ಕಾಂಗ್ರೆಸ್ಸನ್ನು ಮತ್ತೆ ಮನೆಯಲ್ಲೇ ಕೂರಿಸಲು ಜನರು ನಿರ್ಧರಿಸಿದ್ದಾರೆ: ವಿಜಯಪುರದಲ್ಲಿ ಜೆ.ಪಿ.ನಡ್ಡಾ

Update: 2023-01-21 14:23 GMT

ವಿಜಯಪುರ, ಜ.21: ರಾಜ್ಯ ಕಾಂಗ್ರೆಸ್ಸನ್ನು ಮತ್ತೆ ಮನೆಯಲ್ಲೇ ಕೂರಿಸಲು ಕರ್ನಾಟಕದ ಜನರು ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಶನಿವಾರ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿ, ಜನಪರ, ಭ್ರಷ್ಟಾಚಾರ ರಹಿತ ಪಕ್ಷ ಬಿಜೆಪಿ. ಭ್ರಷ್ಟಾಚಾರ, ಕುಟುಂಬ ವಾದ ಮತ್ತು ಜಾತಿವಾದ ಎಂದರೆ ಕಾಂಗ್ರೆಸ್ ಎಂದು ಟೀಕಿಸಿದರು.

ಕುರ್ಚಿಗಾಗಿ ಕಾಂಗ್ರೆಸ್ ಕನಸು ಕಾಣುತ್ತಿದೆ. ಕಾಂಗ್ರೆಸ್ಸಿಗರು ಜಗಳ ಮಾಡುತ್ತಿರಲಿ. ಆಡಳಿತ ಮಾಡುವ ಕೆಲಸವನ್ನು ಬಿಜೆಪಿಗೆ ವಹಿಸಿ. ದೇಶದ ಮತ್ತು ಕರ್ನಾಟಕದ ಅಭಿವೃದ್ಧಿಗೆ ಗರಿಷ್ಠ ಯೋಜನೆಗಳನ್ನು ಬಿಜೆಪಿ ಸರಕಾರಗಳು ನೀಡಿವೆ. ಕಾಂಗ್ರೆಸ್ಸಿಗರು ಕರ್ನಾಟಕಕ್ಕಾಗಿ ಏನಾದರೂ ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದಾರಾ? ಒಂದಾದರೂ ಯೋಜನೆಯನ್ನು ಅವರಿಂದ ಹೆಸರಿಸಲು ಸಾಧ್ಯವೆ ಎಂದು ನಡ್ಡಾ ಸವಾಲು ಹಾಕಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶ್ರಮಿಸಿದೆ. ಬಿಜೆಪಿಯ ಗೆಲುವಿಗೆ ಪಕ್ಷ ಮಾಡಿದ ಕಾರ್ಯಗಳು ನೆರವಾಗಲಿದೆ. ಮನೆ ಮನೆಗೆ ಹೋಗಿ ಮತದಾರರ ಮನ ಒಲಿಸಿ ಪಕ್ಷವನ್ನು ಗೆಲ್ಲಿಸಬೇಕು. ಕಾಂಗ್ರೆಸ್‍ನಲ್ಲಿ ಸಮರ್ಥ ನಾಯಕರೇ ಇಲ್ಲ. ಕಾಂಗ್ರೆಸ್ಸಿಗರು ಕೇವಲ ನಾಟಕ ಮಾಡುವವರು. ದೇಶ, ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.

ಈ ಬಾರಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಬೇಕಿದೆ. ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ. ಬಿಜೆಪಿ ಪಕ್ಷವು 140ಕ್ಕೂ ಹೆಚ್ಚು ಸ್ಥಾನ ಪಡೆಯಲು ನಾವೆಲ್ಲರೂ ಪ್ರಯತ್ನ ಮಾಡಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಂಸದರು, ಶಾಸಕರು, ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

Similar News