ಜಾತಿಯ ವಿಷ ಬೀಜ ಕಿತ್ತೊಗೆಯುವ ಸಮಯ ಬಂದಿದೆ: ಕೆ.ಎಸ್.ಈಶ್ವರಪ್ಪ

Update: 2023-01-21 13:18 GMT

ಶಿವಮೊಗ್ಗ, ಜ.21: ಜಾತಿಯ ವಿಷ ಬೀಜ ಬಿತ್ತುವವರನ್ನು ಕಿತ್ತೊಗೆಯುವ ಸಮಯ ಬಂದಿದ್ದು, ನಾವೆಲ್ಲ ಒಂದೇ ಎನ್ನುವ ಮಹಾಪುರಷರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ  ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯ ಈ ನಾಡು ಕಂಡ ಅಪರೂಪದ ಮಹಾನ್ ಪುರಷ. ನಮ್ಮಲ್ಲಿ ಹಿರಿಮೆ ಇರಬೇಕು, ಕೀಳರಿಮೆ ಅಲ್ಲ ಎಂದು ತೋರಿದವರು. ಅನುಭವ ಮಂಟಪದಲ್ಲಿ ಯಾವುದೇ ಮುಲಾಜಿಲ್ಲದೇ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ನಿಜವಾದ ಧ್ವನಿಯಾಗಿದ್ದ ಅವರನ್ನು ಬಸವಣ್ಣನವರು ನಿಜಶರಣ ಎಂದು ಕರೆದಿದ್ದಾರೆ.

ಹಿಂದೆ ಭಾರತ ವಿಶ್ವಗುರು ಆಗಿದ್ದು ನಡುವಿನಲ್ಲಿ ಬಡ ರಾಷ್ಟ್ರವಾಗಿತ್ತು, ಇದೀಗ ಮತ್ತೆ ಇಂತಹ ಮಹಾನ್ ಪುರುಷರ ಪರಿಶ್ರಮದಿಂದಾಗಿ ವಿಶ್ವಗುರುವಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ರಾಷ್ಟ್ರ ಸಬಲವಾಗುತ್ತಿದೆ. ರಾಜ್ಯ ಸರ್ಕಾರ ಹಿಂದುಳಿದವರ ಅಭಿವೃದ್ದಿಗೆ ಬದ್ದವಾಗಿದ್ದು, ಅಭಿವೃದ್ದಿ ಕಾರ್ಯಕಗಳನ್ನು ಕೈಗೊಂಡಿದೆ ಎಂದ ಅವರು  ಶಿವಮೊಗ್ಗದಲ್ಲಿ ಸಮಾಜದ ಏಳ್ಗೆಗಾಗಿ ದುಡಿದ ಗಾಂಧಿ ಬಸಪ್ಪನವರ ಹೆಸರನ್ನು ಸರ್ಕಲ್ ಮತ್ತು ರಸ್ತೆಗೆ ಇಡಲು ಸರ್ಕಾರ ನಿರ್ಧರಿಸಿದ್ದು, ಫೆ.08 ರಂದು ಮಾನ್ಯ ಮುಖ್ಯಮಂತ್ರಿಗಳು ನಾಮಕರಣ ಮಾಡುವರು ಎಂದು ಇದೇ ವೇಳೆ ತಿಳಿಸಿದರು.

ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, 12 ನೇ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಅಂಬಿಗರ ಚೌಡಯ್ಯ ಸಹ ಅಗ್ರಗಣ್ಯರು. ಲೋಕ ಕಲ್ಯಾಣಕ್ಕಾಗಿ ಸ್ವಂತ ಒಡೆತನದ ಭೂಮಿಯನ್ನು ದಾನ ಮಾಡಿದ ಮಹಾನ್ ಶರಣರು ಇವರಾಗಿದ್ದು ಸಾಮಾಜಿಕವಾದ ಅನೇಕ ವಿರೋಧಗಳ ನಡುವೆಯೂ ವಚನ ಸಾಹಿತ್ಯದ ಮೂಲಕ ಸುಧಾರಣೆ ತಂದವರು. ದೋಣಿಗೆ ಹುಟ್ಟು ಹಾಕುವ ಮೂಲಕ ನಂಬಿದವರಿಗೆ ದಡ ಸೇರಿಸುವ ಮಹಾನ್ ಕಾಯಕಯೋಗಿ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಉಪ ಕುಲಸಚಿವರಾದ ಡಾ.ಶ್ರೀಶೈಲ ಸಿ ಹರಕಂಚಿ ಇವರು ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಡಿ.ಬಿ.ಕೆಂಚಪ್ಪ, ಜಿಲ್ಲಾ ಮೊಗವೀರರ ಸಂಘದ ಅಧ್ಯಕ್ಷ ಅಣ್ಣಪ್ಪ, ತಾಲ್ಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ಸತೀಶ್ ಗಾಂಧಿ ಬಸಪ್ಪ, ಅಪರ ಜಿಲ್ಲಾಧಿಕರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಅವಿನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಇತರರು ಹಾಜರಿದ್ದರು.

Similar News