'ಪ್ರಜಾಧ್ವನಿ' ಎಂದರೆ ನಮ್ಮ ಧ್ವನಿ ಅಲ್ಲ, ರಾಜ್ಯದ ಜನರ ನೋವಿನ ಧ್ವನಿ: ಸಿದ್ದರಾಮಯ್ಯ

Update: 2023-01-21 17:09 GMT

ಚಿಕ್ಕಮಗಳೂರು, ಜ.21: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ 200ಯುನಿಟ್ ಉಚಿತ ವಿದ್ಯುತ್ ನೀಡುವುದು ಹಾಗೂ ಮನೆ ಯಜಮಾನಿಗೆ 2 ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ತಕ್ಷಣ ಈ ಯೋಜನೆ ಜಾರಿಯಾಗಲಿವೆ. ಪ್ರಜಾಧ್ವನಿ ಎಂದರೆ ನಮ್ಮ ಧ್ವನಿ ಅಲ್ಲ, ರಾಜ್ಯದ ಜನರ ನೋವಿನ ಧ್ವನಿ. ಜನರ ಕಷ್ಟಗಳನ್ನು ಕೇಳುವ ನಿಟ್ಟಿನಲ್ಲಿ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ

ಶನಿವಾರ ನಗರದ ಬೇಲೂರು ರಸ್ತೆಯಲ್ಲಿರುವ ಆಶ್ರಯ ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆ ಅಂಗವಾಗಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುವ ಸರಕಾರವಾಗಿದೆ. ಬಿಜೆಪಿ ಸರಕಾರಕ್ಕೂ ಮುನ್ನ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಸರಕಾರ ಜನರಿಗೆ ನೀಡಿದ್ದ 165 ಭರವಸೆಗಳನ್ನೂ ಈಡೇರಿಸಿದೆ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡುವ ಎಲ್ಲ ಭರವಸೆಗಳನ್ನೂ ಅಧಿಕಾರಕ್ಕೆ ಬಂದ ದಿನವೇ ಈಡೇರಿಸಲಾಗುವುದು. ಕೊಟ್ಟ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಸರಕಾರ ಸದಾ ಬದ್ಧ ಎಂದರು.

ನಾನು ಸಿಎಂ ಆಗಿದ್ದ ವೇಳೆ ಬಿಪಿಎಲ್ ಕುಟುಂಬದ ಪ್ರತೀ ಸದಸ್ಯರಿಗೆ ತಲಾ 1 ರೂ. ಗೆ 7 ಕೆಜಿ ಅಕ್ಕಿ ನೀಡಿದ್ದೆ, ಆದರೆ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ 5ಕೆಜಿಗೆ ಅಕ್ಕಿ ಇಳಿಕೆ ಮಾಡಿ ಬಡವರ ಪಡಿತರಕ್ಕೂ ಕತ್ತರಿ ಹಾಕಿದೆ. ಚುನಾವಣೆ ಬಳಿಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು, ಬಿಪಿಎಲ್ ಕುಟುಂಬಗಳ ಪ್ರತೀ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದ ಅವರು, ಬಡವರು, ಕಾರ್ಮಿಕರು, ಆಟೊದವರು, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟಿನ್ ಆರಂಭಿಸಿದ್ದೆ, ಬಿಜೆಪಿ ಸರಕಾರ ರಾಜ್ಯಾದ್ಯಂತ ಈ ಕ್ಯಾಂಟಿನ್ ಬಂದ್ ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಎಳೆದಿದಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಮತ್ತೆ ಇಂದಿರಾ ಕ್ಯಾಂಟಿನ್ ಕಾರ್ಯಾರಂಭ ಮಾಡಲಿವೆ ಎಂದರು.

ಹಿಂದಿನ ಯಾವುದೇ ಸರಕಾರಗಳನ್ನು 40 ಪರ್ಸೆಂಟ್ ಸರಕಾರ ಎಂದು ಯಾರೂ ಕರೆದಿರಲಿಲ್ಲ. ನಾನು 5 ವರ್ಷಗಳ ಕಾಲ ಸಿಎಂ ಆಗಿದ್ದಾಗ, ಹಣಕಾಸು ಮಂತ್ರಿಯಾಗಿದ್ದಾಗ ಒಂದು ರುಪಾಯಿ ಹಗರಣವನ್ನೂ ನಡೆಸಿಲ್ಲ. ಹಗರಣ ನಡೆಸಿರುವುದನ್ನು ಸಾಭೀತು ಮಾಡಿದರೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದ ಅವರು, ನನ್ನ ಹೆಸರು ಸಿದ್ದರಾಮಯ್ಯ, ಅದನ್ನು ಅಪ್ಪ, ಅಮ್ಮ ಇಟ್ಟಿದ್ದಾರೆ, ಆದರೆ ಸಿದ್ರಾಮುಲ್ಲಾಖಾನ್ ಎಂದು ಹೆಸರಿಡಲು ಸಿ.ಟಿ.ರವಿ ಯಾವ ಸೀಮೆಯ ಗಿರಾಕಿ, ನನಗೆ ಅಪ್ಪ ಅಮ್ಮ ಹೆಸರಿಟ್ಟು ಸಿದ್ದರಾಮಯ್ಯ, ನಾನೂ ಕೂಡ ಹಿಂದು, ಆದರೆ ಸಿ.ಟಿ.ರವಿ ಅವರಂತೆ ಢೋಂಗಿ ಹಿಂದೂ ಅಲ್ಲ, ಕೋಮುವಾದಿ ರಾಜಕೀಯ ಮಾಡುತ್ತಿರುವ ಸಿ.ಟಿ.ರವಿ ಅವರಂತಹ ಬಿಜೆಪಿಯ ಕೋಮುವಾದಿಗಳಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ. ದೇಶ ಭಕ್ತಿ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷದ ಸಾವಿರಾರು ಹೆಸರುಗಳನ್ನು ಹೇಳುತ್ತೇವೆ, ಆರೆಸೆಸ್, ಬಿಜೆಪಿ, ಹಿಂದೂ ಸಭಾದ ಒಂದು ಹುಳುವಿನ ಹೆಸರು ಹೇಳಲು ಬಿಜೆಪಿಯವರಿಗೆ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷದವರು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವವರಲ್ಲ. ಜೆಡಿಎಸ್‍ಗೆ ಓಟು ನೀಡಿದರೇ ಅವರು ಕೋಮುವಾದಿಗಳೊಂದಿಗೆ ಕೈಜೋಡಿಸುತ್ತಾರೆ. ಇದಕ್ಕಾಗಿಯೇ ವೈಎಸ್‍ವಿ ದತ್ತ ಜೆಡಿಎಸ್ ಬಿಟ್ಟು ಬಂದಿದ್ದಾರೆ. ಹಲವಾರು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಪಕ್ಷಕ್ಕೆ ತತ್ವ ಸಿದ್ಧಾಂತ ಇಲ್ಲ, ಅವರು ಗೆದ್ದೆತ್ತಿನ ಬಾಲ ಹಿಡಿಯುವವರು ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದ ಜನರ ಸಮಸ್ಯೆ, ಅಭಿಪ್ರಾಯ ತಿಳಿದುಕೊಳ್ಳಲು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಯಾತ್ರೆಯ ಉದ್ದೇಶ. ಕಾಂಗ್ರೆಸ್ ಈ ದೇಶದ ಶಕ್ತಿಯಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜನರಿಗೆ ಶಕ್ತಿ ಬರಲಿದೆ. ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದು, ಇಡೀ ವಿಶ್ವ ನಮ್ಮ ದೇಶದತ್ತ ತಿರುಗಿ ನೋಡುತ್ತಿತ್ತು. ಹೂಡಿಕೆಗಾಗಿ ಜಾಗತಿಕ ಮಟ್ಟದ ಸಂಸ್ತೆಗಳು ರಾಜ್ಯಕ್ಕೆ ಬರುತ್ತಿದ್ದವು. ಇಂದು ಕರ್ನಾಟಕ ರಾಜ್ಯ ಭಷ್ಟಾಚಾರಕ್ಕೆ ಹೆಸರಾಗುತ್ತಿದೆ. ಕಮೀಶನ್ ದಂದೆ, ಭ್ರಷ್ಟಾಚಾರ, ಕೋಮುವಾದಿಂದ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಾಜ್ಯ ಸರಕಾರದ ಕಮೀಶನ್ ದಂದೆ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿ ಪತ್ರ ಬರೆದಿದ್ದಾರೆ, ಸರಕಾರಿ ಹುದ್ದೆಗಳನ್ನು ಲಕ್ಷ ಕೋಟಿಗೆ ಮಾರಲಾಗುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿಯ ಭ್ರಷ್ಟಾಚಾರ ಕೊಡ ತುಂಬಿದ್ದು, ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ, ಕಮೀಶನ್ ದಂಧೆ, ಕೋಮುವಾದಕ್ಕೆ ಕಡಿವಾಣ ಹಾಕಲಿದೆ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಕೋಮು ಸಾಮರಸ್ಯದ ಕಾರಣಕ್ಕೆ ಇಡೀ ದೇಶದಲ್ಲಿ ಖ್ಯಾತಿ ಪಡೆದಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಜಿಲ್ಲೆಯಾಗಿದೆ. ಇಂತಹ ಜಿಲ್ಲೆ ಕೋಮುವಾದಿಗಳ ಪ್ರಯೋಗಶಾಲೆಯಾಗಿ ಮಾರ್ಪಡುತ್ತಿರುವುದು ಬೇಸರದ ಸಂಗತಿಯಾಗಿದೆ. ಸಂಭಾವಿತ ರಾಜಕಾರಣಿಗಳಿದ್ದ ಜಿಲ್ಲೆ ಸದ್ಯ ಬೆಂಕಿ ಕಾರುವ, ಕೋಮುಗಲಭೆ ಸೃಷ್ಟಿಸುವವರ ಜಿಲ್ಲೆಯಾಗುತ್ತಿದೆ. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಧೀಮಂತ ನಾಯಕರನ್ನು ನೀಡಿದೆ. ಇಂತಹ ಪಕ್ಷದ ನಾಯಕಿಯಾಗಿರುವ ಸೋನಿಯಾಗಾಂಧಿ ಅವರ ಬಗ್ಗೆ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಭಾವೈಕ್ಯದ ಪ್ರತೀಕವಾಗಿರುವ ಬಾಬಾಬುಡನ್‍ಗಿರಿಯ ಸಾಮರಸ್ಯವನ್ನು ಕೆಡಿಸಿ ಜನರ ಭಾವನೆಗಳನ್ನು ಕೆರಳಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದ ಅವರು ಕಳೆದ 20 ವರ್ಷಗಳಲ್ಲಿ ಸಿ.ಟಿ.ರವಿ ಸರಕಾರದ ಅನುದಾನವನ್ನು ಗುತ್ತಿಗಾರರ ಮೂಲಕ ಲೂಟಿ ಮಾಡುತ್ತಿದ್ದಾರೆ. 20 ವರ್ಷಗಳ ಕಾಲ ಅಧಿಕಾರ ಹಿಡಿದ ಸಿ.ಟಿ.ರವಿ ಜಿಲ್ಲೆಯ ಯಾವ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂಬ ಬಗ್ಗೆ ಜನರಿಗೆ ಉತ್ತರ ನೀಡಬೇಕು ಎಂದರು.

ಸಮಾವೇಶದಲ್ಲಿ ಕೇರಳ ಶಾಸಕ ಹಾಗೂ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಮಾಜಿ ಸಚಿವ ಡಿ.ಎ.ಸುರೇಶ್, ಸಂಸದ ಚಂದ್ರಶೇಖರ್, ಕೇಂದ್ರದ ಮಾಜಿ ಸಚಿವರಾದ ಸೇಲಂನಾಯ್ಡು, ಡಿ.ಕೆ.ತಾರಾದೇವಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಮೋಟಮ್ಮ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್, ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ತರೀಕೆರೆ ಮಾಜಿ ಶಾಸಕ ಎಸ್.ಎಂ.ನಾಗರಾಜ್, ಕಡೂರು ಕಾಂಗ್ರೆಸ್ ಮುಖಂಡ ಎಂ.ಎಸ್.ಆನಂದ್, ಮಾಜಿ ಎಮ್ಮೆಲ್ಸಿ ಗಾಯತ್ರಿ ಶಾಂತೇಗೌಡ, ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ವೈಎಸ್‍ವಿ ದತ್ತ, ತರೀಕೆರೆ ಮಾಜಿ ಶಾಸಕರಾದ ಶ್ರೀನಿವಾಶ್, ಶಿವಶಂಕರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಮುಖಂಡರಾದ ಶ್ರೀನಿವಾಸ್, ಎನ್.ಶ್ರೀನಿವಾಸ್, ಮುಖಂಡರಾದ ರಾಮದಾಸ್, ಡಿ.ಎಲ್.ವಿಜಯ್‍ಕುಮಾರ್, ರೇಖಾ ಹುಲಿಯಪ್ಪಗೌಡ, ಬಿ.ಎಂ.ಸಂದೀಪ್, ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.


ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕಾಫಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಸರಕಾರಕ್ಕೆ ಕಾಫಿ ಬೆಳೆಗಾರರಿಂದಾಗಿ ಭಾರೀ ಪ್ರಮಾಣದಲ್ಲಿ ವಿದೇಶಿ ವಿನಿಮಯ ಬರುತ್ತಿದೆ. ಇಂತಹ ಕಾಫಿ ಬೆಳೆಗಾರರು ಸರ್ಫೇಸಿ ಕಾಯ್ದೆಯಿಂದಾಗಿ ನಲುಗಿ ಹೋಗಿದ್ದಾರೆ. ಬೆಳೆಗಾರರ ಕಾಫಿ ತೋಟಗಳನ್ನು ಬ್ಯಾಂಕ್ ಸಾಲಕ್ಕೆ ಹರಾಜು ಹಾಕಲಾಗುತ್ತಿದೆ. ಕೇಂದ್ರದ ಮೋದಿ ಸರಕಾರ ಸರ್ಫೇಸಿ ಕಾಯ್ದೆಗೆ ತಿದ್ದುಪಡಿ ತಂದು ಬೆಳೆಗಾರರನ್ನು ರಕ್ಷಣೆ ಮಾಡಬೇಕಿತ್ತು. ಆದರೆ ಮೋದಿ ಸರಕಾರಕ್ಕೆ ಬೆಳೆಗಾರರು ಪದೇಪದೇ ಮನವಿ ಮಾಡಿದರೂ ಕಾಯ್ದೆಗೆ ತಿದ್ದಪಡಿ ಮಾಡುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಡಿಕೆ ಬೆಳೆಗಾರರು ವಿವಿಧ ಕೊಳೆ ರೋಗದಿಂದ ನಲುಗಿದ್ದು, ರಕ್ಷಣೆ ನೀಡಬೇಕಾದ ಬಿಜೆಪಿ ಸರಕಾರ ಅಡಿಕೆಯನ್ನೇ ಬ್ಯಾನ್ ಮಾಡಲು ಮುಂದಾಗಿದೆ. ಯುವಜನತೆ ಉದ್ಯೋಗ ಕೇಳಿದರೇ ಲಂಚ ತನ್ನಿ ಎನ್ನುತ್ತಿದ್ದಾರೆ. ಬಿಜೆಪಿ ಸರಕಾರಗಳ ಜನವಿರೋಧಿ ನೀತಿಗಳಿಗೆ ಕಾಂಗ್ರೆಸ್ ಪಕ್ಷದವನ್ನು ಅಧಿಕಾರಕ್ಕೆ ತರುವುದೇ ಉಳಿದಿರುವ ದಾರಿಯಾಗಿದೆ.

- ರಣದೀಪ್ ಸಿಂಗ್ ಸುರ್ಜೇವಾಲ

----------------------

ಮಲೆನಾಡು ಹಾಗೂ ಕರಾವಳಿ ಭಾಗರ ರೈತರು, ಸಾರ್ವಜನಿಕರು ಅನೇಕ ಸಮಸ್ಯೆಗಳಿಂದ ನಲುಗುತ್ತಿದ್ದಾರೆ. ಕಾಫಿ, ಅಡಿಕೆ ಬೆಳೆಗಾರರು ಸಮಸ್ಯೆಗಳಿಂದ ನಲುಗಿದ್ದಾರೆ, ರಾಜ್ಯ ಕೇಂದ್ರ ಸರಕಾರ ಇದುವರೆಗೂ ನೆರವಿನ ಹಸ್ತಚಾಚಿಲ್ಲ. ಮಲೆನಾಡು, ಕರಾವಳಿ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ಸರಕಾರಿ, ಅರಣ್ಯ ಜಾಗದಲ್ಲಿ ಕೃಷಿ ಮಾಡಿದವರ ಸಾಗುವಳಿಯನ್ನು ಸಕ್ರಮ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು.

- ಡಿ.ಕೆ.ಶಿವಕುಮಾರ್
 

Similar News