ಈ ವಾರ

Update: 2023-01-22 04:43 GMT

ನಾ ನಾಯಕಿ

ಕಳೆದ ವಾರ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದ್ದ ರಾಜ್ಯ ಕಾಂಗ್ರೆಸ್ ಈ ವಾರ ಪ್ರಿಯಾಂಕಾ ಗಾಂಧಿ ಮೂಲಕ ಗೃಹ ಲಕ್ಷ್ಮೀ ಯೋಜನೆ ಘೋಷಣೆ ಮಾಡಿತು. ಈ ಯೋಜನೆ ಅನ್ವಯ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ಹಣ, ರಾಜ್ಯದ ಸುಮಾರು ಒಂದೂವರೆ ಕೋಟಿ ಕುಟುಂಬಕ್ಕೆ ಇದರ ಲಾಭ ಸಿಗಲಿದೆ ಎಂದಿದೆ ಕಾಂಗ್ರೆಸ್. 2013ರ ಚುನಾವಣೆಗೆ ಹೋಲಿಸಿದರೆ 2018ರಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದು ಈ ಸಂಖ್ಯೆ ಇನ್ನು ಹೆಚ್ಚಾಗಿದೆ. ಸಹಜವಾಗಿಯೇ ಮಹಿಳಾ ಮತದಾರರನ್ನು ಕೇಂದ್ರೀಕರಿಸಿ ಎಲ್ಲ ಪಕ್ಷಗಳು ಯೋಜನೆ ಘೋಷಣೆ ಮಾಡುತ್ತ್ತವೆ. ಬಿಜೆಪಿ ಕೂಡ ‘ಗೃಹಿಣಿ ಶಕ್ತಿ’ ಯೋಜನೆ ಘೋಷಿಸಿದೆ.

ಇದೊಂದು ರಾಜಕೀಯ ಅಜೆಂಡಾವಾದರೂ ಮಹಿಳಾ ದೃಷ್ಟಿಕೋನದಿಂದ ಒಳ್ಳೆಯ ಬೆಳವಣಿಗೆ. ಇದುವರೆಗೆ ಮಹಿಳೆಯರನ್ನು ಒಂದು ಸಮುದಾಯ ಎಂದು ಪರಿಗಣಿಸಿ ಚುನಾವಣಾ ಘೋಷಣೆ ಮಾಡಿದ್ದು ರಾಜ್ಯದ ಮಟ್ಟಿಗೆ ಕಡಿಮೆ. ಅಂತೂ ಮಹಿಳೆಯರನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನುವುದೇ ದೊಡ್ಡ ವಿಷಯ. ಕೋಟ್ಯಂತರ ರೂ. ಲೂಟಿ ಹೊಡೆಯುವಾಗ, ಕಾರ್ಪೊರೇಟ್ ಸಾಲ ಮನ್ನಾ ಮಾಡುವಾಗ, ತಿಂಗಳಿಗೆ 2,000 ಕೊಡುವುದರಿಂದ ಖಜಾನೆ ಖಾಲಿಯಾಗದು. ಆದರೆ ತಕ್ಷಣಕ್ಕೆ ಇದು ಮಹಿಳಾ ಪರ ಅಂತ ಅನ್ನಿಸಿದ್ದರೂ ದೀರ್ಘಕಾಲಿಕವಾಗಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹಿಳೆಯರಿಗೆ ಹೆಚ್ಚಿನ ಸೀಟ್ ಬೇಕಿದೆ. ಅದನ್ನು ಈ ಚುನಾವಣೆಯಲ್ಲಿ ಪಕ್ಷಗಳು ಎಷ್ಟು ಮಾಡುತ್ತವೆ ನೋಡಬೇಕು.

ಹಾಗೇ ತೆರೆಮರೆಗೆ ಸರಿದು ಹೋಯಿತು. 

ಪ್ರಧಾನಿ ಮೋದಿ ರಾಜ್ಯ ಭೇಟಿ

ಪ್ರಧಾನಿ ನರೇಂದ್ರ ಮೋದಿ ಈ ತಿಂಗಳಲ್ಲಿ ಎರಡನೇ ಬಾರಿ 19ನೇ ತಾರೀಕು ಕಲ್ಯಾಣ ಕರ್ನಾಟಕಕ್ಕೆ ಭೇಟಿ ಕೊಟ್ಟರು. ಕಲಬುರ್ಗಿ, ಯಾದಗಿರಿಗೆ ಬಂದ ಮೋದಿ ಸುಮಾರು 10,800 ಕೋಟಿ ರೂ. ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು. ಕಷ್ಟ ಬಂದಾಗ ಮೋದಿ ಬರಲಿಲ್ಲ, ಚುನಾವಣೆ ಬಂದಾಗ ರಾಜ್ಯಕ್ಕೆ ಬರುತ್ತಾ ಇದ್ದಾರಾ? ಅಂತ ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಮಾಡಿದವು. ಇನ್ನು ಚುನಾವಣೆಗೆ ನನ್ನ ನಂಬಿ ಕೂರಬೇಡಿ ಎಂದು ರಾಜ್ಯ ನಾಯಕರಿಗೆ ತಿಳಿಸಿದ ಮೋದಿ, ಮುಸ್ಲಿಮರ ಮನಗೆಲ್ಲಲು ತಿಳಿಸಿದ್ದಾರೆ.

ಮುಂಬರುವ ರಾಜ್ಯ ಚುನಾವಣೆ ಸುಲಭದ ತುತ್ತಲ್ಲ ಅನ್ನುವುದು ಬಿಜೆಪಿಗೆ ಮನದಟ್ಟಾಗಿದೆ. ಧರ್ಮ ಮತ್ತು ಭಾವನಾತ್ಮಕ ವಿಚಾರಗಳು ಕೈ ಹಿಡಿಯಲಾರವು ಅಂತ ಅನ್ನಿಸಿದೆ. ಹಾಗಾಗಿಯೇ ಅಭಿವೃದ್ಧಿ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಬಿಜೆಪಿಯ ಈ ಬದಲಾದ ವರಸೆ ವರವಾಗುವುದೊ, ಶಾಪವಾಗುವುದೊ ಕಾದು ನೋಡಬೇಕು.

ತಿಪ್ಪಾರೆಡ್ಡಿ ಮೇಲೆ ಆರೋಪ

ರಾಜ್ಯ ಬಿಜೆಪಿ ಮೇಲಿರುವ ದೊಡ್ಡ ಆರೋಪ ಕಮಿಷನ್. ಶೇ. 40 ಸರಕಾರ ಎಂದೇ ಪ್ರತಿಪಕ್ಷಗಳು ಕರೆಯುವುದು. ಈಗ ಹಲವಾರು ಕಾಮಗಾರಿಗಳಲ್ಲಿ ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಕಮಿಷನ್ ಪಡೆದಿದ್ದಾರೆ ಎಂದು ಸ್ವತಃ ಗುತ್ತಿಗೆಗಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಆರೋಪ ಮಾಡಿದ್ದಾರೆ. ಮಾತ್ರವಲ್ಲ ಶಾಸಕ ತಿಪ್ಪಾರೆಡ್ಡಿಗೆ ತಾನೊಬ್ಬನೇ 90 ಲಕ್ಷ ರೂ. ನೀಡಿರುವುದಾಗಿ ಹೇಳಿರುವ ಅವರು, ತಿಪ್ಪಾರೆಡ್ಡಿ ಲಂಚ ಪಡೆದಿರುವ ಕೆಲವು ಆಡಿಯೊ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಕೆಂಪಣ್ಣ ಅವರು 14-15 ಶಾಸಕರ ವಿರುದ್ಧ ಸಾಕ್ಷಿ ಇದ್ದು ಕೋರ್ಟಿಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಕೆಂಪಣ್ಣ ಅವರಿಗೆ ದಾಖಲೆ ಕೊಡಿ ಎನ್ನುತ್ತಿದ್ದ ಬಿಜೆಪಿ ಈಗ ಏನು ಹೇಳುತ್ತದೋ ಗೊತ್ತಿಲ್ಲ. ಈ ಎಲ್ಲ ಪ್ರಕರಣಗಳು ರಾಜ್ಯ ಬಿಜೆಪಿ ವರ್ಚಸ್ಸು ಕುಗ್ಗಿಸಿರುವುದಂತೂ ನಿಜ.

ನಿರಾಣಿ-ಯತ್ನಾಳ್ ವಾಗ್ಯುದ್ಧ

ಬಿಜೆಪಿ ಶಾಸಕ ಮತ್ತು ಸಚಿವರ ನಡುವಿನ ಮಾತಿನ ಕದನ ತೀರಾ ಕೆಳಮಟ್ಟಕ್ಕೆ ಇಳಿದಿತ್ತು. ಸಚಿವ ನಿರಾಣಿಗೆ ‘ಪಿಂಪ್’ ಎಂದು ಯತ್ನಾಳ್ ಕರೆದರೆ, ಯತ್ನಾಳ್ ಹುಟ್ಟಿನ ಬಗ್ಗೆ ನಿರಾಣಿ ಪ್ರಶ್ನೆ ಮಾಡಿ ನಾಲಿಗೆ ಕತ್ತರಿಸುವ ಎಚ್ಚರಿಕೆ ಕೊಟ್ಟರು. ಅಷ್ಟು ಮಾತ್ರ ಅಲ್ಲ, ಯತ್ನಾಳ್ ಕಾರು ಚಾಲಕನ ಹತ್ಯೆ ಹೇಗಾಯಿತು? ಎಂದು ಕೇಳಿದರು. ಇಬ್ಬರೂ ಬಸವಣ್ಣನ ಅನುಯಾಯಿಗಳು, ಹೆಸರಿಗೆ ಮಾತ್ರ. ಅವರಾಡುವ ಮಾತು ಅಸಹ್ಯಕರ. ಇದೆಲ್ಲ ಪಕ್ಕಕ್ಕಿಟ್ಟು ಸಂಸ್ಕಾರದ ಪಕ್ಷ ಬಿಜೆಪಿ ಯಾಕೆ ಇವರನ್ನು ಹೀಗೆ ಬೀದಿಯಲ್ಲಿ ಕಚ್ಚಾಡಲು ಬಿಟ್ಟಿದೆಯೊ ಗೊತ್ತಿಲ್ಲ. ಒಬ್ಬರ ವಿರುದ್ಧವೂ ಪಕ್ಷ ಕ್ರಮ ಕೈಗೊಂಡಿಲ್ಲ. ಈ ನಡುವೆ ಯತ್ನಾಳ್ ಎತ್ತಿರೋ ಪ್ರಶ್ನೆ, ನಿರಾಣಿ ಎತ್ತಿರೋ ಕೊಲೆ ಪ್ರಕರಣ ಯಾವುದೇ ತನಿಖೆಯಾಗದೆ.

 ತೇಜಸ್ವಿ ಎಡವಟ್ಟು

ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಪ್ರಕರಣ ವಾರದ ನಂತರ ಬಯಲಿಗೆ ಬಂದು ದೊಡ್ಡ ಚರ್ಚೆಯೇ ನಡೆಯಿತು. ಅಂತೂ ಆ ಬಾಗಿಲು ತೆರೆದ ರಾಜಕಾರಣಿ ತೇಜಸ್ವಿ ಸೂರ್ಯ ಅನ್ನೋದು ಬಹಿರಂಗವಾಯಿತು. ಪ್ರತಿಪಕ್ಷಗಳು ತೇಜಸ್ವಿ ನಡೆಯನ್ನು ಟೀಕಿಸಿದವು. ‘‘ಮಕ್ಕಳಿಗೆ ಅಧಿಕಾರ ಕೊಟ್ಟರೆ ಹೀಗೆಯೇ ಆಗುವುದು’’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿತು. ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಎಂಬುದನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರೇ ಒಪ್ಪಿಕೊಂಡರೂ, ಬಿಜೆಪಿ ನಾಯಕ ಸಿ.ಟಿ. ರವಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೇಜಸ್ವಿ ತುರ್ತು ನಿರ್ಗಮನ ದ್ವಾರ ತೆರೆಯಲೇ ಇಲ್ಲ, ಕ್ಷಮೆ ಕೇಳುವ ಮಾತು ಎಲ್ಲಿಂದ? ಎಂದರು. ತೇಜಸ್ವಿ ಸೂರ್ಯ ಆಗಾಗ ಕ್ಷಮೆ ಕೇಳುವುದರಲ್ಲಿ ಬಿಜೆಪಿಗರಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅಪ್ರಬುದ್ಧತೆ, ಸಂಸತ್ತಿನಲ್ಲಿ ಹಸಿ ಸುಳ್ಳು ಹೇಳುವುದರಿಂದ ಹಿಡಿದು ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯುವವರೆಗೆ ತೇಜಸ್ವಿ ಎಡವಟ್ಟುಗಳು. ಇದೇ ತಪ್ಪು ಜನಸಾಮಾನ್ಯರಿಂದ ಆಗಿದ್ದರೆ ತೇಜಸ್ವಿಗೆ ಸಿಕ್ಕಿದ ವಿನಾಯಿತಿ ಅವರಿಗೂ ಸಿಗುತ್ತಿತ್ತೆ ಎಂದು ಜನರು ಕೇಳಿದ್ದು ಸರಿಯಾಗಿಯೇ ಇದೆ

ಜಸಿಂಡಾ ರಾಜೀನಾಮೆ

ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂಡಾ ಆರ್ಡರ್ನ್ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದು, ಫೆಬ್ರವರಿ 7ರಂದು ಅವರು ಅಧಿಕಾರ ತ್ಯಜಿಸಲಿದ್ದಾರೆ. 42ರ ಹರೆಯದ, ವಿಶ್ವವೇ ಮೆಚ್ಚಿರುವ ನಿಜವಾದ ನಾಯಕಿ, ಅಧಿಕಾರಾವಧಿ ಇನ್ನೂ ಬಾಕಿಯಿರುವಾಗಲೇ, ತಾನಿನ್ನು ಈ ಹುದ್ದೆಯಲ್ಲಿ ಮುಂದುವರಿಯಲು ಸಮರ್ಥಳಲ್ಲ, ಸಮರ್ಥ ನಾಯಕರು ಈ ಹೊಣೆ ಹೊರಲಿ ಎಂದಿದ್ದಾರೆ. ರಾಜಕಾರಣಿಗಳಲ್ಲೇ ತೀರಾ ಅಪರೂಪದ ಅವರ ಈ ನಡೆ ಜಾಗತಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಏನೂ ಮಾಡದೆಯೂ ಎಲ್ಲವನ್ನೂ ಮಾಡಿರುವುದಾಗಿ ಹೇಳಿಕೊಳ್ಳುವ ನಮ್ಮಲ್ಲಿನ ಸರಕಾರಗಳಿಗೆ ಜಸಿಂಡಾ ನಡೆ ಒಂದು ಆದರ್ಶವಾಗಬೇಕಿದೆ. 

ಸಂಸದರ ಲೈಂಗಿಕ ದೌರ್ಜನ್ಯ

ಬಿಜೆಪಿ ಸಂಸದರೂ ಆಗಿರುವ ಭಾರತದ ಕುಸ್ತಿ ಒಕ್ಕೂಟದ (ಡಬ್ಲುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಕಳೆದ ಕೆಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಭಾರತದ ಪದಕ ವಿಜೇತ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಅಂಶು ಮಲಿಕ್ ಮತ್ತು ಬಜರಂಗ್ ಪೂನಿಯಾ ಗಂಭೀರ ಆರೋಪ ಮಾಡಿದ್ದಾರೆ. ಕ್ರೀಡಾಪಟುಗಳು ತಮ್ಮ ವಿರುದ್ಧ ನಡೆದ ದೌರ್ಜನ್ಯ ವಿರೋಧಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಷ್ಟೆಲ್ಲಾ ಆದರೂ ಅವರತ್ತ ತಿರುಗಿನೋಡದ ಪ್ರಧಾನಿ ಮೋದಿ ಹಾಗೂ ಅವರ ಸರಕಾರ, ಈಗ ಭರವಸೆ ಈಡೇರಿಸುವ ಮಾತಾಡಿದೆ. ಕುಸ್ತಿಪಟುಗಳೇನೋ ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ಆದರೆ, ದೇಶದ ಕೀರ್ತಿಪತಾಕೆಯನ್ನು ಹಾರಿಸುವ ಸಾಧನೆ ಮಾಡುವ ಆಟಗಾರ್ತಿಯರನ್ನು ಜವಾಬ್ದಾರಿಯ ಸ್ಥಾನದಲ್ಲಿರುವವರು ನಡೆಸಿಕೊಳ್ಳುವ ರೀತಿಯಾ ಇದು? ಎಂಬ ಪ್ರಶ್ನೆಯೊಂದು ಹಾಗೆಯೇ ಉಳಿದಿದೆ.

ಕ್ರಿಕೆಟ್ ದಾಖಲೆ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ ನೂತನ ವಿಶ್ವ ದಾಖಲೆ ನಿರ್ಮಿಸಿದೆ. ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ಟೀಮ್ ಇಂಡಿಯಾ ದಾಖಲೆಯ 317 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ 2008ರಲ್ಲಿ ಐರ್‌ಲ್ಯಾಂಡ್ ವಿರುದ್ಧ ನ್ಯೂಝಿಲ್ಯಾಂಡ್ ತಂಡವು ಸಾಧಿಸಿದ್ದ 290 ರನ್‌ಗಳ ಅಂತರದ ಗೆಲುವಿನ ದಾಖಲೆ ನುಚ್ಚುನೂರಾಗಿದೆ. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಬಾರಿಸಿ ತವರಿನಲ್ಲಿ ಗರಿಷ್ಠ ಏಕದಿನ ಶತಕಗಳನ್ನು ಬಾರಿಸಿದ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದರು. ವಿಶ್ವಕಪ್ ನಡೆಯಲಿರುವ ವರ್ಷವೇ ಅಗ್ರಗಣ್ಯ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಲಯಕ್ಕೆ ಮರಳಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಖುಷಿ ನೀಡಿದೆ.