದರು ಎಂದು ಸ್ಮರಿಸಿದರು.

ನಂತರ ಪ.ಮಲ್ಲೇಶ್ ಅವರನ್ನು  ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರದ ಬಳಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಅವರ ಪತ್ನಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಗಣ್ಯರ ಸಂತಾಪ:

ಹಿರಿಯ ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ್ ನಿಧನದಿಂದ ಸಮಾಜವಾದ ಚಿಂತಕರ ಕೊನೆಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸಿಪಿಐಎಂ ನ ಜಗದೀಶ್ ಸೂರ್ಯ, ದಲಿತ ಸಂಘರ್ಷ ಸಮಿತಿಯ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಮೈಸೂರು ವಿವಿ ಸಂಶೋಧಕರ ಸಂಘ ಸೇರಿದಂತೆ ಹಲವರು ಪ.ಮಲ್ಲೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Similar News