ಉಚಿತ ವಿದ್ಯುತ್ ನೀಡಿದರೆ ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಪರಿಸ್ಥಿತಿಯೇ ಬರಲಿದೆ: ಸಿಎಂ ಬೊಮ್ಮಾಯಿ

Update: 2023-01-22 13:17 GMT

ಮೈಸೂರು,ಜ.22: ಉಚಿತ ವಿದ್ಯುತ್, ಗೃಹಿಣಿಯರಿಗೆ 2 ಸಾವಿರ ನೀಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದೇ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಲಿದೆ ಎಂದು ಹೇಳಿದರು.

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ರವಿವಾರ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಸುತ್ತೂರು ಗ್ರಾಮಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವೀರಭದ್ರೆಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೆಲಿಪ್ಯಾಡ್ ನಲ್ಲಿ ಮಾತನಾಡಿದರು.

ಸಿದ್ದರಾಮಯ್ಯ ಅವರು ಈ ಹಿಂದೆ 3ರೂ. ಗೆ 30 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದರು ನಂತರ ಅದನ್ನು 7 ಕೆ.ಜಿ.ಗೆ ಇಳಿಸಿದರು ನಂತರ 4 ಕೆ.ಜಿ.ಕೊಡಲು ಪ್ರಾರಂಭಿಸಿದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ 7 ಕೆ.ಜಿ. ಕೊಟ್ಟರು ಇವರ ಟ್ರ್ಯಾಕ್ ರೆಕಾರ್ಡ್ ಏನು ಎಂದು ಗೊತ್ತಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರು ಮಖ್ಯಮಂತ್ರಿ ಆಗಿದ್ದವರು ಎಸ್ಕಾಂ ಗಳ ಪರಿಸ್ಥಿತಿ ಹೇಗಿತ್ತು ಎಂದು ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಅಧಿಕಾರದಿಂದ ಇಳಿದಾಗ ಎಸ್ಕಾಂ ಪರಿಸ್ಥಿತಿ ತೀರ ಹದಗೆಟ್ಟಿತ್ತು ನಾನು ಮುಖ್ಯಮಂತ್ರಿ ಆದ ಮೇಲೆ 8 ಸಾವಿರ ಕೋಟಿ ರೂ. ಕೊಟ್ಟು ಸುಧಾರಣೆ ಮಾಡಿದ್ದೇನೆ.  ಈಗಾಗಲೆ ಕಾಂಗ್ರೆಸ್ ನವರಿಗೆ ಸೋಲುತ್ತೇವೆ ಎಂಬುದು ಗೊತ್ತಾಗಿದೆ.  ಇವರ ಕೈಯಲ್ಲಿ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲದೆ ಸೋಲುವ ಭೀತಿಯಿಂದ 200 ಯುನಿಟ್ ವಿದ್ಯುತ್ ಉಚಿತ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು.

ವೈಯಕ್ತಿಕ ಟೀಕೆ ಇವರ ಸಂಸ್ಕೃತಿ ಏನು ಎಂದು ತೋರಿಸುತ್ತಿದೆ. ವೈಯಕ್ತಿಕ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ, ಮತ್ತು ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಬಾರದು ಎಂದು ನಿರ್ಧರಿಸಿದ್ದೇನೆ.  ಇವರು ನಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ಟೀಕೆ ಮಾಡಲಿ, ನಾವು ಇವರ ಆಡಳಿತದಲ್ಲಿನ ವೈಫಲ್ಯಗಳ ಬಗ್ಗೆ ಟೀಕೆ ಮಾಡುತ್ತೇವೆ. ಆದರೆ ವೈಯಕ್ತಿಕ ಟೀಕೆ ಇವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

Similar News