ನಳಿನ್‍ಕುಮಾರ್ ​ಕಟೀಲ್ ಹೇಳಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

Update: 2023-01-22 13:22 GMT

ಮಂಡ್ಯ, ಜ.22: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಕುಟುಂಬ ವರ್ಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ರವಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿನ ಎಸ್.ಡಿ.ಜಯರಾಂ ವೃತ್ತದಲ್ಲಿ ಕಾರ್ಯಕರ್ತರು ಜಮಾವಣೆಗೊಂಡು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಮಾತನಾಡಿ, ಮಾಜಿ ಪ್ರಧಾನಮಂತ್ರಿ ದೇವೇಗೌಡರ ಬಗ್ಗೆ ಅಗೌರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಕೂಡಲೇ ಕ್ಷಮೆ ಕೇಳಬೇಕು. ಹಾಗೆಯೇ ಬಿಜೆಪಿ ರಾಷ್ಟ್ರೀಯ ವರಿಷ್ಠರು ಬುದ್ದಿ ಹೇಳಬೇಕು ಎಂದು ತಾಕೀತು ಮಾಡಿದರು.

ಬಿಜೆಪಿ ಸರಕಾರ ಬಡವರ ಪರವಾಗಿ, ರೈತರ ಪರವಾಗಿ ಯಾವ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿಲ್ಲ. ನಿರುದ್ಯೋಗ, ಅಗತ್ಯವಸ್ತುಗಳ ಬೆಲೆ ಏರಿಕೆಯೇ ಅವರ ಸಾಧನೆ. ಧರ್ಮ ಧರ್ಮಗಳ ನಡುವೆ ಸಂಘರ್ಷ ತಂದು ಸಮಾಜ ಹಾಳು ಮಾಡುತ್ತಿರುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರು ಬುದ್ದಿ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

Similar News