ಬಳ್ಳಾರಿ: ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ

Update: 2023-01-22 19:01 GMT

ಬಳ್ಳಾರಿ: ಇಲ್ಲಿನ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದ ಗಾಯಕಿ ಮಂಗ್ಲಿ ಅವರ ಕಾರಿಗೆ ಕಲ್ಲು ತೂರಾಟ ನಡೆದ ಘಟನೆ ಶನಿವಾರ ರಾತ್ರಿ ವರದಿಯಾಗಿದೆ. 

ನಿನ್ನೆ (ಶನಿವಾರ) ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ ಉತ್ಸವದಲ್ಲಿ ಹಾಡಲೆಂದು ಗಾಯಕಿ ಮಂಗ್ಲಿ ಬಂದಿದ್ದರು. ಉತ್ಸವದಲ್ಲಿ ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಭದ್ರತೆಯ ದೃಷ್ಟಿಯಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಇದನ್ನೂ ಓದಿಎಲ್ಲರೂ ವಿಧಾನಸಭೆ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ: ಸಂಸದೆ ಸುಮಲತಾ 

ಪೊಲೀಸರು ಲಾಠಿ ಬೀಸುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಈ ವೇಳೆ ಕೆಲವರು ಮಂಗ್ಲಿ ತೆರಳುತ್ತಿದ್ದ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆನ್ನಲಾಗಿದೆ. ಇದರಿಂದ ಮಂಗ್ಲಿ ಅವರ ಕಾರಿನ ಮುಂಭಾಗದ ಗಾಜಿಗೆ ಹಾನಿಯಾಗಿದೆ.

ಕಲ್ಲು ತೂರಾಟ ನಡೆದಿಲ್ಲ: ಗಾಯಕಿ ಸ್ಪಷ್ಟನೆ

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಮಂಗ್ಲಿ, ನಿನ್ನೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ತಪ್ಪು ಸುದ್ದಿಯನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಕಾರ್ಯಕ್ರಮ ಒಂದು ದೊಡ್ಡ ಯಶಸ್ಸು ಕಂಡಿದ್ದು, ಅದನ್ನು ನೀವು ಫೋಟೋಗಳು ಮತ್ತು ವಿಡಿಯೋಗಳಲ್ಲಿ ನೋಡಿದ್ದೀರಿ. ಕನ್ನಡಿಗರ ಪ್ರೀತಿ ಮತ್ತು ಬೆಂಬಲ ಅಗಾಧವಾಗಿದೆ. ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಇದೆಲ್ಲವೂ ನನ್ನ ಇಮೇಜ್ ಹಾಳುಮಾಡಲಾಗುತ್ತಿದೆ ಮತ್ತು ಈ ರೀತಿಯ ಸುಳ್ಳು ಪ್ರಚಾರವನ್ನು ನಾನು ಖಂಡಿಸುತ್ತೇನೆ ಎಂದು ಪ್ರಕಟನೆ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

Similar News