ಹಾಸನದಲ್ಲಿ 'ಪ್ರಜಾಧ್ವನಿ ಯಾತ್ರೆ': ಬಿಜೆಪಿ, ಜೆಡಿಎಸ್‌ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

''ಅಂದು ಜೆಡಿಎಸ್ ಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬಹುದಿತ್ತು...''

Update: 2023-01-21 14:33 GMT

ಹಾಸನ: 2023ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರೂ ಪಕ್ಷಗಳಿಂದ ವಿವಿಧ ಯಾತ್ರೆಗಳು ಆರಂಭವಾಗಿದ್ದು, ಶನಿವಾರ ಹಾಸನಕ್ಕೆ ಬಂದ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಯಾತ್ರೆಯನ್ನು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಬರಮಾಡಿಕೊಂಡರು.

ಸಮಾವೇಶವನ್ನು ಉದ್ಘಾಟಿಸಿ, ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾನು 40 ವರ್ಷದ ರಾಜಕೀಯದಲ್ಲಿ ಹಾಸನ ಜಿಲ್ಲೆಯ ಜನ ನಾನು ಬಂದಾಗ ಜನರು ತೋರಿದ ಸ್ವಾಗತ , ಪ್ರೀತಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತಂದಿದೆ. ಇಂತಹ ಸ್ವಾಗತ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಹೆಚ್ಚು ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನವನ್ನೂ ಗೆಲ್ಲಿಸಿ ಬದಲಾವಣೆ ತರಲು ಹೊರಟಿದ್ದೀರಿ ಎಂದರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್  80 ಸ್ಥಾನ ಗಳಿಸಿತ್ತು. ಜನತಾದಳ 38 ಸ್ಥಾನಗಳಲ್ಲಿ ಜಯಗಳಿಸಿತ್ತು. 104 ಸ್ಥಾನವನ್ನು ಬಿಜೆಪಿ ಜಯಗಳಿಸಿತ್ತು. ಬಿಜೆಪಿ ದೂರ ಇಡುವ ದೃಷ್ಟಿಯಿಂದ ನಮ್ಮ ಸ್ವಾಭಿಮಾನ ಬದಿಗಿಟ್ಟು ಎಲ್ಲಾ ವರ್ಗದ ರಕ್ಷಣೆಗಾಗಿ 5 ವರ್ಷದ ಅಧಿಕಾರವನ್ನು ಜನತಾದಳ ಪಕ್ಷಕ್ಕೆ ನೀಡಿದ್ದೆವು. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗಬೇಕಾಗಿತ್ತು. ನಾವೇ ಮುಖ್ಯಮಂತ್ರಿ ಸ್ಥಾನ ತೆಗೆದುಕೊಂಡು ಜೆಡಿಎಸ್ ಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬಹುದಿತ್ತು. ಆದರೆ ನಾವು ಸ್ವಾರ್ಥ ರಾಜಕೀಯ ಮಾಡಲಿಲ್ಲ. ಉಳಿಸಿ ಬೆಳಸಿಕೊಂಡು ಹೋಗುವುದು ಒಬ್ಬ ನಾಯಕನ ಕರ್ತವ್ಯ ಎಂದರು.

ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ. ಕೊವೀಡ್ ಹೆಸರಿನಲ್ಲಿ ಹಣ ಹೊಡೆದರು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ, ಇಂಜಿನಿಯರ್ ಹುದ್ದೆ ಸೇರಿದಂತೆ ಎಲ್ಲಾ ನೇಮಕಾತಿಯಲ್ಲಿ ಲೂಟಿ ಹೊಡೆದರು. ಈ ಸರ್ಕಾರ ಮಾಡಲು ಪರೋಕ್ಷವಾಗಿ ಕಾರಣ ಯಾರು ಎಂಬುದರ ಬಗ್ಗೆ ನಾವು ಯೋಚನೆ ಮಾಡಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಜನರ ನಂಬಿಕೆ ಕಳೆದಕೊಂಡಿದೆ. ಈಗ ಇರುವ ಬೊಮ್ಮಾಯಿ ನೇತೃತ್ವದ ಸರ್ಕಾರ ದಲಿತರು, ಮಹಿಳೆಯರು, ಹಿಂದುಳಿದಿರುವ ಯುವಕರ ವಿರೋಧಿ ಸರ್ಕಾರವಾಗಿದೆ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಅವರು 2016 ರಲ್ಲಿ 5 ವರ್ಷದಲ್ಲಿ 2022 ರೊಳಗೆ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ರೈತರಿಗೆ ಭ್ರಮೆ ಹುಟ್ಟಿಸಿದರು. ಇದನ್ನು ಹೇಳಿ ರೈತ ವಿರೋಧಿ ಕಾಯ್ದೆ ಜಾರಿಗೆ ತಂದರು. ದೆಹಲಿಯಲ್ಲಿ ಇಡಿ ದೇಶದ ರೈತ ಸಂಘಟನೆ ರೈತರು ಕೇಂದ್ರ ಸರ್ಕಾರದ ವಿರುದ್ಧ ಅನೇಕ ತಿಂಗಳ ಕಾಲ ಹೋರಾಟ ನಡೆಸಿದರು. ರೈತರ ಹೋರಾಟ ಸಹಿಸಲಾಗದೆ ರೈತ ವಿರೋಧಿ ಕಾನೂನನ್ನು ವಾಪಸು ಪಡೆದರು. ಕರ್ನಾಟಕದಲ್ಲಿ ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದಾರೆ. ದೇವರಾಜು ಅರಸು ಜಾರಿಗೆ ತಂದ ಕಾನೂನು ಮಾರ್ಪಾಡು ಉಡುವವನೆ ಭೂಮಿ ಒಡೆಯ ತೆಗೆದು ಉಳ್ಳವನೆ ಭೂಮಿ ಒಡೆಯನ್ನಾಗಿ ಮಾಡಿದ್ದಾರೆ. ಬಿಜೆಪಿ 2018 ರ ಚುನಾವಣೆ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ರೈತರು ಪಡೆದ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು.

 ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್, ಮುಖಂಡ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ, ರೋಹಿತ್, ಸಂಸದ ಜಿ.ಸಿ. ಚಂದ್ರಶೇಖರ್, ಜೆ.ಡಿ. ಶೀಲಂ, ನಲಪಾಡ್, ಹೆಚ್.ಎಂ. ರೇವಣ್ಣ, ಪುಷ್ಪ ಅಮರನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಬಿ. ಶಿವರಾಂ, ಎಂ.ಎ. ಗೋಪಾಲಸ್ವಾಮಿ, ಧರ್ಮಸೇನ್, ಗೋವಿಂದಪ್ಪ, ಹೆಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಬಿ.ಪಿ. ಮಂಜೇಗೌಡ, ಬಿ.ಕೆ. ರಂಗಸ್ವಾಮಿ, ಡಿ. ಮಲ್ಲೇಶ್, ರಂಜಿತ್ ಗೊರೂರು, ರಘು ಇತರರು ಉಪಸ್ಥಿತರಿದ್ದರು.

Similar News