ಅಂಗನವಾಡಿ ಕಾರ್ಯಕರ್ತೆ ಸಾವಿಗೆ ರಾಜ್ಯ ಸರಕಾರದ ಹೊಣೆಗೇಡಿತನ ಕಾರಣ: ಸಿದ್ದರಾಮಯ್ಯ

''ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು''

Update: 2023-01-20 17:44 GMT

ಬೆಂಗಳೂರು, ಜ. 20: ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ಜಿಲ್ಲೆಯ ನೀಲಮ್ಮ ಅವರ ಸಾವಿಗೆ ರಾಜ್ಯ ಬಿಜೆಪಿ ಸರಕಾರದ ಹೊಣೆಗೇಡಿತನ ಕಾರಣ. ಮೃತರ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ಮೂರು ದಿನಗಳಿಂದ ಚಳಿ, ಬಿಸಿಲು ಎನ್ನದೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕನಿಷ್ಠ ಪಕ್ಷ ಅವರ ಸಮಸ್ಯೆಯನ್ನು ಆಲಿಸುವ ಸೌಜನ್ಯವಾದರೂ ಬಿಜೆಪಿ ಸರಕಾರಕ್ಕೆ ಬೇಡವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಮಾತುಕತೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೇ ಮಾಡದೆ, ಏಕಾಏಕಿ ಪ್ರತಿಭಟನಾನಿರತ ಮೇಲೆ ಬಲಪ್ರಯೋಗ ಮಾಡುವುದು, ಬಂಧಿಸುವುದು ರಾಜ್ಯ ಬಿಜೆಪಿ ಸರಕಾರದ ದಾರ್ಷ್ಟ್ಯವನ್ನು ತೋರುತ್ತದೆ. 'ಆರುವ ಮೊದಲು ದೀಪ ಜೋರಾಗಿ ಉರಿಯುತ್ತದೆಯಂತೆ, ಬಿಜೆಪಿ ಸರಕಾರವೂ ಹಾಗೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

 ಹೋರಾಟದಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು:

ಕಳೆದ ಮೂರುದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಶಿಕಾರಿಪುರದ ನೀಲಮ್ಮಾ ಎಂಬವರು ಪಾಲ್ಗೊಂಡಿದ್ದರು. ಆದರೆ, ಅವರಿಗೆ ಚಳಿ, ಜ್ವರ ಕಂಡಬಂದ ಹಿನ್ನೆಲೆ ನಿನ್ನೆ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. 

Similar News