ಚಿಕ್ಕಮಗಳೂರು | ಹುಳು ಹಿಡಿದ ಆಹಾರ ಪದಾರ್ಥಗಳಿಂದ ಬಿಸಿಯೂಟ ತಯಾರಿ: ಆರೋಪ

ಶಾಲೆಯ ಅವ್ಯವಸ್ಥೆ ಬಗ್ಗೆ ಪೋಷಕರ ಆಕ್ರೋಶ

Update: 2023-01-21 13:53 GMT

ಚಿಕ್ಕಮಗಳೂರು, ಜ.21: ಮಕ್ಕಳಿಗೆ ಗುಣಮಟ್ಟದ ಆಹಾರ ನೀಡದೇ ಹುಳುಗಳಿರುವ ಅಕ್ಕಿ ಬಳಸಿ ಅಡುಗೆ ಮಾಡಿ ಉಣಬಡಿಸಲಾಗುತ್ತಿದೆ ಎಂದು ಆರೋಪಿಸಿ ಮಕ್ಕಳ ಪೋಷಕರು, ಗ್ರಾಮಸ್ಥರು ಶಾಲೆಯ ಶಿಕ್ಷಕರು, ಬಿಸಿಯೂಟ ಕಾರ್ಯಕರ್ತೆಯರನ್ನು ತರಾಟೆಗೆ ಪಡೆದ ಘಟನೆ ಶನಿವಾರ ನರಸಿಂಹರಾಜಪುರ ತಾಲೂಕಿನ ಬಿ ಕಣಬೂರು ಗ್ರಾಮದಲ್ಲಿ ವರದಿಯಾಗಿದೆ.

ಬಿ ಕಣಬೂರು ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ 1-7ನೇತರಗತಿವರೆಗೆ ಒಟ್ಟು 117 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡದೇ ದಿನವಿಡೀ ಮೊಬೈಲ್‍ನಲ್ಲೇ ಮುಳುಗಿರುತ್ತಾರೆ. ಪಾಠ ಮಾಡುವ ಸಮಯದಲ್ಲೂ ಶಿಕ್ಷಕರು ಮೊಬೈಲ್‍ನಲ್ಲಿ ಕಾಲಾಹರಣ ಮಾಡುತ್ತಾರೆ ಎಂದು ಆರೋಪಿಸಿದ ಮಕ್ಕಳ ಪೋಷಕರು ಶನಿವಾರ ಬೆಳಗ್ಗೆ ಶಾಲಾ ಆವರಣಕ್ಕೆ ಆಗಮಿಸಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಶಿಕ್ಷಕಿಯೊಬ್ಬರು ಶಾಲಾ ಕೊಠಡಿಯೊಳಗೆ ಮಕ್ಕಳಿಗೆ ಪಾಠ ಮಾಡದೇ ಮೊಬೈಲ್‍ನಲ್ಲಿ ಮುಳುಗಿದ್ದ ವಿಡಿಯೋ, ಬಿಸಿಯೂಟದ ಕೊಠಡಿಯಲ್ಲಿದ್ದ ಅಕ್ಕಿ ಮೂಟೆಗಳ ಮೇಲೆ ಕುಟ್ಟೆ ಹುಳುಗಳು ಓಡಾಡುತ್ತಿರುವ ವಿಡಿಯೋಗಳನ್ನು ತೋರಿಸಿ ಶಿಕ್ಷಕರು, ಬಿಸಿಯೂಟದ ಸಿಬ್ಬಂದಿಯನ್ನು ತರಾಟೆಗೈದರು.

ಈ ವೇಳೆ ಮಾತನಾಡಿದ ಮಕ್ಕಳ ಪೋಷಕರು, ಗ್ರಾಮೀಣ ಭಾಗದ ಶಾಲೆಗಳು ಮುಚ್ಚುವಂತಾಗಲು ಶಾಲೆಯ ಶಿಕ್ಷಕರೇ ಕಾರಣ. ಕೈತುಂಬ ಸಂಬಳ ಪಡೆದುಕೊಳ್ಳುವ ಶಿಕ್ಷಕರು ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗೆ ಕಳುಹಿಸಿ ಸರಕಾರಿ ಶಾಲೆಗಳಿಗೆ ಬರುವ ಬಡವರ್ಗದವರ ಮಕ್ಕಳಿಗೆ ಸರಿಯಾಗಿ ಪಾಠ ಮಾಡದೇ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಬಂಧಿಸಿದ ಅಧಿಕಾರಿಗಳು, ಎಸ್‍ಡಿಎಂಸಿ ಸದಸ್ಯರ ಬಳಿ ದೂರು ಹೇಳಿದ ಪೋಷಕರು ಶಾಲೆಯಲ್ಲಿನ ಶಿಕ್ಷಕರ ನಡವಳಿಕೆ, ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಶಾಲೆ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. 

Similar News