ಬ್ರೆಝಿಲ್ ಸೇನಾ ಮುಖ್ಯಸ್ಥರ ವಜಾ

Update: 2023-01-22 17:24 GMT

ಬ್ರಸೀಲಿಯಾ, ಜ.22: ಜನವರಿ 8ರಂದು ಬ್ರೆಝಿಲ್ನಲ್ಲಿ  ನಡೆದ ದಂಗೆ ಮತ್ತು ಗಲಭೆಯ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜೂಲಿಯೊ ಸೀಸರ್ ಡಿಅರುಡಾ(Julio Cesar De Arruda)ರನ್ನು ಹುದ್ದೆಯಿಂದ ವಜಾಗೊಳಿಸಿ ಬ್ರೆಝಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡಸಿಲ್ವ(Luiz Inácio Lula da Silva) ಆದೇಶ ಜಾರಿಗೊಳಿಸಿರುವುದಾಗಿ ಸೇನೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಶನಿವಾರ ವರದಿ ಮಾಡಿದೆ.

ಬ್ರೆಝಿಲ್ ನ ಈ ಹಿಂದಿನ ಅಧ್ಯಕ್ಷ ಬೊಲ್ಸನಾರೋ ಅವರ ಅಧಿಕಾರಾವಧಿ ಅಂತ್ಯಗೊಳ್ಳುವ 2 ದಿನಗಳ ಮೊದಲು ಜೂಲಿಯೊ ಸೀಸರ್ ಡಿಅರುಡಾರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು ಮತ್ತು ಹಾಲಿ ಅಧ್ಯಕ್ಷ ಲುಲಾ ಅವರ ಆಡಳಿತ ಇದನ್ನು  ಅನುಮೋದಿಸಿತ್ತು. ಇದೀಗ ವಜಾಗೊಂಡ ಡಿಅರುಡಾ ಸ್ಥಾನದಲ್ಲಿ ಆಗ್ನೇಯ ಸೇನಾ ಕಮಾಂಡರ್ ತೋಮಸ್ ರಿಬೆರಿಯೊ ಪಯಿವಾರನ್ನು ನೇಮಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ಕಳೆದ ಶುಕ್ರವಾರ ಅಧ್ಯಕ್ಷರು ಸೇನಾ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ತೋಮಸ್ ರಿಬೆರಿಯೊ ಕೂಡಾ ಉಪಸ್ಥಿತರಿದ್ದರು. ಆ ಸಂದರ್ಭ ಜೂಲಿಯೊ ಸೀಸರ್ ಡಿಅರುಡಾರನ್ನು ಹುದ್ದೆಯಿಂದ ವಜಾಗೊಳಿಸುವ ಯಾವುದೇ ಸೂಚನೆ ಇರಲಿಲ್ಲ. ಆದರೆ ಶನಿವಾರ ಹಲವು ಉನ್ನತ ಸೇನಾ ಮುಖಂಡರನ್ನು ಅಧ್ಯಕ್ಷರು ವಜಾಗೊಳಿಸಿದ್ದರು.

ಜನವರಿ 8ರಂದು ನಡೆದಿದ್ದ ಗಲಭೆಯಲ್ಲಿ ದೇಶದ ಭದ್ರತಾ ಪಡೆಯೂ ಶಾಮೀಲಾಗಿದೆ ಎಂದು ಅಧ್ಯಕ್ಷರು ಶಂಕೆ ವ್ಯಕ್ತಪಡಿಸಿದ್ದು, ಉನ್ನತ ಮತ್ತು ಸೂಕ್ಷ್ಮ ಹುದ್ದೆಗಳ ಅಧಿಕಾರಿಗಳ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದಿದ್ದರು. ಶುಕ್ರವಾರದ ಸಭೆಯ ಬಳಿಕ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ಜೋಸ್ ಮೂಸಿಯೊ, ಜನವರಿ 8ರ ದಂಗೆಯಲ್ಲಿ ಸಶಸ್ತ್ರ ಪಡೆಗಳು ನೇರವಾಗಿ ಶಾಮೀಲಾಗಿಲ್ಲ. ಆದರೆ ಯಾರಾದರೂ  ಪಾಲ್ಗೊಂಡಿರುವುದು ಪತ್ತೆಯಾದರೆ ಅವರು ದೇಶದ ಜನತೆಗೆ ಉತ್ತರಿಸಬೇಕಾಗಿದೆ ಎಂದಿದ್ದರು.

Similar News