ತಾಂತ್ರಿ‘ಕತೆ’

Update: 2023-01-21 06:20 GMT

ದೇಶದ ಮೊದಲ 5ಜಿ ಟ್ಯಾಬ್ ಹೇಗಿದೆ ಗೊತ್ತೇ?

ಇತ್ತೀಚೆಗೆ 5ಜಿ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದಲ್ಲಂತೂ ರಿಲಯನ್ಸ್ ಜಿಯೋ, ಏರ್‌ಟೆಲ್ 5ಜಿ ನೆಟ್‌ವರ್ಕ್ ಪ್ರಾರಂಭಗೊಂಡಿದ್ದು, ಈ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಇಲ್ಲಿಯವರೆಗೆ ಭಾರತದಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಮಾತ್ರ ಲಾಂಚ್ ಮಾಡಲಾಗಿದೆ. ಆದರೆ ಈಗ ಅಮೆರಿಕದ ಲೆನೆವೋ ಕಂಪೆನಿಯು ಭಾರತದಲ್ಲಿ ಮೊದಲ 5ಜಿ ಆ್ಯಂಡ್ರಾಯ್ಡಾ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಲೆನೋವೋ ಟ್ಯಾಬ್ ಪಿ11, 5ಜಿ ಟ್ಯಾಬ್ಲೆಟ್‌ನ್ನು ಲೆನೆವೋ ಕಂಪೆನಿ ಪರಿಚಯಿಸಿದೆ. ಇದು ಕ್ವಾಲ್ಕಮ್‌ಸ್ನಾಪ್ ಡ್ರಾಗನ್ 750, 5ಜಿ ಪ್ರೊಸೆಸರ್ ಮತ್ತು 11 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿದೆ.

ಕೆಲವೇ ದಿನಗಳಲ್ಲಿ ಇದು ಮಾರ್ಕೆಟ್‌ನಲ್ಲಿ ಲಭ್ಯವಾಗಲಿದೆ. 5ಜಿ ಟ್ಯಾಬ್ಲೆಟ್ ಖರೀದಿಸುವ ಯೋಜನೆಯಲ್ಲಿರುವವರಿಗೆ ಇದು ಬಹಳಷ್ಟು ಉಪಯುಕ್ತವಾಗಲಿದೆ.

ಲೆನೆವೋ ಟ್ಯಾಬ್ ಪಿ11 5ಜಿ ಫೀಚರ್ಸ್ ಏನು?

ಈ ಟ್ಯಾಬ್ಲೆಟ್ 11 ಇಂಚಿನ 2ಕೆ ಡಿಸ್‌ಪ್ಲೇ ಜೊತೆಗೆ 2,000x1,200 ಪಿಕ್ಸೆಲ್ ರೆಸಲ್ಯೂಶನ್ ಮತ್ತು 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿರುತ್ತದೆ. ಇನ್ನು ಈ ಟ್ಯಾಬ್ಲೆಟ್‌ನಲ್ಲಿ ಡಾಲ್ಬಿ ವಿಷನ್ ಕೂಡ ಲಭ್ಯವಿದೆ. ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 750 5ಜಿ ಪ್ರೊಸೆಸರ್‌ನಿಂದ ರನ್ ಆಗುತ್ತದೆ. ಇದು ಆ್ಯಂಡ್ರಾಯ್ಡಾ 11 ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಟ್ಯಾಬ್ ಫೋಲ್ಡ್ ಮಾಡಬಹುದಾದ ಫೀಚರ್ ಹೊಂದಿದ್ದು, ಗೂಗಲ್ ಅಭಿವೃದ್ಧಿಪಡಿಸಲಾಗುತ್ತಿರುವ ಕಸ್ಟಮ್ ಆಪರೇಟಿಂಗ್ ಸಿಸ್ಟಮ್‌ಗೆ ಆ್ಯಂಡ್ರಾಯ್ಡಾ 12L ಅಪ್ಡೇಟ್ ಲಭ್ಯವಿರುವ ಸಾಧ್ಯತೆಗಳು ಇವೆ.

ಮೈಕ್ರೋ ಎಲ್‌ಇಡಿ ಡಿಸ್‌ಪ್ಲೇಯೊಂದಿಗೆ ಆ್ಯಪಲ್ ವಾಚ್..!

ಆ್ಯಪಲ್ ಕಂಪೆನಿಯೂ ತನ್ನ ಮುಂಬರುವ ಆ್ಯಪಲ್ ವಾಚ್ ಮಾದರಿಗಳಿಗಾಗಿ ಮೈಕ್ರೋ ಎಲ್‌ಇಡಿ ಡಿಸ್‌ಪ್ಲೇಗೆ ಬದಲಾಯಿಸುವ ನಿರೀಕ್ಷೆಯಿದೆ. ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯವು 2025ರಲ್ಲಿ ಕಸ್ಟಮೈಸ್ ಮಾಡಿದ ಮೈಕ್ರೋ ಎಲ್‌ಇಡಿ ಡಿಸ್‌ಪ್ಲೇ ತಂತ್ರಜ್ಞಾನದೊಂದಿಗೆ ಆ್ಯಪಲ್ ವಾಚ್ ಪ್ರಾರಂಭಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಆ್ಯಪಲ್ ವಾಚ್ ಮಾದರಿಗಳಲ್ಲಿ ಪ್ರಸಕ್ತ ಬಳಸುತ್ತಿರುವ ಒಎಲ್‌ಇಡಿ ಪರದೆಗಳಿಂದ ಬದಲಾಯಿಸಲು ಆ್ಯಪಲ್‌ನಿಂದ ಬಳಸಲಾಗುವ ಎಲ್‌ಇಡಿ ಡಿಸ್‌ಪ್ಲೇಗಳು. ಆ್ಯಪಲ್ ವಾಚ್ ಮತ್ತು ಐಫೋನ್‌ಗಳಿಗಾಗಿ ಇನ್-ಹೌಸ್ ಡಿಸ್‌ಪ್ಲೇಗಳನ್ನು ಉತ್ಪಾದಿಸಲು ಪ್ರಾರಂಭಿಸಲು ಆ್ಯಪಲ್ ಚಿಂತಿಸುತ್ತಿದೆ.

ಡಿಸ್‌ಪ್ಲೇಗಳಿಗಾಗಿ ಸ್ಯಾಮ್ಸಂಗ್ ಮತ್ತು ಎಲ್‌ಜಿ ಸೇರಿದಂತೆ ಇತರ ಕಂಪೆನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕಂಪೆನಿಯು ಪ್ರಯತ್ನಿಸುತ್ತಿದೆ. ಆದಾಗ್ಯೂ, ಬೃಹತ್ ಉತ್ಪಾದನೆಗಾಗಿ ಆ್ಯಪಲ್ ಈ ದಕ್ಷಿಣ ಕೊರಿಯಾದ ಕಂಪೆನಿಗಳನ್ನು ಅವಲಂಬಿಸುವುದನ್ನು ಮುಂದುವರಿಸುವ ಸಾಧ್ಯತೆಗಳು ದಟ್ಟವಾಗಿದೆ.

ಕಂಪೆನಿಯು ಸೆಪ್ಟಂಬರ್ 2022ರಲ್ಲಿ ಇತ್ತೀಚಿನ ಐಫೋನ್ 14 ಮಾದರಿಗಳೊಂದಿಗೆ ಆ್ಯಪಲ್ ವಾಚ್ ಅಲ್ಟ್ರಾವನ್ನು ಬಿಡುಗಡೆ ಮಾಡಿದೆ. ಅತ್ಯಂತ ದುಬಾರಿ ಆ್ಯಪಲ್ ವಾಚ್ 1.92 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಆ್ಯಪಲ್ ವಾಚ್ ಅಲ್ಟ್ರಾದ ಮೈಕ್ರೋ-ಎಲ್‌ಇಡಿ ಡಿಸ್‌ಪ್ಲೇ ರೂಪಾಂತರವು ದೊಡ್ಡದಾದ, 2.1 ಇಂಚಿನ ಪರದೆಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದಲ್ಲದೆ, ಮುಂಬರುವ ಆ್ಯಪಲ್ ವಾಚ್ ಅಲ್ಟ್ರಾ ಪ್ರಸಕ್ತ ಒಎಲ್‌ಇಡಿ ಮಾದರಿಗಳಿಗೆ ಹೋಲಿಸಿದರೆ ಹೆಚ್ಚಿನ ಬ್ರೈಟ್ನೆಸ್ ನೀಡುತ್ತದೆ ಎನ್ನಲಾಗಿದೆ.

ಇಂಟರ್‌ನೆಟ್ ಇಲ್ಲದೆಯೇ ವಾಟ್ಸ್‌ಆ್ಯಪ್ ಬಳಸಿ..!

ಇದು ಪ್ರಾಕ್ಸಿ ಫೀಚರ್ ಪ್ಲ್ಯಾನ್..!

ಈಗ ಇಂಟರ್‌ನೆಟ್ ಇಲ್ಲದೆ ಪ್ರಪಂಚವೇ ಇಲ್ಲ ಅನ್ನೋ ಪರಿಸ್ಥಿತಿ. ಸಾಮಾನ್ಯವಾಗಿ ವಾಟ್ಸ್‌ಆ್ಯಪ್ ಬಳಸಲು ಮೊಬೈಲ್‌ನಲ್ಲಿ ಇಂಟರ್‌ನೆಟ್ ಇರಬೇಕು ಅನ್ನುವುದು ನಮಗೆಲ್ಲಾ ಗೊತ್ತೇ ಇರುವ ವಿಷಯ. ಆದರೆ ಇತ್ತೀಚೆಗೆ ಆ್ಯಂಡ್ರಾಯ್ಡಾ, ಐಒಎಸ್ ಮತ್ತು ಡೆಸ್ಕ್ ಟಾಪ್ ಸಾಧನಗಳಿಗೆ ವಾಟ್ಸ್‌ಆ್ಯಪ್ ಪ್ರಾಕ್ಸಿ ಫೀಚರ್‌ವೊಂದನ್ನು ಪ್ರಾರಂಭಿಸಿದೆ. ಈ ಮೂಲಕ ಇಂಟರ್‌ನೆಟ್ ಇಲ್ಲದೆಯೇ ವಾಟ್ಸ್‌ಆ್ಯಪ್ ಬಳಸಬಹುದು.

ಈ ಹೊಸ ಫೀಚರ್ ಏನು?

ಈ ಹೊಸ ಫೀಚರ್ ಬಳಕೆದಾರರಿಗೆ ತಮ್ಮ ಪ್ರದೇಶದಲ್ಲಿ ಇಂಟರ್‌ನೆಟ್ ಸಂಪರ್ಕದಲ್ಲಿ ಸಮಸ್ಯೆ ಉಂಟಾದರೆ ಅಥವಾ ನಿರ್ಬಂಧಿಸಿದರೂ ಈ ಮೆಸೇಜಿಂಗ್ ಅಪ್ಲಿಕೇಶನ್ ಪ್ರವೇಶಿಸಲು ಅನುಮತಿಸುತ್ತದೆ. ವಾಟ್ಸ್ ಆ್ಯಪ್‌ನ ಪ್ರಾಕ್ಸಿ ಸಂಪರ್ಕದೊಂದಿಗೆ ಇಂಟರ್‌ನೆಟ್ ನಿರ್ಬಂಧಿಸಲಾಗಿದ್ದರೂ ಬಳಕೆದಾರರು ಸುಲಭವಾಗಿ ಸಂವಹನ ನಡೆಸಬಹುದು ಮತ್ತು ಸಂಪರ್ಕದಲ್ಲಿರಬಹುದು.

ನೀವು ಇರುವ ಪ್ರದೇಶ ಇಂಟರ್‌ನೆಟ್ ಸಮಸ್ಯೆ ಎದುರಿಸುತ್ತಿದ್ದರೆ, ವಾಟ್ಸ್‌ಆಪ್ ಬಳಕೆಯನ್ನು ಮುಂದುವರಿಸಲು ಪ್ರಾಕ್ಸಿ ಸರ್ವರ್‌ಗಳನ್ನು ನೀವು ಬಳಸಿಕೊಳ್ಳಬಹುದಾಗಿದೆ. ಈ ಪ್ರಾಕ್ಸಿ ಸರ್ವರ್‌ಗಳನ್ನು ಕೆಲವೇ ಕೆಲವು ಸಂಸ್ಥೆಗಳು ಸ್ಥಾಪಿಸುತ್ತವೆ, ಅವು ಜನರಿಗೆ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತಿವೆ.

ಆಗಾಗ ಇಂಟರ್‌ನೆಟ್ ಅಡಚಣೆಗಳನ್ನು ಎದುರಿಸಿದರೆ, ವಿಶ್ವಾಸಾರ್ಹ ಸಾಮಾಜಿಕ ಮಾಧ್ಯಮ ಮೂಲಗಳು ಅಥವಾ ಶೋಧ ಇಂಜಿನ್‌ಗಳ ಮೂಲಕ ಬಹು ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಹುಡುಕಬಹುದು ಮತ್ತು ಉಳಿಸಬಹುದು. ಕೆಲವರು ಆಗಾಗ ಈ ಪ್ರಾಕ್ಸಿ ಸರ್ವರ್‌ಗಳನ್ನು ರಚಿಸುತ್ತಾರೆ ಮತ್ತು ಅವುಗಳನ್ನು ಇತರರಿಗಾಗಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಾರೆ.

ನೀವು ಬಹುಸಂಖ್ಯೆಯಲ್ಲಿ ಪ್ರಾಕ್ಸಿ ಸರ್ವರ್ ವಿಳಾಸಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಗಾಗ, ಕೆಲವು ಸಮಯದ ನಂತರ ಅನೇಕ ಪ್ರಾಕ್ಸಿ ಸರ್ವರ್‌ಗಳನ್ನು ನಿರ್ಬಂಧಿಸಲಾಗುತ್ತಿರುತ್ತದೆ. ಆದ್ದರಿಂದ ಒಂದು ನೆಟ್‌ವರ್ಕ್ ಸಂಪರ್ಕಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಬೇರೆ ಪ್ರಾಕ್ಸಿ ಸರ್ವರ್‌ಗೆ ಪ್ರವೇಶಿಸಬಹುದು ಮತ್ತು ಸಂಪರ್ಕಿಸಬಹುದು.

ವಿಜ್ಞಾನ-ವಿಸ್ಮಯ

50 ಸಾವಿರ ವರ್ಷಗಳ ಬಳಿಕ ಭೂಮಿಯ ಸಮೀಪಕ್ಕೆ ಧೂಮಕೇತು..!

ಅಪರೂಪದ, ಹಸಿರು ಧೂಮಕೇತು ಈ ವಾರದಿಂದ ಭೂಮಿಯ ಮೂಲಕ ಹಾದುಹೋಗಲಿದೆ. ಸುಮಾರು 50 ಸಾವಿರ ವರ್ಷಗಳ ಹಿಂದೆ ನಡೆದಿದ್ದ ಆಕಾಶದಲ್ಲಿನ ಈ ವಿಸ್ಮಯವು ಇದೇ ವರ್ಷದಲ್ಲಿ ಮತ್ತೆ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳಲಿದೆ. ಅಂತರಿಕ್ಷದಲ್ಲಿ ಅದ್ಭುತ ದೃಶ್ಯವೊಂದು ತೆರೆದುಕೊಳ್ಳಲಿದೆ. 50 ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ ಭೂಮಿಯ ಸಮೀಪ ಬಂದಿದ್ದ ಧೂಮಕೇತು ಈಗ ಮತ್ತೆ ಭೂಮಿಯ ಸಮೀಪ ಬರಲಿದೆ. ವಿಜ್ಞಾನಿಗಳ ಪ್ರಕಾರ, ಈ ಅಪರೂಪದ ಧೂಮಕೇತು 2023ರ ಫೆಬ್ರವರಿ 1 ಮತ್ತು 2ರಂದು ಭೂಮಿಯ ಸಮೀಪಕ್ಕೆ ಬರಲಿದೆ. ಇದನ್ನು ನೇರವಾಗಿ ಕಣ್ಣಿನಿಂದ ನೋಡಬಹುದು. ಆಕಾಶವು ಸ್ಪಷ್ಟವಾಗಿದ್ದರೆ ಈ ಅದ್ಭುತ ದೃಶ್ಯ ಗೋಚರಿಸುತ್ತದೆ. ಇದು ಇತರ ಧೂಮಕೇತುಗಳಿಗಿಂತ ಭಿನ್ನವಾದದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಅಪರೂಪದ ಧೂಮಕೇತುವಿಗೆ ಸಿ/2022 ಇ3 ಎಂದು ಹೆಸರಿಡಲಾಗಿದೆ. ಫೆಬ್ರವರಿ 1 ಮತ್ತು 2ರಂದು ಸುಮಾರು 4.20 ಕೋಟಿ ಕಿಲೋಮೀಟರ್ ದೂರದಿಂದ ಗೋಚರವಾಗಲಿದೆ. ವಿಜ್ಞಾನಿಗಳು ಈಗ ಅಧ್ಯಯನಕ್ಕಿಳಿದಿದ್ದಾರೆ.

ಪ್ಲಾಸ್ಟಿಕ್ ಹೇಗೆ ಬಳಕೆಗೆ ಬಂತು ಗೊತ್ತೆ?

ಪ್ಲಾಸ್ಟಿಕ್ ಪರಿಸರಕ್ಕೆ ಅತ್ಯಂತ ಹಾನಿಕಾರಕ ವಸ್ತು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸರಕಾರಗಳು, ಪರಿಸರ ತಜ್ಞರು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಈ ಪ್ಲಾಸ್ಟಿಕ್ ಮೊದಲು ಹೇಗೆ ತಯಾರಿಸಲಾಯ್ತು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. 1907ಕ್ಕಿಂತಲೂ ಮುಂಚೆ ಅರಗನ್ನು ಅವಿದ್ಯುದ್ವಾಹಕ ಪಟ್ಟಿ (Insulation tape) ಆಗಿ ಬಳಸುತ್ತಿದ್ದರು. ಇದು ಅತ್ಯಂತ ದುಬಾರಿ ಹಾಗೂ ಇದನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆದ್ದರಿಂದ ಈ ಅರಗಿಗೆ ಪರ್ಯಾಯವಾದ ಒಂದು ಅವಿದ್ಯುದ್ವಾಹಕ ಪಟ್ಟಿಯನ್ನು ಕಂಡುಹಿಡಿಯಬೇಕಾಗಿತ್ತು. ಇದಕ್ಕಾಗಿ ಅನೇಕ ಪ್ರಯೋಗಗಳನ್ನು ನಡೆಸಿದ ಲಿಯೋ ಹೆನ್ರಿಕ್ ಬೇಕ್ ಲ್ಯಾಂಡ್ ಬೇಕ್ಲೈಟ್ ಪ್ಲಾಸ್ಟಿಕ್ಕನ್ನು ಕಂಡುಹಿಡಿದ. ಇದರಿಂದ ಮೊದ ಮೊದಲು ಪಟ್ಟಿಯನ್ನು ಮಾತ್ರ ತಯಾರಿಸಲಾಯಿತಾದರೂ ಮುಂದೆ ಸಾವಿರಾರು ವಸ್ತುಗಳನ್ನು ತಯಾರಿಸಲು ಆರಂಭಿಸಲಾಯಿತು. ಅಲ್ಲಿಂದಲ್ಲೇ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತ ಬಂತು.