ದಾಸ್ತಾನು ಅವಧಿ ಮೀರುವ ಅಪಾಯ ಹಿನ್ನೆಲೆ: ರಾಜ್ಯದಲ್ಲಿ ಲಸಿಕಾ ಅಭಿಯಾನ!

Update: 2023-01-22 02:42 GMT

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆ ಬಳಿ ಇರುವ ಕೋವಿಡ್ ಲಸಿಕಾ ದಾಸ್ತಾನು ಅವಧಿ ಮೀರುವ ಅಪಾಯ ಇರುವ ಹಿನ್ನೆಲೆಯಲ್ಲಿ ಶನಿವಾರ ರಾಜ್ಯಾದ್ಯಂತ ವ್ಯಾಪಕ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಎರಡನೇ ಡೋಸ್ ಹಾಗೂ ಮುನ್ನೆಚ್ಚರಿಕೆ ಡೋಸ್ ಪಡೆಯದ ಜನರನ್ನು ಗುರುತಿಸಿ ಲಸಿಕೆ ನೀಡಲಾಯಿತು ಎಂದು times of india ವರದಿ ಮಾಡಿದೆ.

ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಕೋವ್ಯಾಕ್ಸಿನ್ ಲಸಿಕಾ ಡೋಸ್‌ಗಳು ಹಾಗೂ ಎಂಟು ಲಕ್ಷ ಕೋವಿಶೀಲ್ಡ್ ಲಸಿಕೆಗಳು ಕ್ರಮವಾಗಿ ಜನವರಿ 31 ಹಾಗೂ ಫೆಬ್ರುವರಿ 9ರಂದು ನಿಗದಿತ ಅವಧಿ ಮೀರುತ್ತವೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಲಸಿಕಾ ಅಭಿಯಾನಕ್ಕೆ ಆರೋಗ್ಯ ಇಲಾಖೆ ಜಿಲ್ಲಾವಾರು ಯಾವುದೇ ನಿಗದಿತ ಗುರಿ ನೀಡಿಲ್ಲ. ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ನಾವು ಸಾಕಷ್ಟು ಫಲಾನುಭವಿಗಳನ್ನು ತಲುಪುತ್ತಿದ್ದೇವೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್ ಸ್ಪಷ್ಟಪಡಿಸಿದ್ದಾರೆ. ಗರಿಷ್ಠ ಫಲಾನುಭವಿಗಳನ್ನು ತಲುಪುವ ಮೂಲಕ, ಜಿಲ್ಲೆಗಳಿಗೆ ಹಂಚಿಕೆಯಾಗಿರುವ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತ ಎಲ್ಲ ಜಿಲ್ಲೆಗಳಿಗೆ ಸೂಚಿಸಲಾಗಿದೆ. ಗುರಿ ಮಾಡಲ್ಪಟ್ಟ ಜನರ ಪೈಕಿ ಶೇಕಡ 50ರಷ್ಟು ಮಂದಿಯನ್ನು ತಲುಪುವುದು ಉದ್ದೇಶ ಎಂದು ಅವರು ಹೇಳಿದ್ದಾರೆ. ಲಸಿಕಾ ಡೋಸ್ ವ್ಯರ್ಥವಾಗುವುದನ್ನು ತಡೆಯಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಲು ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ರಾಜ್ಯ ಜನವರಿ 16ರಂದು ಕೇಂದ್ರದಿಂದ 8 ಲಕ್ಷ ಕೋವಿಶೀಲ್ಡ್ ಲಸಿಕಾ ಡೋಸ್‌ಗಳನ್ನು ಸ್ವೀಕರಿಸಿತ್ತು.

Similar News